KRS Dam ಮೇಲೆ ಯುವಕನ ಖಾಸಗಿ ದರ್ಬಾರ್! ಡ್ಯಾಂ ಮೇಲೆ ಪೊಲೀಸ್ ಜೀಪ್ ಚಲಾಯಿಸಿದ್ದಲ್ಲದೇ ಮೊಬೈಲ್ ನಲ್ಲಿ ಚಿತ್ರೀಕರಣ!
KRS Dam: ಕೆಆರ್‌ಎಸ್ ಡ್ಯಾಂ ಮೇಲೆ ಜೀಪ್ ಚಲಾಯಿಸಿ ಯುವಕನೊಬ್ಬ ಅಂಧಾದರ್ಬಾರ್! ಇಡೀ ವೃತ್ತಾಂತವನ್ನು ಡ್ರೈವರ್ ಸೀಟ್ ಪಕ್ಕ ಕುಳಿತ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಿಂದಲೇ ವಿಡಿಯೋ ಮಾಡಿಸಿದ್ದಾನೆ.
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಮೇಲೆ ಜೀಪ್ ಚಲಾಯಿಸಿ ಯುವಕನೊಬ್ಬ ಅಂಧಾದರ್ಬಾರ್ ನಡೆಸಿರುವುದು ಬೆಳಕಿಗೆ ಬಂದಿದೆ. ಬೇಸರದ ಸಂಗತಿಯೆಂದರೆ ಆ ಜೀಪ್ ಪೊಲೀಸ್ ವಾಹನವಾಗಿದ್ದು, ಯುವಕನೇ ಆ ಪೊಲೀಸ್ ವಾಹನ ಚಲಾಯಿಸಿದ್ದಾನೆ. ಮತ್ತು ಆ ವಾಹನದ ನಿರ್ವಹಣೆ ಹೊತ್ತಿದ್ದ ಪೊಲೀಸ್ ಅಧಿಕಾರಿ ಆ ಯುವಕನ ಪಕ್ಕದಲ್ಲೇ ಕುಳಿತಿದ್ದು, ಇಡೀ ಪ್ರಯಾಣದುದ್ದಕ್ಕೂ ಮೂಕ ಪ್ರೇಕ್ಷಕರಾಗಿದ್ದಾರೆ.
ಆ ಯುವಕನ ಧಾರ್ಷ್ಟ್ಯ ಎಷ್ಟಿತ್ತೆಂದರೆ ವಾಹನ ಚಲಾಯಿಸಿ, ಆ ಇಡೀ ವೃತ್ತಾಂತವನ್ನು ವಿಡಿಯೋ ಮಾಡಿಸಿಕೊಂಡಿದ್ದಾನೆ. ಡ್ರೈವರ್ ಸೀಟ್ ಪಕ್ಕ ಕುಳಿತ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಿಂದಲೇ ವಿಡಿಯೋ ಮಾಡಿಸಿದ್ದಾನೆ.
ಗಮನಿಸಿ.. ಕೆಆರ್‌ಎಸ್ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಇದೆ. ಇನ್ನು ವಾಃನ ಚಾಲನೆಗಂತೂ ಅವಕಾಶವೇ ಇಲ್ಲ. ಈ ಕನ್ನಂಬಾಡಿ ಕಟ್ಟೆ ಮೈದುಂಬಿದಾಗ ವಾಡಿಕೆಯಂತೆ ಅಕ್ಬೋಬರ್ ತಿಂಗಳಲ್ಲಿ ನಾಡಿನ ಮುಖ್ಯಮಂತ್ರಿಯಾದವರು ಬಾಗಿನ ಅರ್ಪಿಸುವ ಪದ್ಧತಿಯಿದೆ. ಆ ವೇಳೆಯೂ ಮುಖ್ಯಮಂತ್ರಿ ಮತ್ತಿತರ ಅಧಿಕಾರಿವೃಂದ ನಡೆದುಕೊಂಡೇ ಒಂದಷ್ಟು ದೂರ ಸಾಗಿ ಕಾವೇರಿ ತಾಯಿಗೆ ಶಿರಬಾಗಿ, ಬಾಗಿನ ಅರ್ಪಿಸುತ್ತಾರೆ. ಅವರು ಯಾರೂ ವಾಹನ ಬಳಸುವುದಿಲ್ಲ.
ಆದರೆ ಈ ಪ್ರಕರಣದಲ್ಲಿ ನಿರ್ಬಂಧವಿದ್ದರೂ ಭದ್ರತೆ ನೋಡಿಕೊಳ್ಳಬೇಕಿದ್ದ ಪೊಲೀಸರಿಂದಲೇ ನಿಯಮ ಉಲ್ಲಂಘನೆಯಾಗಿದೆ. ಕೆಆರ್‌ಎಸ್ ನಲ್ಲಿ ಸಾಮಾನ್ಯ ಜನರಿಗೊಂದು ನಿಯಮ, ಅಧಿಕಾರಿ ಕಡೆಯವರಿಗೊಂದು ನಿಯಮ ಎಂಬುದು ಮತ್ತೊಮ್ಮೆ ಸಾಬೀತಾಗಿದೆ!
ಗಮನಾರ್ಹ ಸಂಗತಿಯೆಂದರೆ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಭದ್ರತೆ ನೆಪದಲ್ಲಿ ಇದೇ ಭದ್ರತಾ ಸಿಬ್ಬಂದಿ ಹಲ್ಲೆ ಮಾಡಿದ್ದರು. ಕೆಆರ್‌ಎಸ್ ನ ಮುದ್ದ ಎಂಬುವವರ ಮೇಲೆ ಹಲ್ಲೆ ಮಾಡಿದ್ದರು. ಹುಚ್ಚೇಗೌಡ ಎಂಬ ಪೇದೆ ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು. ರಾತ್ರಿಯಾದರೂ ಬೃಂದಾವನದ ದ್ವಾರದ ಬಳಿ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದರಿಂದ ಹಲ್ಲೆ ನಡೆಸಲಾಗಿತ್ತು.
Published On - 10:55 am, Sat, 27 February 21