
ಬೆಂಗಳೂರು, ಜನವರಿ 12: ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ಐದನೇ ಉಚಿತ ಗ್ಯಾರಂಟಿ ಯೋಜನೆ ಯುವ ನಿಧಿಗೆ (Yuva Nidhi scheme) ಇಂದು (ಶುಕ್ರವಾರ, ಜನವರಿ 12) ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ ಎನ್ನುತ್ತಿರುವ ಕಾಂಗ್ರೆಸ್ ಇದೀಗ ಲೋಕಸಭೆ ಚುನಾವಣೆ ಹತ್ತಿರವಾಗ್ತಿರುವ ಸಂದರ್ಭದಲ್ಲಿ 5 ನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿಯನ್ನು ಜಾರಿಗೆ ತರುತ್ತಿದೆ. ಈಗಾಗಲೇ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಚಾಲನೆ ಸಿಕ್ಕಿದೆ. ಆನ್‌ಲೈನ್ ಮೂಲಕ ಈವರೆಗೆ 65 ಸಾವಿರಕ್ಕೂ ಹೆಚ್ಚು ಪದವಿ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಂದ ನೋಂದಣಿ ಮಾಡಿಕೊಂಡಿದ್ದಾರೆ.
ನೋಂದಣಿ ಮಾಡಿಕೊಂಡವರ ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಗೆ ಬಿಜೆಪಿಯ ಭದ್ರಕೋಟೆಯಾಗಿರುವ ಮಲೆನಾಡು ಶಿವಮೊಗ್ಗದಲ್ಲೇ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ.
ಇಂದು ಯುವಜನತೆಯ ಸ್ಫೂರ್ತಿ ಪುರುಷನಾದ ಸ್ವಾಮಿ ವಿವೇಕಾನಂದ ಜಯಂತಿ. ಈ ದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿಯೂ ಆಚರಿಸಲಾಗ್ತಿದೆ. ಈ ದಿನವೇ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿಂದು ನಡೆಯುವ ಕಾರ್ಯಕ್ರಮದಲ್ಲಿ ಯುವನಿಧಿಗೆ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುತ್ತೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಚಾಲನೆ ಸಿಗಲಿದೆ. 2022-23ನೇ ಸಾಲಿನಲ್ಲಿ ಪಾಸಾದ ನಿರುದ್ಯೋಗಿಗಳು ಯೋಜನೆಗೆ ಅರ್ಹರಾಗಿದ್ದು, ಒಟ್ಟು 5.29 ಲಕ್ಷ ಫಲಾನುಭವಿಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ.
ಯುವ ನಿಧಿ ಚಾಲನೆ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಚಿತ್ರದುರ್ಗ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಉತ್ತರ ಕನ್ನಡ ಸೇರಿ ಬೇರೆ ಬೆರೆ ಜಿಲ್ಲೆಗಳಿಂದ ಜನ ಆಗಮಿಸುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆಯಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
ಕೌಶಾಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, 4 ಗ್ಯಾರಂಟಿಗಳಂತೆ 5ನೇ ಗ್ಯಾರಂಟಿಯೂ ಯಶಸ್ವಿ ಆಗುತ್ತೆ. ಯುವಕರು ಯುವನಿಧಿ ಯೋಜನೆ ಲಾಭ ಪಡೆಯಬೇಕು ಎಂದು ಹೇಳಿದ್ದಾರೆ.
ಈ ಮಧ್ಯೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿ ರಚಿಸಿರುವ ಸರ್ಕಾರ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ಮಾನ ನೀಡಲು ನಿರ್ಧರಿಸಿದೆ. ಅಲ್ಲದೆ ಕಾರ್ಯಕರ್ತರನ್ನು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ನೇಮಿಸಲು ಹೊರಟಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಸರ್ಕಾರಿ ನೌಕರರಿಗೆ ವೇತನ ಕೊಡಲು ಹಣ ಇಲ್ಲ. ಅಂಗನವಾಡಿ ಕಾರ್ಯಕರ್ತರಯರಿಗೆ ಗೌರವ ವೇತನ ಹೆಚ್ಚಿಸಿಲ್ಲ. ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಟ್ಟಿಲ್ಲ ಇಂಥ ಸಂದರ್ಭದಲ್ಲಿ ಜನರ ತೆರಿಗೆ ಹಣ ಪೋಲು ಮಾಡ್ತಿದ್ದಾರೆ ಎಂದು ಕುಟುಕಿದ್ದಾರೆ.
ಈ ಯೋಜನೆಯು ರಾಜ್ಯದ ನಿರುದ್ಯೋಗಿ ಯುವಕರಿಗೆ ಎರಡು ವರ್ಷಗಳವರೆಗೆ ಅಥವಾ ಫಲಾನುಭವಿಗೆ ಉದ್ಯೋಗ ಸಿಗುವವರೆಗೆ (ಯಾವುದು ಮೊದಲೋ) ನಿರುದ್ಯೋಗ ಭತ್ಯೆ ಒದಗಿಸುವ ಗುರಿಯನ್ನು ಹೊಂದಿದೆ. ಯುವ ನಿಧಿ ಯೋಜನೆಯು ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ಡಿಪ್ಲೋಮಾ ಆದವರಿಗೆ 1,500 ರೂ. ಒದಗಿಸುತ್ತದೆ.
ಎಸ್ಎಸ್ಎಕ್ಸಿ ಅಂಕ ಪಟ್ಟಿ, ಪದವಿ/ಡಿಪ್ಲೋಮಾ ಪ್ರಮಾಣಪತ್ರ. ಎಸ್‌ಎಸ್‌ಎಲ್‌ಸಿ ನಂತರ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಡಿಪ್ಲೊಮಾ ಪ್ರಮಾಣಪತ್ರಗಳೊಂದಿಗೆ 8, 9 ಮತ್ತು 10 ನೇ ಅಂಕಪಟ್ಟಿ ಸಲ್ಲಿಸಬಹುದು.
ಇದನ್ನೂ ಓದಿ: ಯುವ ನಿಧಿ ಗ್ಯಾರಂಟಿ ಜಾರಿಗೆ ದಿನಗಣನೆ: ಯಾರೆಲ್ಲ ಅರ್ಹರು, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ
ಅಭ್ಯರ್ಥಿಗಳು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಆಧಾರ್-ಲಿಂಕ್ ಮಾಡಿದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಅರ್ಹ ಅಭ್ಯರ್ಥಿಗಳು ಯುವ ನಿಧಿ ಯೋಜನೆಗಾಗಿ ಸೇವಾಸಿಂಧು ಪೋರ್ಟಲ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು.
ಪ್ರತಿ ತಿಂಗಳ 25 ನೇ ತಾರೀಖಿನ ಮೊದಲು ನೋಂದಾಯಿಸುವ ಅಭ್ಯರ್ಥಿಗಳು ಆ ನಿರ್ದಿಷ್ಟ ತಿಂಗಳಿಗೆ ಹಣವನ್ನು ಪಡೆಯುತ್ತಾರೆ ಮತ್ತು 25 ರ ನಂತರ ಅರ್ಜಿ ಸಲ್ಲಿಸುವವರನ್ನು ಮುಂದಿನ ತಿಂಗಳಿಗೆ ಪರಿಗಣಿಸಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 am, Fri, 12 January 24