ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಮುಂದಕ್ಕೆ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.​ ಈಶ್ವರಪ್ಪ

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಮುಂದೂಡುವುದಕ್ಕೆ ನಮ್ಮ ಇಲಾಖೆ ತೀರ್ಮಾನಿಸಿದೆ ಎಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಸಚಿವ ಈಶ್ವರಪ್ಪ.

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ  ಚುನಾವಣೆಗಳು ಮುಂದಕ್ಕೆ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.​ ಈಶ್ವರಪ್ಪ
ಕೆ.ಎಸ್​.ಈಶ್ವರಪ್ಪ

ಬೆಂಗಳೂರು: ರಾಜ್ಯದಲ್ಲಿ ದಿನೇದಿನೆ ಕೊವಿಡ್ ಆರ್ಭಟ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಮುಂದೂಡುವುದಕ್ಕೆ ನಮ್ಮ ಇಲಾಖೆ ತೀರ್ಮಾನಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.​ ಈಶ್ವರಪ್ಪ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಚುನಾವಣೆಗೆ ತಯಾರಿದೆ. ಆದರೆ ಕೋವಿಡ್ ಹೆಚ್ಚಾಗಿರುವ ಕಾರಣ ಸದ್ಯಕ್ಕೆ ಚುನಾವಣೆ ಮುಂದಕ್ಕೆ ಹಾಕಬೇಕು ಅಂತಾ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ತೀರ್ಮಾನ ಮಾಡಿದ್ದೇವೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ‌ ತೀರ್ಮಾನ ಮಾಡಿ ನಂತರ ಚುನಾವಣಾ ಆಯೋಗಕ್ಕೆ ತಿಳಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.​ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಅವಧಿ ಮುಕ್ತಾಯಗೊಳ್ಳುತ್ತಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ‌ಯೋಚನೆ ಮಾಡಿದ್ದೇವೆ. ತಾಲೂಕು ಪಂಚಾಯಿತಿ ರದ್ದು ಮಾಡುವ ವಿಚಾರದಲ್ಲಿ ಗೊಂದಲ‌ ಇಲ್ಲ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆದು ನಂತರ ತೀರ್ಮಾನ ಮಾಡಬೇಕಾಗುತ್ತದೆ ಎಂದು ಸಚಿವ ಕೆ.ಎಸ್.​ ಈಶ್ವರಪ್ಪ ಹೇಳಿದ್ದಾರೆ.

ಈ ಬಾರಿ ನಾವು ತಾಲೂಕು ಪಂಚಾಯಿತಿಗೆ ಚುನಾವಣೆ ಮಾಡುತ್ತೇವೆ. ಜಿಲ್ಲಾ ಪಂಚಾಯಿತಿ ಕೆರೆಗಳನ್ನು ಪಂಚಾಯತ್ ಕೆರೆಗಳು ಅಂತಾ ಕರೆಯಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಆದೇಶ ಜಾರಿ ಮಾಡ್ತಿದ್ದೇವೆ. ಇವುಗಳ‌ ನಿರ್ವಹಣೆ ಗ್ರಾಮ ಪಂಚಾಯತ್ ಗಳ ಮೂಲಕ ಮಾಡಲಾಗುತ್ತದೆ. 28 ಸಾವಿರ ಜಿಲ್ಲಾ ಪಂಚಾಯಿತಿ ಕೆರೆಗಳು ಇವೆ ಎಂದು ಅವರು ತಿಳಿಸಿದರು.

ನನ್ನ ಸ್ಪಷ್ಟ ಅಭಿಪ್ರಾಯ ಲಾಕ್ ಡೌನ್ ಬೇಡ: ಸಚಿವ ಈಶ್ವರಪ್ಪ ನವದೆಹಲಿಯಲ್ಲಿ ಸಮಸ್ಯೆ ಹೆಚ್ಚಾದ ಹಿನ್ನೆಲೆ ಲಾಕ್‌ಡೌನ್ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ನವದೆಹಲಿಯಂತಹ ಪರಿಸ್ಥಿತಿ ಇಲ್ಲ. ರಾಜ್ಯದಲ್ಲಿ ಲಾಕ್‌ಡೌನ್ ಬೇಡವೆಂಬುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಇಡೀ ದೆಹಲಿಯಲ್ಲಿ ಸಮಸ್ಯೆ ಇರುವ ಕಾರಣ ಒಂದು ವಾರ ಅವರು ಘೋಷಣೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಆ ತರಹದ ಪರಿಸ್ಥಿತಿ ಇಲ್ಲ. ಬೆಂಗಳೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಗಂಭೀರ ಪರಿಸ್ಥಿತಿ ಇದೆ. ಬೆಂಗಳೂರು ವಿಚಾರಕ್ಕೆ ಸಂಬಂಧಪಟ್ಟ ಸಚಿವರು ಕುಳಿತು ಸಭೆ ಮಾಡ್ತಿದ್ದಾರೆ. ಬೆಂಗಳೂರಿನ ವಿಚಾರ ಆಗಿರುವ ಕಾರಣ ಅವರು ಸಭೆ ಮಾಡ್ತಿದ್ದಾರೆ. ಅವರು ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

Published On - 12:54 pm, Mon, 19 April 21

Click on your DTH Provider to Add TV9 Kannada