ಚಿತ್ರರಂಗದಲ್ಲಿ ಮಹಿಳೆಯರನ್ನು ಮೋಸಗೊಳಿಸಿದ ಹಲವು ಉದಾಹರಣೆಗಳಿವೆ. ಅಂಥದ್ದೇ ಮತ್ತೊಂದು ಪ್ರಸಂಗದ ಬಗ್ಗೆ ಹಾಲಿವುಡ್ ನಟಿ ಶರನ್ ಸ್ಟೋನ್ ಬಾಯಿ ಬಿಟ್ಟಿದ್ದಾರೆ. ಶೂಟಿಂಗ್ ಸಮಯದಲ್ಲಿ ತಮ್ಮನ್ನು ಹೇಗೆಲ್ಲ ಯಾಮಾರಿಸಲಾಯಿತು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ. ಅದೇ ವಿಚಾರ ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ. ಶರನ್ ಸ್ಟೋನ್ಗೆ ಗೊತ್ತಾಗದ ರೀತಿಯಲ್ಲಿ ಅವರ ಗುಪ್ತಾಂಗವನ್ನು ನಿರ್ದೇಶಕ ಪೌಲ್ ವೆರ್ಹೋವೆನ್ ಚಿತ್ರೀಕರಿಸಿದ್ದರು ಎಂಬ ವಿಚಾರ ಜಗಜ್ಜಾಹೀರಾಗಿದೆ.
60ಕ್ಕೂ ಹೆಚ್ಚು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದವರು ಶರನ್ ಸ್ಟೋನ್. ಅದರಲ್ಲೂ 1992ರಲ್ಲಿ ತೆರೆಕಂಡ ‘ಬೇಸಿಕ್ ಇನ್ಸ್ಟಿಂಕ್ಟ್’ ಚಿತ್ರದ ಬಳಿಕ ಶರನ್ ರಾತ್ರೋ ರಾತ್ರಿ ಸ್ಟಾರ್ ನಟಿಯಾದರು. ಆದರೆ ಆ ಸಿನಿಮಾ ಚಿತ್ರೀಕರಣದ ವೇಳೆ ಅವರಿಗೆ ಅನ್ಯಾಯ ಮಾಡಲಾಗಿತ್ತು. ನಿರ್ದೇಶನ ತಂಡದವರು ಶರನ್ ಅವರನ್ನು ಯಾಮಾರಿಸಿ ಅವರ ಗುಪ್ತಾಂಗವನ್ನು ಚಿತ್ರೀಕರಿಸಿದ್ದರಂತೆ. ಈ ವಿಚಾರವನ್ನು ಆತ್ಮಚರಿತ್ರೆಯಲ್ಲಿ ಅವರು ಬರೆದುಕೊಂಡಿದ್ದಾರೆ.
ಮಾ.30ರಂದು ಶರನ್ ಅವರ ಆತ್ಮಚರಿತ್ರೆ ‘ದಿ ಬ್ಯೂಟಿ ಆಫ್ ಲಿವಿಂಗ್ ಟ್ವೈಸ್’ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಆ ಪುಸ್ತಕದ ಕೆಲವು ಅಧ್ಯಾಯಗಳು ಖಾಸಗಿ ಮ್ಯಾಗಝಿನ್ನಲ್ಲಿ ಪ್ರಕಟ ಆಗಿದ್ದು, ಅದರಲ್ಲಿ ಈ ಕಹಿ ಘಟನೆ ಬಗ್ಗೆ ವಿವರಿಸಲಾಗಿದೆ. ಶರಣ್ ಅವರಿಗೆ ಈಗ 63 ವರ್ಷ. ‘ಬೇಸಿಕ್ ಇನ್ಸ್ಟಿಂಕ್ಟ್’ ಚಿತ್ರೀಕರಣದ ಸಮಯದಲ್ಲಿ ಅವರಿಗೆ 34ರ ಪ್ರಾಯ. ಆ ಚಿತ್ರದ ಪೊಲೀಸ್ ತನಿಖೆಯ ದೃಶ್ಯವೊಂದರಲ್ಲಿ ಶರನ್ ಅವರು ಕಾಲು ಮೇಲೆ ಕಾಲು ಹಾಕಿ ಕೂರುವ ಶಾಟ್ ಇದೆ. ಆ ಸನ್ನಿವೇಶದಲ್ಲಿ ಅವರು ಒಳ ಉಡುಪು ಧರಿಸಿಲ್ಲ ಎಂಬುದನ್ನು ನಿರ್ದೇಶಕರು ಬಿಂಬಿಸಬೇಕಿತ್ತು. ಆದರೆ ಪರದೆ ಮೇಲೆ ಗುಪ್ತಾಂಗ ಕಾಣುವುದಿಲ್ಲ ಎಂದು ಸುಳ್ಳು ಹೇಳಿ ಶರನ್ರನ್ನು ನಂಬಿಸಲಾಗಿತ್ತು!
ಪ್ರೊಜೆಕ್ಷನ್ ರೂಮ್ನಲ್ಲಿ ಮೊದಲ ಬಾರಿಗೆ ಆ ದೃಶ್ಯವನ್ನು ನೋಡಿದಾಗ ಶರನ್ ವಿಚಲಿತರಾಗಿದ್ದರು. ಯಾಕೆಂದರೆ ತುಂಬ ಸ್ಪಷ್ಟವಾಗಿ ಅವರ ಗುಪ್ತಾಂಗ ಕಾಣುವ ರೀತಿಯಲ್ಲಿ ನಿರ್ದೇಶಕರು ಚಿತ್ರಿಸಿದ್ದರು. ಕೂಡಲೇ ಆ ನಿರ್ದೇಶಕನ ಕೆನ್ನೆಗೆ ಬಾರಿಸಿ, ನಂತರ ತಮ್ಮ ಲಾಯರ್ ಭೇಟಿ ಮಾಡಿದ್ದಾಗಿ ಶರನ್ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಸಿನಿಮಾದಲ್ಲಿ ಕೆಮಿಸ್ಟ್ರೀ ಚೆನ್ನಾಗಿ ಇರಬೇಕಾದರೆ ಸಹ-ನಟರ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಸಿನಿಮಾ ನಿರ್ಮಾಣ ಸಂಸ್ಥೆಯವರು ಬಲವಂತ ಮಾಡುತ್ತಿದ್ದರು ಎಂಬ ಕಹಿ ಸತ್ಯವನ್ನೂ ಶರನ್ ಬಾಯಿ ಬಿಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅವರ ‘ದಿ ಬ್ಯೂಟಿ ಆಫ್ ಲಿವಿಂಗ್ ಟ್ವೈಸ್’ ಕೃತಿ ಬಿಡುಗಡೆಗೂ ಮುನ್ನವೇ ಹೈಪ್ ಪಡೆದುಕೊಂಡಿದೆ.
ಇದನ್ನೂ ಓದಿ: 2016ರಲ್ಲಿ ನಡೆದಿದ್ದ ಪ್ರಕರಣ.. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಶಿಕ್ಷಕನಿಗೆ 10 ವರ್ಷ ಜೈಲು ಶಿಕ್ಷೆ
ಸುದ್ದಿ ವಿಶ್ಲೇಷಣೆ: ಕನ್ನಡ ನಟಿಯರು ಮಾತ್ರ ಸುಂಟರಗಾಳಿಗೆ ಸಿಲುಕುತ್ತಿರುವುದೇಕೆ?