ಚಿಕ್ಕಬಳ್ಳಾಪುರ: ಬಸ್ನಲ್ಲಿ ಪ್ರಯಾಣಿಸುವಾಗ ಮಾಸ್ಕ್ (Mask) ಧರಿಸಬೇಕು ಎಂದು ಹೇಳಿದ್ದಕ್ಕೆ ಯುವಕರಿಬ್ಬರು ಕೆಎಸ್ಆರ್ಟಿಸಿ (KSRTC) ಬಸ್ ನಿರ್ವಾಹಕನ ಮೇಲೆ ಹಲ್ಲೆ (Assault) ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕೋಲಾರದಿಂದ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದ ಮುಳಬಾಗಿಲು ಡಿಪೋಗೆ ಸೇರಿದ ಕೆಎ 07 ಎಫ್ 1608 ಸಂಖ್ಯೆಯ ಬಸ್ನ ಕಂಡಕ್ಟರ್ ಎಂ.ಸಿ.ಕೃಷ್ಣಯ್ಯ ಅವರ ಮೇಲೆ ಯುಕರಿಬ್ಬರು ಗಂಭೀರ ಹಲ್ಲೆ ನಡೆಸಿದ್ದು, ಕೃಷ್ಣಯ್ಯ ಅವರ ಹಲ್ಲು ಮುರಿದಿದ್ದಾರೆ. ಅಲ್ಲದೇ, ಮುಖಮೂತಿ ನೋಡದೇ ಥಳಿಸಿ, ಎದೆ ಭಾಗಕ್ಕೆ ಗುದ್ದಿ ಹಲ್ಲೆ ಮಾಡಿರುವುದರಿಂದ ಗಾಯಗೊಂಡ ಕೃಷ್ಣಪ್ಪ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕೊರೊನಾ ಎರಡನೇ ಅಲೆ ಕೊಂಚ ಇಳಿಮುಖವಾಗಿದೆ ಎಂದ ಮಾತ್ರಕ್ಕೆ ಅಪಾಯದಿಂದ ಪಾರಾಗಿದ್ದೇವೆ ಎಂದು ಅರ್ಥವಲ್ಲ. ಡೆಲ್ಟಾ ರೂಪಾಂತರಿ ಹಾಗೂ ಮೂರನೇ ಅಲೆ ಯಾವ ಕ್ಷಣದಲ್ಲಿ ಬೇಕಿದ್ದರೂ ಪರಿಸ್ಥಿತಿಯನ್ನು ಗಂಭೀರವಾಗಿಸಬಹುದು ಎಂದು ತಜ್ಞರು ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಹೀಗಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಹೇಳಿದ್ದಾರೆ. ಆದರೆ, ಅನ್ಲಾಕ್ ಆದ ತಕ್ಷಣ ಜನರು ಕೊರೊನಾ ನಿಯಮಾವಳಿಗಳನ್ನೇ ಮರೆಯುತ್ತಿದ್ದು, ಅದನ್ನು ನೆನಪಿಸಿದ ತಪ್ಪಿಗೆ ಕೆಎಸ್ಆರ್ಟಿಸಿ ನಿರ್ವಾಹಕ ಕೃಷ್ಣಪ್ಪ ಪೆಟ್ಟು ತಿನ್ನುವಂತಾಗಿದೆ.
ಚಿಕ್ಕಬಳ್ಳಾಫುರ ತಾಲೂಕಿನ ಚದಲಪುರದ ಬಳಿ ಬಸ್ ಹತ್ತಿದ್ದ ಯುವಕರು ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ನಿರ್ವಾಹಕ ಎಂ.ಸಿ.ಕೃಷ್ಣಪ್ಪ ಯುವಕರನ್ನು ಪ್ರಶ್ನಿಸಿದ್ದಾರೆ. ಆದರೆ, ಪ್ರಶ್ನಿಸಿದ್ದನ್ನೇ ತಪ್ಪು ಎಂಬಂತೆ ವರ್ತಿಸಿದ ಯುವಕರು ಕೃಷ್ಣಪ್ಪ ಅವರೊಂದಿಗೆ ಜಗಳಕ್ಕೆ ನಿಂತಿದ್ದಾರೆ. ಮಾಸ್ಕ್ ಧರಿಸಬೇಕು ಎಂದು ಕೃಷ್ಣಪ್ಪ ಹೇಳಿದಾಗ ಹಲ್ಲೆ ಮಾಡಿದ ಯುವಕರು ನಿರ್ವಾಹಕರ ಮುಖ ಮೂತಿ ನೋಡದೇ ಥಳಿಸಿ, ಎದೆ ಭಾಗಕ್ಕೆ ಗುದ್ದಿದ್ದಾರೆ. ಅಲ್ಲದೇ ಮುಖಕ್ಕೆ ಹೊಡೆದು ಹಲ್ಲನ್ನೂ ಮುರಿದು ಗಾಯಗೊಳಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆಯೇ ಸ್ಥಳೀಯರ ಸಹಾಯದಿಂದ ಆರೋಪಿ ಯುವಕರನ್ನು ಪೊಲೀಸರಿಗೆ ಒಪ್ಪಿಸಲು ಪ್ರಯತ್ನಿಸಲಾಯಿತಾದರೂ ಓರ್ವ ಯುವಕ ಪೊಲೀಸ್ ಠಾಣೆಯ ಬಳಿಯೇ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಸದ್ಯ ಮತ್ತೋರ್ವ ಯುವಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಇದೀಗ ಗಾಯಾಳು ನಿರ್ವಾಹಕ ಕೃಷ್ಣಪ್ಪ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:
ಮಾಸ್ಕ್ ಹಾಕಿ ಎಂದಿದ್ದಕ್ಕೆ ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ.. 6 ಜನರ ಬಂಧನ
ಗಿರಿಧಾಮ,ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದ ಜನರ ಗುಂಪು ಕಳವಳವನ್ನುಂಟು ಮಾಡುತ್ತಿದೆ: ಮೋದಿ
Published On - 9:20 am, Fri, 16 July 21