ವಿಜಯೇಂದ್ರ ವಿರುದ್ಧ ದಾಖಲೆಗಳೊಂದಿಗೆ ಹೈಕಮಾಂಡ್ ಭೇಟಿಗೆ ಹೊರಟು ನಿಂತ ಯತ್ನಾಳ್ ಟೀಂ
ಬೆಳಗಾವಿಯಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರು ವಕ್ಫ್ ಭೂಮಿ ಕಬಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ಮಾತನಾಡಿ, ಬೀದರ್ ಜಿಲ್ಲೆಯಿಂದ ಪ್ರಾರಂಭವಾದ ಹೋರಾಟ ಇಂದು ಮುಕ್ತಾಯ ಆಗುತ್ತೆ. ಇಂದು ದೆಹಲಿಗೆ ಹೋಗಿ ಚರ್ಚೆ ಮಾಡಿ ಎರನಡೇ ಹಂತದ ಹೋರಾಟ ಪ್ರಕಟಿಸುತ್ತೇವೆ ಎಂದಿದ್ದಾರೆ.

ಬೆಳಗಾವಿ, ಡಿಸೆಂಬರ್ 01: ಕರ್ನಾಟಕದಲ್ಲಿ ವಕ್ಫ್ (waqf row) ವಿರುದ್ಧ ಹೋರಾಟ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಂಡಾಯ ನಾಯಕರು ಪ್ರತ್ಯೇಕ ಟೀಂ ಕಟ್ಕೊಂಡು ವಕ್ಫ್ ಹಠಾವೋ, ದೇಶ್ ಬಚಾವೋ ಅಭಿಯಾನ ಆರಂಭಿಸಿದ್ದಾರೆ. ಮೊನ್ನೆ ಬೀದರ್‌ನಿಂದ ಆರಂಭವಾಗಿದ್ದ ಅಭಿಯಾನ ಇಂದು ಮುಕ್ತಾಯವಾಗಿದೆ. ಇಂದು ದೆಹಲಿಗೆ ಹೋಗಿ ಚರ್ಚೆ ಮಾಡಿ ಎರನಡೇ ಹಂತದ ಹೋರಾಟ ಪ್ರಕಟಿಸುವುದಾಗಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ವಕ್ಫ್ ಅನ್ನೋದು ಕೆಟ್ಟ ಕಾನೂನು ಅಂತಾ ಗೊತ್ತಿರಲಿಲ್ಲ: ರಮೇಶ್ ಜಾರಕಿಹೊಳಿ
ಬೆಳಗಾವಿ ಗಾಂಧಿ ಭವನದಲ್ಲಿ ವಕ್ಫ್ ಭೂ ಕಬಳಿಕೆ ವಿರೋಧಿಸಿ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಬೀದರ್, ರಾಯಚೂರು, ಯಾದಗಿರಿಯಲ್ಲಿ ಬಹಳ ಅನಾಹುತ ಆಗುವಂತಹದ್ದು ಕಂಡು ಬಂದಿದೆ. ವಕ್ಫ್ ಅನ್ನೋದು ಇಷ್ಟು ಕೆಟ್ಟ ಕಾನೂನು ಅಂತಾ ಗೊತ್ತಿರಲಿಲ್ಲ. ಯತ್ನಾಳ್ ಅವರು ಆರಂಭಿಸಿದ ಮೇಲೆ ನಮಗೆ ಗೊತ್ತಾಯಿತು ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ತಾರಕಕ್ಕೇರಿದ ಬಣ ಬಡಿದಾಟ: ಎರಡೂ ಬಣಗಳ ರಹಸ್ಯ ಸಭೆ
ಇದು ಸಂಪೂರ್ಣವಾಗಿ ಭಾರತದಿಂದ ತೊಲಗಬೇಕು ಅಂತ ಪ್ರಧಾನಿಯವರು ಮಂಡನೆ ಮಾಡಿದ್ದಾರೆ. ಮುಸ್ಲಿಂರ ವಿರೋಧ ಮಾಡುತ್ತಿದ್ದೇವೆ ಅಂತಾ ಕೆಲವರು ಮಾತಾಡುತ್ತಿದ್ದಾರೆ. ಇದರಲ್ಲಿ ಮುಸ್ಲಿಂ ರ ಭೂಮಿಯನ್ನ ಮುಸ್ಲಿಂ ನಾಯಕರು ತಿಂದಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಅಲ್ಲಾ ಇಡೀ ದೇಶದ ಮೂಲೆ ಮೂಲೆಗೆ ಅನ್ಯಾಯ ಆಗಿದೆ. ಅನ್ಯಾಯ ಆಗುತ್ತಿರುವ ಕರಾಳ ಕಾನೂನು ಹೋಗಬೇಕು ಅಂತಾ ಹೋರಾಟ ಮಾಡಲಾಗುತ್ತಿದೆ. ನಾಳೆ ದೆಹಲಿಗೆ ಹೋಗಿ ಭೇಟಿಯಾಗಿ ವರದಿ ನೀಡುತ್ತೇವೆ. ನಾಳೆ ಮಧ್ಯಾಹ್ನ ನಮ್ಮ ತಂಡ ಯಾರು ಯಾರಿಗೆ ಭೇಟಿಯಾಗಿ ಮನವಿ ಕೊಡಬೇಕು ಅಂತಾ ತಿಳಿಸುತ್ತೇವೆ ಎಂದು ಹೇಳಿದ್ದಾರೆ.
ಕೊನೆಗೆ ದಾವಣಗೆರೆಯಲ್ಲಿ ದೊಡ್ಡ ಸಮಾವೇಶವನ್ನ ಬಿಜೆಪಿಯಿಂದ ಮಾಡುತ್ತೇವೆ. ಹತ್ತು ಲಕ್ಷ ಜನರನ್ನ ಸೇರಿಸಿ ಸಮಾವೇಶ ಮಾಡುತ್ತೇವೆ. ಈ ಸಮಾವೇಶಕ್ಕೆ ಬೆಳಗಾವಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಒಂದು ಕೋಟಿ ರೂ ನಿಧಿ ಕೊಡುತ್ತೇವೆ ಎಂದಿದ್ದಾರೆ.
ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ವಕ್ಪ್ ಮಾಸ್ಟರ್ ಮೈಂಡ್. ವಕ್ಫ್ ಹೋರಾಟದ ಬಗ್ಗೆ ಎಲ್ಲರೂ ಗಟ್ಟಿಯಾಗಿ ನಿಲ್ಲೋಣ. ಬೆಳಗಾವಿ ಜಿಲ್ಲೆಯ ಹೋರಾಟದ ನೆಲ. ನಮ್ಮ ಹೋರಾಟಕ್ಕೆ ಎಲ್ಲರೂ ಸಪೋರ್ಟ್ ಮಾಡಬೇಕು. ವಿರೋಧಿಗಳ ಸುಳ್ಳು ಪ್ರಚಾರಕ್ಕೆ ಕಿವಿಗೋಡಬಾರದು. ಯಾರು ಸ್ವಾರ್ಥಕ್ಕಾಗಿ ದೆಹಲಿಗೆ ಹೋಗ್ತಾರೆ, ಮನೆಯಲ್ಲಿ ಕುಳಿತುಕೊಳ್ಳತ್ತಾರೆ ನೋಡಬೇಕು ಎಂದು ಹೇಳುವ ಮೂಲಕ ವಿಜಯೇಂದ್ರ ದೆಹಲಿ ಭೇಟಿ ಕುರಿತು ರಮೇಶ್ ಟಾಂಗ್ ನೀಡಿದ್ದಾರೆ.
ದೆಹಲಿಗೆ ಶಿಫ್ಟ್ ಆಗುತ್ತಾ ಬಿಜೆಪಿ ಆಂತರಿಕ ಭಿನ್ನಮತ
ರಾಜ್ಯ ಬಿಜೆಪಿ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿದೆ. ಹೀಗಾಗಿ ಭಿನ್ನಮತ ದೆಹಲಿಗೆ ಶಿಫ್ಟ್ ಆಗುತ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಬೆಳಗಾವಿ ಖಾಸಗಿ ಹೋಟೆಲ್ನಲ್ಲಿ ಯತ್ನಾಳ್ ಬಣದ ಸಭೆ ಮಾಡಿದ್ದು, ನಾಳೆ ಹೈಕಮಾಂಡ್ ಭೇಟಿಗೆ ಯತ್ನಾಳ್ ಬಣ ಸಮಯ ಪಡೆದುಕೊಂಡಿದ್ದು ಎನ್ನಲಾಗುತ್ತಿದೆ. ವರಿಷ್ಠರ ಜೊತೆ ಯತ್ನಾಳ್, ರಮೇಶ್ ಮಾತುಕತೆ ಸಾಧ್ಯತೆ ಇದೆ.
ಇದನ್ನೂ ಓದಿ: 2028ರ ವಿಧಾನಸಭಾ ಚುನಾವಣೆ ವೇಳೆಗೆ ಬಂಡಾಯ ಏಳುತ್ತೇನೆಂದ ರಮೇಶ್ ಜಾರಕಿಹೊಳಿ: ಕಾರಣ ಇಲ್ಲಿದೆ
ಆಡಳಿತ ಪಕ್ಷದ ಜೊತೆ ಹೊಂದಾಣಿಕೆ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ. ಡಿಜಿಟಲ್ ಎವಿಡೆನ್ಸ್ ಸಹಿತ ದಾಖಲೆ ಸಲ್ಲಿಸಲು ಚಿಂತನೆ ನಡೆಸಿದ್ದು, ಯತ್ನಾಳ್ಗೆ ದಾಖಲೆ ಸಲ್ಲಿಸುವ, ವಿವರಣೆ ನೀಡುವ ಮತ್ತು ರಮೇಶ್ಗೆ ಮುಂದಿನ ರಾಜಕೀಯ ಹೋರಾಟದ ಜವಾಬ್ದಾರಿ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.