ಚಿಕ್ಕಮಗಳೂರು: ಸಾಮಾನ್ಯವಾಗಿ ಬಾಲ್ಯದಲ್ಲಿ ಮಕ್ಕಳು ಮಾತನಾಡುವುದೇ ಮನೆಯವರಿಗೆ ಮಕ್ಕಳು ಮಾಡಿದ ದೊಡ್ಡ ಸಾಧನೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಗೌಡನಹಳ್ಳಿಯ 3 ವರ್ಷದ ಬಾಲಕ ಚಿಕ್ಕ ವಯಸ್ಸಿನಲ್ಲೇ ದಾಖಲೆ ಸೃಷ್ಟಿ ಮಾಡಿದ್ದಾನೆ. ಸಾಮಾನ್ಯ ಜ್ಞಾನ, ದೇಶದ ರಾಜ್ಯಗಳ ರಾಜಧಾನಿ, ತಿಂಗಳು, ವಾರ, ಜ್ಞಾನಪೀಠ ಪುರಸ್ಕೃತರ ಹೆಸರು, ಹತ್ತಾರು ಶ್ಲೋಕ, ಇಂಗ್ಲೀಷ್ ರೈಮ್ಸ್, ಆಕ್ಷನ್ ವರ್ಡ್, ಪ್ರಾಣಿ, ಪಕ್ಷಿಗಳ ಧ್ವನಿಯ ಅನುಕರಣೆ, ಹೀಗೆ ಸಣ್ಣ ವಯಸ್ಸಿನಲ್ಲೇ ಸಾಕಷ್ಟು ವಿಷಯಗಳಲ್ಲಿ ಜ್ಞಾನ ಸಂಪಾದನೆ ಮಾಡಿದ್ದಾನೆ. ಗೌಡನಹಳ್ಳಿಯ ಶಿವು ಮತ್ತು ದೀಪಿಕಾ ದಂಪತಿಯ ಪುತ್ರ ಭುವನ್ಗೆ ಈಗ ಮೂರು ವರ್ಷ ಒಂದು ತಿಂಗಳು ಆಗಿದೆ. ಆದರೆ ಭುವನ್ ಜ್ಞಾನ ಶಕ್ತಿಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಈತನ ಹೆಸರು ಸೇರ್ಪಡೆಯಾಗಿದೆ.
ಭುವನ್ ಏನೇ ಹೇಳಿಕೊಟ್ಟರು ಅದನ್ನು ಮನಸ್ಸಲ್ಲಿ ಅಚ್ಚಳಿಯದಂತೆ ಹಚ್ಚೆ ಹಾಕಿಸಿಕೊಳ್ಳುವ ರೀತಿಯಲ್ಲಿ ಜತನ ಮಾಡಿಕೊಂಡು ಕಲಿಯುತ್ತಿದ್ದ. ಆ ಬಳಿಕ ಆತನೇ ಪೋಷಕರಿಗೆ ಅದನ್ನು ನೆನಪಿಸುತ್ತಿದ್ದ. ಇದನ್ನು ಗಮನಿಸಿದ ಪೋಷಕರು ತಮ್ಮ ಮಗನಲ್ಲಿರುವ ವಿಶೇಷ ಜ್ಞಾನಕ್ಕೆ ನೀರೆರೆಯಲು ತೀರ್ಮಾನ ಮಾಡಿದ್ದಾರೆ. ಅಂದಿನಿಂದ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಹೇಳಿಕೊಟ್ಟಿದ್ದಾರೆ ಮತ್ತು ಭುವನ್ ಕೂಡ ಅದನ್ನು ಮರೆಯದೇ ಹಾಗೆಯೇ ಹೇಳಿದ್ದಾನೆ. ಮಗನ ಬುದ್ದಿಮಟ್ಟವನ್ನು ಕಂಡು ನಮಗೆ ಖುಷಿಯಾಗಿದೆ. ಅಲ್ಲದೆ ಭುವನ್ ನೆನಪಿನ ಶಕ್ತಿ ಕಂಡು ಚಿಕ್ಕಮಗಳೂರಿನ ಪ್ರತಿಷ್ಠಿತ ಶಾಲೆ ಸಾಯಿ ಎಂಜಲ್ ಉಚಿತ ಶಿಕ್ಷಣವನ್ನು ಕೊಡಲು ಮುಂದೆ ಬಂದಿದೆ ಎಂದು ಭುವನ್ ತಂದೆ ಶಿವು ತಿಳಿಸಿದ್ದಾರೆ.
ಭುವನ್ ಎಷ್ಟು ಚೂಟಿ ಇದ್ದಾನೆ ಎಂದರೆ ಒಂದೇ ಕಡೆ ಗಮನ ಕೊಡುವುದಿಲ್ಲ. ಬದಲಾಗಿ ಒಂದೇ ಬಾರಿಗೆ ಬೇರೆ ಬೇರೆ ಕಡೆ ಗಮನ ಹರಿಸುತ್ತಾನೆ. ಏನೇ ಕೇಳಿದರೂ ಅರಳು ಹುರಿದಂತೆ ಪಟಪಟನೇ ಉತ್ತರ ಕೊಡುತ್ತಾನೆ. ಸದ್ಯ ಬಾಲಕನ ಬುದ್ಧಿಶಕ್ತಿಗೆ ಮೆಚ್ಚಿ ಅವನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಒಲಿದು ಬಂದಿದೆ. ಭವಿಷ್ಯದಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನು ಭುವನ್ ಮಾಡಲಿ ಎನ್ನುವುದು ನಮ್ಮ ಆಶಯ.
ಇದನ್ನೂ ಓದಿ:
17 ಚಾಕ್ಪೀಸ್ಗಳ ಮೇಲೆ ರಾಷ್ಟ್ರಗೀತೆಯ ಕೆತ್ತನೆ.. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಯುವಕನ ಸಾಧನೆ
Guinness world record: ಗಿನ್ನಿಸ್ ದಾಖಲೆಗೆ ಸಜ್ಜಾಗುತ್ತಿದ್ದಾನೆ ದಾವಣಗೆರೆಯ ಮೂರು ವರ್ಷದ ಬಾಲಕ
Published On - 9:58 am, Fri, 9 July 21