ಯುವತಿಯನ್ನು ಚುಡಾಯಿಸಿದ ಆರೋಪ: ಪೆಟ್ರೋಲ್​ ತುಂಬಿಸುತ್ತಿದ್ದ ಯುವಕನಿಗೆ ಹಾಲಿನ ಕ್ಯಾನ್​ನಿಂದ ಹೊಡೆದು ಮಾರಣಾಂತಿಕ ಹಲ್ಲೆ

ಘಟನೆಯ ದೃಶ್ಯ ಪೆಟ್ರೋಲ್ ಬಂಕ್ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಾಲಿನ ಕ್ಯಾನ್​ ಹಿಡಿದುಕೊಂಡು ಬಂದವರು ಪೆಟ್ರೋಲ್​ ತುಂಬಿಸುತ್ತಾ ಬೈಕ್​ ಮೇಲೆ ಕುಳಿತಿದ್ದ ರಾಜು ಮೇಲೆ ಹಲ್ಲಗೈದಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಯುವತಿಯನ್ನು ಚುಡಾಯಿಸಿದ ಆರೋಪ: ಪೆಟ್ರೋಲ್​ ತುಂಬಿಸುತ್ತಿದ್ದ ಯುವಕನಿಗೆ ಹಾಲಿನ ಕ್ಯಾನ್​ನಿಂದ ಹೊಡೆದು ಮಾರಣಾಂತಿಕ ಹಲ್ಲೆ
ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆಯ ದೃಶ್ಯ

ಮೈಸೂರು: ಯುವತಿಯೊಬ್ಬಳನ್ನು ಚುಡಾಯಿಸಿದ (Tease) ಆರೋಪ ಹೊತ್ತ ಯುವಕನಿಗೆ ಯುವತಿ ಸಂಬಂಧಿಕರು ಹಿಗ್ಗಾಮುಗ್ಗ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ (Piriyapatna) ತಾಲ್ಲೂಕಿನಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಉತ್ತೇನಹಳ್ಳಿ ರಾಜು (25 ವರ್ಷ) ಎಂಬ ಯುವಕನ ಮೇಲೆ ಗಂಭೀರವಾಗಿ ಹಲ್ಲೆ (Assault) ನಡೆಸಲಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿದೆ.

ಹಲ್ಲೆಗೊಳಗಾದ ರಾಜು ಕೆಲ ಸಮಯದ ಹಿಂದೆ ಯುವತಿಯೊಬ್ಬಳನ್ನು ಚುಡಾಯಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಕಾರಣದಿಂದ ಕುಪಿತರಾಗಿದ್ದ ಯುವತಿ ಸಂಬಂಧಿಕರು ರಾಜುವಿನ ಮೇಲೆ ಕಣ್ಣಿಟ್ಟು, ಆತನ ಚಲನವಲನವನ್ನು ಗಮನಿಸುತ್ತಿದ್ದರು. ಇದೀಗ ಪೆಟ್ರೋಲ್​ ಹಾಕಿಸಲೆಂದು ಬಂಕ್​ಗೆ ಬಂದಿದ್ದ ಆತನ ಮೇಲೆ ಯುವತಿ ಸಂಬಂಧಿಕರಾದ ಕಿರಣ್, ಪುನೀತ್, ಪ್ರಕಾಶ್, ನವೀನ್ ಎನ್ನುವವರು ಹಲ್ಲೆ ನಡೆಸಿದ್ದು, ಹಾಲಿನ ಕ್ಯಾನ್​ನಿಂದ ಹೊಡೆದ ಪರಿಣಾಮ ರಾಜುವಿಗೆ ಗಂಭೀರ ಗಾಯಗಳಾಗಿವೆ.

YOUTH ASSAULTED

ಯುವಕನ ಮೇಲೆ ಹಲ್ಲೆ ನಡೆಸಿದ ಯುವತಿ ಸಂಬಂಧಿಕರು

ಮೆಣಸಿನಕಾಯಿ ವ್ಯಾಪಾರಿಯೊಬ್ಬರ ಬಳಿ ಕೂಲಿ ಕೆಲಸ ಮಾಡುತ್ತಿದ್ದ ರಾಜು, ಪಂಚವಳ್ಳಿ ಸರ್ಕಲ್ ಬಳಿಯ ಪೆಟ್ರೋಲ್ ಬಂಕ್ ಮುಂದೆ ಇರುವ ಯುವತಿ ಮನೆ ಬಳಿ ಆಗಾಗ ಸುಳಿಯುತ್ತಿದ್ದ ಎನ್ನಲಾಗಿದ್ದು, ಆಕೆಯನ್ನು ಚುಡಾಯಿಸುತ್ತಿದ್ದನಂತೆ. ಇತ್ತ ಮಳಿಗೆಯನ್ನು ಬಾಡಿಗೆಗೆ ಕೊಟ್ಟಿದ್ದ ಕಿರಣ್​ ಇದನ್ನೆಲ್ಲಾ ಗಮನಿಸಿದ್ದು, ತನ್ನ ಅತ್ತೆಯ ಮಗಳಾಗಿರುವ ಯುವತಿಗೆ ರಾಜು ಚುಡಾಯಿಸಿದ್ದಾನೆ ಎನ್ನುವ ಕಾರಣಕ್ಕೆ ಸಿಟ್ಟಾಗಿದ್ದಾರೆ. ಅಲ್ಲದೇ, ಈ ಬಗ್ಗೆ ಹಲವು ಬಾರಿ ರಾಜುವಿಗೆ ಎಚ್ಚರಿಕೆಯನ್ನೂ ನೀಡಿದ್ದರು ಎಂಬ ಮಾತು ಕೇಳಿಬಂದಿದೆ.

ಸದ್ಯ ಪೆಟ್ರೋಲ್ ಬಂಕ್ ಮುಂಭಾಗದಲ್ಲೇ ಇರುವ ಕಟ್ಟಡದಲ್ಲಿ ಮೆಣಸಿನಕಾಯಿ ತುಂಬಲು ಬಂದ ರಾಜುವಿನ ಮೇಲೆ ಆರೋಪಿ ಕಿರಣ್, ಪುನೀತ್, ಪ್ರಕಾಶ್ ನವೀನ್ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಘಟನೆಯ ದೃಶ್ಯ ಪೆಟ್ರೋಲ್ ಬಂಕ್ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಾಲಿನ ಕ್ಯಾನ್​ ಹಿಡಿದುಕೊಂಡು ಬಂದವರು ಪೆಟ್ರೋಲ್​ ತುಂಬಿಸುತ್ತಾ ಬೈಕ್​ ಮೇಲೆ ಕುಳಿತಿದ್ದ ರಾಜು ಮೇಲೆ ಹಲ್ಲೆಗೈದಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಮೊದಲು ಒಬ್ಬಾತ ಮಾತ್ರ ಮುಂದೆ ಬಂದು ಹಲ್ಲೆ ಮಾಡಿದ್ದು, ನಂತರ ಆತನ ಕಡೆಯವರು ಒಟ್ಟಾಗಿದ್ದಾರೆ.

ಹಲ್ಲೆಯಿಂದಾಗಿ ಗಾಯಗೊಂಡ ರಾಜು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆ ನಡೆಸಿದ ಯುವತಿ ಸಂಬಂಧಿಕರಾದ ಕಿರಣ್, ಪುನೀತ್, ಪ್ರಕಾಶ್ ನವೀನ್ ಇವರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಮೈಸೂರು: 70 ಲಕ್ಷ ವಂಚಿಸಿ ಪರಾರಿಯಾಗಿದ್ದ ಮಹಿಳೆ ಪೊಲೀಸರ ವಶಕ್ಕೆ 

ರೋಡ್​ ರೋಮಿಯೋಗೆ ಬಿತ್ತು ಗೂಸಾ; ಯುವತಿಯರಿಗೆ ಚುಡಾಯಿಸಿದ್ದಕ್ಕೆ ಯುವಕರಿಂದ ಥಳಿತ

Click on your DTH Provider to Add TV9 Kannada