ಕನ್ನಡ ಚಿತ್ರರಂಗದ ನಟ ನವರಸ ನಾಯಕ ದರ್ಶನ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 58ನೇ ವಸಂತಕ್ಕೆ ಕಾಲಿಟ್ಟ ಜಗ್ಗೇಶ್ಗೆ ಇಂದು ಚಾಲೆಂಜಿಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ನಟ ದರ್ಶನ್ ‘ಹುಟ್ಟುಹಬ್ಬದ ಶುಭಾಶಯಗಳು ಜಗ್ಗೇಶ್ ಅಣ್ಣ’ ಎಂದು ಬರೆದುಕೊಂಡಿದ್ದಾರೆ. ನವರಸ ನಾಯಕ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಮನಸ್ತಾಪದ ನಡುವೆಯೂ ಚಾಲೆಂಜಿಂಗ್ ಸ್ಟಾರ್, ಜಗ್ಗೇಶ್ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
‘ಐ ಲವ್ ಯು ದರ್ಶನ್ ಎಂದ ನಟ ಜಗ್ಗೇಶ್’
ನವರಸನಾಯಕ ಜಗ್ಗೇಶ್ ಅವರ ಹುಟ್ಟುಹಬ್ಬಕ್ಕೆ ನಟ ದರ್ಶನ್ ಶುಭಾಶಯ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಶುಭ ಕೋರಿದ ದರ್ಶನ್‌ಗೆ ಜಗ್ಗೇಶ್ ಧನ್ಯವಾದ ತಿಳಿಸಿದ್ದಾರೆ. ಐ ಲವ್ ಯು ದರ್ಶನ್. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಮ್ಮ ಹುಡುಗ. ಏನೋ ಒಂದು ವಿಷ ಘಳಿಗೆ ಆಗಿದ್ದು, ಆಗಿ ಹೋಗಿದೆ. ಇಂತಹ ವಿಚಾರದಲ್ಲಿ ಸಣ್ಣ ಕಿಡಿ ಇದ್ದಾಗಲೇ ಆರಿಸಬೇಕು. ಯಾರೂ ಕೂಡ ಇದನ್ನ ಸಾಧಿಸಬಾರದು ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡುತ್ತಾ, ಎಲ್ಲರೂ ಸೇರಿಕೊಂಡು ಕನ್ನಡದ ತೇರು ಎಳೆಯಬೇಕು. ದರ್ಶನ್, ಸುದೀಪ್, ಪುನೀತ್ ಎಲ್ಲರೂ ತೇರು ಎಳೆಯಲಿ. ಅವರು ಕನ್ನಡದ ತೇರು ಎಳೆದರೆ ನಾನು ಅಕ್ಷತೆ ಹಾಕುತ್ತೇನೆ ಎಂದು ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಅಂದು ತಿರುಕನ ಕನಸು ಕಂಡಿದ್ದೆ ಇಂದು 58 ವರ್ಷ ನನ್ನ ಕನಸುಗಳು ನನಸಾಗಿವೆ – ಜಗ್ಗೇಶ್
ನಟ ಜಗ್ಗೇಶ್ ಅವರಿಗೆ ಇಂದು 58ನೇ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ಜಗ್ಗೇಶ್ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದಾರೆ. ಇಲ್ಲಿ ತನಕ ನಾನು ಯಾರಿಗಾದ್ರೂ ಬೇಸರ ಮಾಡಿದ್ರೆ, ಏನಾದ್ರು ತಪ್ಪು ಮಾಡಿದ್ರೆ ದೇವರಲ್ಲಿ ಕ್ಷಮೆ ಕೇಳಲು ಈ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದೆ. ಅಪ್ಪನ ನಿಧನದ ನಂತರ ನಾನು ಹುಟ್ಟು ಹಬ್ಬವನ್ನ ಆಚರಿಸೋದನ್ನ ಬಿಟ್ಟು ಬಿಟ್ಟಿದ್ದೇನೆ. ಅದ್ರೇ ಇಲ್ಲದ ಕಾರಣ ಬೇಡ ಅಂದುಕೊಂಡಿದ್ದೆ. ಈಗ ಎಲ್ಲರೂ ಅಷ್ಟು ಪ್ರೀತಿ ಕೊಡೋವಾಗ ನಾನು ಇರಬೇಕು ಅಂತ ಇಂದು ಮನೆಯಲ್ಲಿ ಇದೀನಿ. ಅಂದು ತಿರುಕನ ಕನಸು ಕಂಡಿದ್ದೆ ಇಂದು 58 ವರ್ಷ ನನ್ನ ಕನಸುಗಳು ನನಸಾಗಿವೆ. ರಂಗನಾಯಕ ಸಿನಿಮಾ ಮಾಡ್ತೀನಿ, ಏನೋ ನಡೆದು ಹೋಗಿದೆ. ಆದ್ರೆ ಕ್ಷಮಾ ಗುಣ ಶ್ರೇಷ್ಠವಾದ ಗುಣ. ಇದು ಅಪ್ಪ,ಮಕ್ಕಳ ಜಗಳದಂತೆ ಅದನ್ನ ಮರಿಬೇಕು, ಸಾಧಿಸಬಾರದು ಆಗಲೇ ನಾವು ದೊಡ್ಡವರಾಗೋದು ಎಂದು ನಟ ಜಗ್ಗೇಶ್ ಮಾತನಾಡಿದ್ದಾರೆ.
ಅಭಿಮಾನಿಗಳ ನಡುವಿನ ಮನಸ್ತಾಪವೇನು?
ನವರಸನಾಯಕ ಜಗ್ಗೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸಂಚಲನ ಮೂಡಿಸಿತ್ತು. ನಿರ್ಮಾಪಕರೊಬ್ಬರ ಜೊತೆ ಕರೆಯಲ್ಲಿ ಮಾತನಾಡಲಾದ ಆಡಿಯೋ ಎಂಬ ಹೆಸರಿನಡಿ ಹರಿದಾಡುತ್ತಿರುವ ಧ್ವನಿ ಮುದ್ರಿಕೆಯಲ್ಲಿ ಜಗ್ಗೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳನ್ನು ನಿಂದಿಸಿದ್ದಾರೆ ಎನ್ನುವ ಕಾರಣಕ್ಕೆ ಬಹಳಷ್ಟು ಆಕ್ರೋಶಗಳ ವ್ಯಕ್ತವಾಗಿದ್ದವು.
ಅಭಿಮಾನಿಗಳ ಮನಸ್ತಾಪದ ಕುರಿತಾಗಿ ಟಿವಿ9 ರಂಗನಾಥ್ ಭಾರಧ್ವಾಜ್ ಜತೆ ಸಂದರ್ಶನದಲ್ಲಿ ಮಾತನಾಡಿರುವ ದರ್ಶನ್, ಸೀನಿಯರ್ಗಳು ಯಾವಾಗಲೂ ಮುಂದಿರಬೇಕು. ಕಿರಿಯರು ಹಿಂದಿರಬೇಕು. ವಿವಾದ ಆಗುವ ದಿನ ನಾನು ತಿರುಪತಿಗೆ ಹೋಗಿದ್ದೆ. ತಿರುಪತಿಯಿಂದ ಮನೆಗೆ ಬರೋದು ರಾತ್ರಿ 2 ಗಂಟೆ ಆಗಿತ್ತು. ಮನೆಗೆ ಬಂದು ಮೊಬೈಲ್ ನೋಡಿದಾಗ ನಿರ್ಮಾಪಕ ವಿಖ್ಯಾತ್ದು 50-60 ಮಿಸ್ ಕಾಲ್ಗಳಿದ್ದವು. ಮಧ್ಯರಾತ್ರಿ ಕಾಲ್ ಮಾಡೋದು ಸರಿಯಲ್ಲ ಎನ್ನುವ ಕಾರಣಕ್ಕೆ, ಬೆಳಗ್ಗೆ ಜಿಮ್ ಮುಗಿಸಿ ಬಂದು ಕರೆ ಮಾಡಿದೆ. ಆಗ ವಿಚಾರ ತಿಳಿಯಿತು. ನನ್ನ ಅಭಿಮಾನಿಗಳು ಜಗ್ಗೇಶ್ ಸೆಟ್ಗೆ ಹೋಗೋ ವಿಚಾರ ನನಗೆ ಗೊತ್ತಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದರೆ ನಾನು ಅಭಿಮಾನಿಗಳ ಬಳಿ ಹೋಗೋದೇ ಬೇಡ ಎನ್ನುತ್ತಿದೆ. ಅವರು ನಮ್ ಸೀನಿಯರ್. ಅವರು ಮಾತನಾಡಿದ್ರೆ ನಮ್ಮ ಬಗ್ಗೆ ತಾನೇ. ಸೀನಿಯರ್ಗಳು ನಮ್ಮ ಬಗ್ಗೆ ಮಾತನಾಡದೆ ಇನ್ಯಾರ ಬಗ್ಗೆ ಮಾತನಾಡೋಕಾಗುತ್ತದೆ. ನನ್ನ ಅಭಿಮಾನಿಗಳಿಂದ ಬೇಸರ ಆಗಿದ್ದರೆ ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದರು.
ಟ್ವೀಟ್ ಹರಿಬಿಡುವ ಮೂಲಕ ನಡೆದ ಎಲ್ಲಾ ವಿವಾದಕ್ಕೆ ದರ್ಶನ್ ತೆರೆ ಎಳೆದಿದ್ದರು. ನಂತರದಲ್ಲಿ ಇದಕ್ಕೆ ಪ್ರತಿಯಾಗಿ ಟ್ವೀಟ್ ಹಂಚಿಕೊಂಡ ನಟ ಜಗ್ಗೇಶ್ ಮನಸ್ಸು ಹಗುರವಾಯಿತು. ಕನ್ನಡಕ್ಕೆ ಒಗ್ಗಟ್ಟಿರಲಿ ಎಂದು ಪ್ರತಿಕ್ರಿಯೆ ನೀಡಿದ್ದರು. ಚಂದನವನದಲ್ಲಿ ಆಗಾಗ ಸುಂಟರಗಾಳಿ, ಬಿರುಗಾಳಿ ಬೀಸುತ್ತಲೇ ಇರುತ್ತದೆ. ಸಣ್ಣಪುಟ್ಟ ಕಾರಣಗಳಿಗಾಗಿ ಎದ್ದ ಮನಸ್ತಾಪದಿಂದ ಎಷ್ಟೋ ಜನ ಒಳ್ಳೆಯ ಸ್ನೇಹಿತರು ದೂರಾಗಿದ್ದಿದೆ. ಈಗ ಆ ಸರದಿ ಜಗ್ಗೇಶ್ ಅವರಿಗೆ ಬಂದಂತಿದೆ ಎಂಬೆಲ್ಲಾ ಮಾತುಗಳು ಕೇಳಿ ಬಂದಿದ್ದವು.
ಇದನ್ನೂ ಓದಿ: Darshan Interview | ಜಗ್ಗೇಶ್ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್
Published On - 10:12 am, Wed, 17 March 21