ಹಾವೇರಿ: ನಗರದ ವಿವೇಕಾನಂದ ಇಂಗಳಗಿ ಎಂಬ ಯುವಕ ಹಾವೇರಿ ನಗರದಿಂದ ಅಯೋಧ್ಯೆಯ ರಾಮ ಮಂದಿರದವರೆಗೆ ಸೈಕಲ್ ಮೇಲೆ ಯಾತ್ರೆ ಹೊರಟಿದ್ದಾರೆ. ನಗರದ ಹುಕ್ಕೇರಿ ಮಠದ ಆವರಣದಿಂದ ಮಠದ ಸದಾಶಿವ ಸ್ವಾಮೀಜಿಗಳ ಆಶೀರ್ವಾದ ಪಡೆದು ವಿವೇಕಾನಂದ ಸೈಕಲ್ ಯಾತ್ರೆ ಆರಂಭಿಸಿದರು. ವಿವೇಕಾನಂದ ಅಪ್ಪಟ ರಾಮ ಭಕ್ತ. ಹೀಗಾಗಿ ಹನುಮನಿಂದ ರಾಮನ ಕಡೆಗೆ ಯಾತ್ರೆ ಎಂಬ ಶೀರ್ಷಿಕೆಯಲ್ಲಿ ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ಹಾವೇರಿಯಿಂದ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಅಲ್ಲಿಂದ ಗೆಳೆಯನೊಂದಿಗೆ ಸೇರಿಕೊಂಡು ವಿವೇಕಾನಂದ ಅಯೋಧ್ಯೆಯತ್ತ ಸೈಕಲ್ ಯಾತ್ರೆ ಆರಂಭಿಸಿದರು. ಇಪ್ಪತ್ತರಿಂದ ಇಪ್ಪತ್ತೊಂದು ದಿನಗಳಲ್ಲಿ ಅಂದರೆ ಮೇ 7 ಅಥವಾ ಮೇ 8ರಂದು ಅಯೋಧ್ಯೆ ತಲುಪಲಿದ್ದಾರೆ.
ಪ್ರತಿದಿನ ನೂರು ಕಿಲೋಮೀಟರ್ ಯಾತ್ರೆ
ಕೊರೊನಾ ಮುಕ್ತ ಭಾರತ, ದೇಶವನ್ನು ಪ್ರಾಮಾಣಿಕ ಮಾಡಲು, ಕರ್ನಾಟಕದ ಜನತೆಯ ಒಳಿತಿಗಾಗಿ, ಜಿಲ್ಲೆಯ ಅಭಿವೃದ್ಧಿ ಸೇರಿದಂತೆ ಹಲವು ಸಂಕಲ್ಪಗಳೊಂದಿಗೆ ಸೈಕಲ್ ಯಾತ್ರೆ ಆರಂಭಿಸಿರುವ ಯುವಕ ವಿವೇಕಾನಂದ, ಪ್ರತಿದಿನ ನೂರು ಕಿಲೋಮೀಟರ್ ಯಾತ್ರೆ ಮಾಡಲಿದ್ದಾರೆ. ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಸೈಕಲ್ ಯಾತ್ರೆ ಮಾಡಲಿದ್ದಾರೆ. ಬೆಳಗಿನ ಸೈಕಲ್ ಯಾತ್ರೆ ನಂತರ ಸಂಜೆ ಆಗುವವರೆಗೆ ವಿಶ್ರಾಂತಿ ಪಡೆದು, ಸಂಜೆ ಆಗುತ್ತಿದ್ದಂತೆ ಮತ್ತೆ ಸೈಕಲ್ ಯಾತ್ರೆ ಆರಂಭಿಸುತ್ತಾರೆ.
ಯಾತ್ರೆಗೆ ಶುಭ ಹಾರೈಸಿ ಬೀಳ್ಕೊಟ್ಟ ಜನರು
ನಗರದ ಹುಕ್ಕೇರಿ ಮಠದ ಆವರಣದಲ್ಲಿ ಇಪ್ಪತ್ತೆಂಟು ವರ್ಷದ ಯುವಕ ವಿವೇಕಾನಂದ ಆರಂಭಿಸಿದ ಸೈಕಲ್ ಯಾತ್ರೆಗೆ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಯಾಲಕ್ಕಿ ಮಾಲೆ ಹಾಕಿ, ಶಾಲು ಹೊದಿಸಿ ಸೈಕಲ್ ಯಾತ್ರೆಗೆ ಚಾಲನೆ ನೀಡಿದರು. ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಸಾಧಕ ರತ್ನ ತಂಡದ ಗಣೇಶ ರಾಯ್ಕರ ಸೇರಿದಂತೆ ಹಲವರು ಸೈಕಲ್ ಯಾತ್ರೆ ಹೊರಟ ವಿವೇಕಾನಂದನಿಗೆ ಶುಭ ಹಾರೈಸಿ ಯಾತ್ರೆಯನ್ನು ಬೀಳ್ಕೊಟ್ಟರು.
ಕೊರೊನಾ ಮುಕ್ತ ಭಾರತ ಸೇರಿದಂತೆ ಹಲವು ಸಂಕಲ್ಪಗಳೊಂದಿಗೆ ಹನುಮನಿಂದ ರಾಮನ ಕಡೆಗೆ ಎಂಬ ಶೀರ್ಷಿಕೆ ಇಟ್ಟುಕೊಂಡು ಸೈಕಲ್ ಯಾತ್ರೆ ಹೊರಡುತ್ತಿದ್ದೇನೆ. ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಅಲ್ಲಿಂದ ಗೆಳೆಯನೊಂದಿಗೆ ಅಯೋಧ್ಯೆಗೆ ಸೈಕಲ್ ಯಾತ್ರೆ ಹೊರಟಿದ್ದೇನೆ. ಮೇ ಏಳು ಅಥವಾ ಎಂಟರಂದು ಸೈಕಲ್ ಯಾತ್ರೆ ಮೂಲಕ ಅಯೋಧ್ಯೆಯನ್ನು ತಲುಪಲಿದ್ದೇನೆ. ಯಾತ್ರೆಗೆ ಹಲವು ಗೆಳೆಯರು ಶುಭ ಹಾರೈಸಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸೈಕಲ್ ಯಾತ್ರೆ ಹೊರಟ ವಿವೇಕಾನಂದ ಇಂಗಳಗಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ
ಡಿ ಬಾಸ್ ಫ್ಯಾನ್ಸ್ ಹಾಗು ಯಶ್ ಫ್ಯಾನ್ಸ್‌ಗೆ ಮಂಗ್ಲಿ ಏನ್ ಹೇಳಿದ್ರು ಗೊತ್ತಾ…?