AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ 2ನೇ ಅಲೆ: ಮಕ್ಕಳು ಮತ್ತು ಯುವಕರಲ್ಲಿ ಹೆಚ್ಚುತ್ತಿದೆ ಸೋಂಕು; ಪರಿಸ್ಥಿತಿ ಕೈ ಮೀರುವ ಸೂಚನೆ ಎಂದ ತಜ್ಞರು

ಕೊರೊನಾ ಮೊದಲ ಅಲೆ ಹಾಗೂ ಎರಡನೇ ಅಲೆ ನಡುವಣ ಹಲವು ವ್ಯತ್ಯಾಸಗಳು ಗೋಚರಿಸುತ್ತಿದ್ದು ಬೆಂಗಳೂರು ನಗರದಲ್ಲಿ ಕಳೆದ ಬಾರಿ ಶೇ.0.7ರಷ್ಟಿದ್ದ ಸೋಂಕಿನ ಪ್ರಮಾಣ ಈ ಬಾರಿ ಶೇ.7ಕ್ಕೆ ಏರಿಕೆಯಾಗಿದೆ. ಅಂದರೆ ಸೋಂಕು ಏರಿಕೆ ಪ್ರಮಾಣದಲ್ಲಿ 10 ಪಟ್ಟು ಹೆಚ್ಚಾಗಿದೆ.

ಕೊರೊನಾ 2ನೇ ಅಲೆ: ಮಕ್ಕಳು ಮತ್ತು ಯುವಕರಲ್ಲಿ ಹೆಚ್ಚುತ್ತಿದೆ ಸೋಂಕು; ಪರಿಸ್ಥಿತಿ ಕೈ ಮೀರುವ ಸೂಚನೆ ಎಂದ ತಜ್ಞರು
ಪ್ರಾತಿನಿಧಿಕ ಚಿತ್ರ
Skanda
| Updated By: shruti hegde|

Updated on: Apr 15, 2021 | 9:47 AM

Share

ದೇಶಾದ್ಯಂತ ಕೊರೊನಾ ಸೋಂಕು ನಿರೀಕ್ಷೆಗೂ ಮೀರಿ ಹಬ್ಬುತ್ತಿದೆ. ಸೋಂಕಿತರ ನಿಯಂತ್ರಣಕ್ಕೆ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿದ್ದು, ಬಹುತೇಕ ಎಲ್ಲಾ ರಾಜ್ಯಗಳೂ ಕಠಿಣ ನಿಯಮಾವಳಿಗಳ ಮೊರೆ ಹೋಗುತ್ತಿವೆ. ಕರ್ನಾಟಕ ರಾಜ್ಯದಲ್ಲಿ ನಿನ್ನೆ ಒಂದೇ ದಿನ 11 ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದು ಹೀಗೆಯೇ ಮುಂದುವರೆದಲ್ಲಿ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಜನರಿಗಿದ್ದ ಭಯ ಈಗ ಕಡಿಮೆಯಾಗಿದೆ. ಬೇರೆ ಬೇರೆ ಒತ್ತಡಗಳಿಗೆ ಸಿಲುಕಿರುವ ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ವ್ಯವಸ್ಥೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಿರುವ ಜನಸಾಮಾನ್ಯರಿಗೆ ಕೊರೊನಾ ಸೋಂಕಿನ ಎರಡನೇ ಅಲೆಯ ಗಂಭೀರತೆ ಅರ್ಥವಾಗುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ಮೇ ತಿಂಗಳ ವೇಳೆಗೆ ಅತ್ಯಂತ ಕಠಿಣ ಸ್ಥಿತಿಗೆ ಹೊರಳಲಿದ್ದೇವೆ ಎನ್ನುತ್ತಿದ್ದಾರೆ ತಜ್ಞರು.

ಕೊರೊನಾ ಮೊದಲ ಅಲೆ ಹಾಗೂ ಎರಡನೇ ಅಲೆ ನಡುವಣ ಹಲವು ವ್ಯತ್ಯಾಸಗಳು ಗೋಚರಿಸುತ್ತಿದ್ದು ಬೆಂಗಳೂರು ನಗರದಲ್ಲಿ ಕಳೆದ ಬಾರಿ ಶೇ.0.7ರಷ್ಟಿದ್ದ ಸೋಂಕಿನ ಪ್ರಮಾಣ ಈ ಬಾರಿ ಶೇ.7ಕ್ಕೆ ಏರಿಕೆಯಾಗಿದೆ. ಅಂದರೆ ಸೋಂಕು ಏರಿಕೆ ಪ್ರಮಾಣದಲ್ಲಿ 10 ಪಟ್ಟು ಹೆಚ್ಚಾಗಿದೆ. ಸಾಧಾರಣವಾಗಿ ಯಾವುದೇ ವೈರಾಣು ರೂಪಾಂತರಗೊಂಡಾಗ ಅದರ ಶಕ್ತಿ ಕುಗ್ಗಬೇಕು. ಆದರೆ, ಕೊರೊನಾ ವೈರಾಣುವಿನ ವಿಚಾರದಲ್ಲಿ ಈ ಲೆಕ್ಕಾಚಾರ ತಲೆಕೆಳಗಾಗಿದ್ದು, ಎರಡನೇ ಅಲೆಯ ಸೋಂಕು ಮೊದಲಿಗಿಂತಲೂ ಹೆಚ್ಚು ಪ್ರಭಾವ ಬೀರುವ ಲಕ್ಷಣಗಳನ್ನು ತೋರ್ಪಡಿಸುತ್ತಿದೆ.

ಈ ವಿಚಾರದ ಬಗ್ಗೆ ಅವಲೋಕಿಸಿರುವ ತಜ್ಞರು ಕೊರೊನಾ ಕೇವಲ ರೂಪಾಂತರಗೊಂಡಿದ್ದರೆ ಹೀಗಾಗುವ ಸಾಧ್ಯತೆ ಕಡಿಮೆ. ಪ್ರಸ್ತುತ ಸ್ಥಿತಿಗತಿಯನ್ನು ನೋಡಿದರೆ ವೈರಾಣುವಿನ ಬೇರೆ ಪ್ರಬೇಧವೇ ಬಂದಿರುವ ಸಾಧ್ಯತೆ ಇದೆ ಎನ್ನುವ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ. ಈ ಸೋಂಕು ಹಬ್ಬುತ್ತಿರುವ ವೇಗ, ದೇಹದ ಮೇಲೆ ಬೀರುತ್ತಿರುವ ಪ್ರಭಾವ ಹಾಗೂ ಇದರ ಲಕ್ಷಣಗಳನ್ನು ಗಮನಿಸಿದರೆ ಇದು ಶಕ್ತಿಗುಂದಿದ ವೈರಾಣುವಿನಂತೆ ಇಲ್ಲ ಎಂದು ಹೇಳುತ್ತಿದ್ದಾರೆ.

ಯುವಕರು ಮತ್ತು ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಸೋಂಕು ಇನ್ನೊಂದು ಆತಂಕಕಾರಿ ಸಂಗತಿ ಎಂದರೆ ಕೊರೊನಾ ಮೊದಲ ಅಲೆಯ ವೇಳೆಗೆ ಸೋಂಕು ಹೆಚ್ಚಾಗಿ ಹಿರಿಯ ನಾಗರಿಕರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈ ಬಾರಿ ಯುವಕರಲ್ಲಿ ಸೋಂಕು ಅಧಿಕ ಪ್ರಮಾಣದಲ್ಲಿ ಪತ್ತೆಯಾಗುತ್ತಿದೆ. ಬೆಂಗಳೂರಿನಲ್ಲಿ ಯುವಕರೇ ಅತಿ ಹೆಚ್ಚು ಸೋಂಕಿತರಾಗಿದ್ದು, 20 ರಿಂದ 35ನೇ ವಯಸ್ಸಿನವರು ಸೋಂಕಿಗೆ ತುತ್ತಾಗಿದ್ದು ಹೆಚ್ಚು ಎಂಬ ಅಂಕಿ ಅಂಶಗಳು ಹೊರಬಿದ್ದಿವೆ. ಜೊತೆಗೆ, ಕಳೆದ ಬಾರಿ 10 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಾಣಿಸಿಕೊಂಡಿದ್ದ ಸೋಂಕು ಈ ಬಾರಿ ಅಧಿಕ ಪ್ರಮಾಣದಲ್ಲಿ ಕಂಡುಬಂದಿದೆ. ಈ ಮೂಲಕ ಮಕ್ಕಳಿಗೆ ಸೋಂಕು ತಗುಲದೇ ಇರಲು ಅವರಿಗೆ ಚಿಕ್ಕ ವಯಸ್ಸಿನಲ್ಲಿ ನೀಡಲಾದ ಚುಚ್ಚುಮದ್ದುಗಳು ಕಾರಣ ಎಂಬ ಹಲವು ತಜ್ಞರ ಅಭಿಪ್ರಾಯಕ್ಕೆ ಸವಾಲು ಎದುರಾದಂತೆ ಆಗಿದೆ.

ತಜ್ಞರು ಹೇಳುವಂತೆ ಯುವಕರು ಮತ್ತು ಮಕ್ಕಳು ಕಳೆದ ವರ್ಷಕ್ಕಿಂತಲೂ ಈ ಬಾರಿ ಜನಸಂದಣಿ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕೊರೊನಾ ನಿಯಮಾವಳಿ ಪಾಲನೆಯಲ್ಲಿ ಹಿಂದೆ ಬಿದ್ದಿರುವುದರಿಂದ ಹೀಗಾಗಿರುವ ಸಾಧ್ಯತೆಯೂ ಇರಬಹುದು. ಮೇಲಾಗಿ, ಈಗ ಕಾಣಿಸಿಕೊಂಡಿರುವ ವೈರಾಣು ಕಳೆದ ಬಾರಿಯದ್ದಕ್ಕಿಂತ ಶಕ್ತಿ ಶಾಲಿಯಾಗಿದ್ದರೆ ಅದು ಕೂಡಾ ಮಕ್ಕಳಿಗೆ ಹಾಗೂ ಯುವಕರಿಗೆ ಸೋಂಕು ತಗುಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಅಂದಾಜಿಸಲಾಗಿದೆ.

ವೈದ್ಯರ ಕಡೆಯಿಂದ ಪರಿಸ್ಥಿತಿ ನಿಭಾಯಿಸಲು ಹಾಗೂ ಸೋಂಕು ಹಬ್ಬುವುದನ್ನು ತಡೆಗಟ್ಟಲು ಲಾಕ್​ಡೌನ್​ನಂತಹ ಕಠಿಣ ನಿರ್ಧಾರದ ಅಗತ್ಯವಿದೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಬಹುಮುಖ್ಯವಾಗಿ ಜನರು ಕೊರೊನಾ ಬಗ್ಗೆ ಗಂಭೀರತೆಯನ್ನು ಕಳೆದುಕೊಂಡಿರುವುದರಿಂದ ಈ ವಿಚಾರದಲ್ಲಿ ಕಠಿಣ ನಿರ್ಧಾರವನ್ನೇ ತಾಳಬೇಕಿದೆ ಎನ್ನುತ್ತಿದ್ದಾರೆ. ಆದರೆ, ಲಾಕ್​ಡೌನ್ ಮೊರೆ ಹೋದರೆ ಆರ್ಥಿಕ ಚಟುವಟಿಕೆಗಳಿಗೆ ಕೊಡಲಿ ಏಟು ಬಿದ್ದು ಮತ್ತೆ ಸರ್ಕಾರದ ಮೇಲೆ ನಷ್ಟದ ಹೊರೆ ಹೆಚ್ಚುವುದರಿಂದ ಈ ವಿಷಮ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕಾದುನೋಡಬೇಕಿದೆ.

ಪೂರಕ ಮಾಹಿತಿ: ಡಾ.ಸುನಿಲ್​​

ಇದನ್ನೂ ಓದಿ: ಕೊರೊನಾದಿಂದ ಉಸಿರಾಟದ ಸಮಸ್ಯೆಗೆ ಸಿಲುಕಿದವರಿಗೆ ರೆಮ್​​ಡೆಸಿವರ್​ ನೀಡುವುದೇಕೆ? ಯಾರಿಗೆ ಇದು ಅತ್ಯವಶ್ಯಕ? 

ಹೆಚ್ಚಿನ ಕೊರೊನಾ ಸೋಂಕಿತರು ದೈಹಿಕವಾಗಿ ಚಟುವಟಿಕೆಗಳಿಂದ ಕೂಡಿರಲಿಲ್ಲ; ಅಧ್ಯಯನದಲ್ಲಿ ಹೊರಬಿತ್ತು ಕಟು ಅಂಶ

(Covid 19 Second wave is attacking youth and Children mostly and Experts say it is alarming situation)