India vs England Test Series: ನಿವೃತ್ತರಾಗುವ ಹೊತ್ತಿಗೆ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲಿದ್ದಾರೆ: ಕೆವಿನ್ ಪೀಟರ್ಸನ್
ಕ್ರಿಕೆಟ್ನ ಎಲ್ಲ ಫಾರ್ಮಾಟ್ಗಳಲ್ಲೂ ಅಶ್ವಿನ್ ಉತ್ಕೃಷ್ಟ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಅವರಲ್ಲಿ ಇನ್ನೂ ಎಷ್ಟು ಸಾಮರ್ಥ್ಯ ಉಳಿದಿದೆಯೆಂದರೆ, ಕ್ರಿಕೆಟ್ಗೆ ವಿದಾಯ ಹೇಳುವಾಗ ಸರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಂಡಿರುತ್ತಾರೆ ಎಂದು ಪೀಟರ್ಸನ್ ಹೇಳಿದ್ದಾರೆ.
ಹಿಂದಿ ಭಾಷೆಯ ಮೇಲೆ ಅಪಾರ ಒಲವಿಟ್ಟುಕೊಂಡು ಅದನ್ನು ಮಾತಾಡಲು ಕಲಿತಿರುವ ಮತ್ತು ಭಾರತೀಯ ಕ್ರಿಕೆಟರ್ಗಳನ್ನು ನಿರಂತರವಾಗಿ ಪ್ರಶಂಸಿಸುವ ಇಂಗ್ಲೆಂಡ್ನ ಮಾಜಿ ಆಟಗಾರ ಮತ್ತು ಈಗ ಕಾಮೆಂಟೇಟರ್ ಆಗಿ ಕೆಲಸ ಮಾಡುತ್ತಿರುವ ಕೆವಿನ್ ಪೀಟರ್ಸನ್ ಪ್ರಚಂಡ ಆಫ್-ಸ್ಪಿನ್ನರ್ ರವಿಚಂದ್ರನ್ ಆಶ್ವಿನ್ ಪ್ರಸಕ್ತ ಸರಣಿಯಲ್ಲಿ ನೀಡುತ್ತಿರುವ ಪ್ರದರ್ಶನಗಳನ್ನು ಕೊಂಡಾಡಿ ಅವರು ಭಾರತದ ಸರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ತಮ್ಮ ವೃತ್ತಿಬದುಕಿನ ಉತ್ಕೃಷ್ಟ ಫಾರ್ಮನಲ್ಲಿರುವ ಅಶ್ವಿನ್ ಇಂಗ್ಲೆಂಡ್ ವಿರುದ್ಧ ಬೌಲಿಂಗ್ ಅಲ್ಲದೆ ಬ್ಯಾಟಿಂಗ್ನಲ್ಲೂ ಮಿಂಚುತ್ತಿದ್ದಾರೆ. ಮೊಟೆರಾದಲ್ಲಿ ನಡೆದ ಮೂರನೆ ಟೆಸ್ಟ್ನಲ್ಲಿ ಅವರು ದೀರ್ಘಾವೃತ್ತಿಯ ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದ 4 ನೇ ಭಾರತೀಯನೆನಿಸಿಕೊಂಡರು. ಈ ಸಾಧನೆಯನ್ನು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರ ಅತಿ ವೇಗದಲ್ಲಿ ಮಾಡಿದ ಬೌಲರ್ ಎನಿಸಿಕೊಂಡರು.
ಬೆಟ್ವೇ ಇನ್ಸೈಡರ್ ಹೆಸರಿನ ಕ್ರೀಡಾ ವೆಬ್ಸೈಟ್ಗೆ ಬರೆದಿರುವ ಬ್ಲಾಗ್ನಲ್ಲಿ ಪೀಟರ್ಸನ್, ಅಶ್ವಿನ್ ಅವರಷ್ಟು ಉತ್ತಮವಾಗಿ ಪಿಚ್ ಕಂಡೀಶನ್ಗಳನ್ನು ಬಳಸಿಕೊಳ್ಳುವ ಬೌಲರ್ ಮತ್ತೊಬ್ಬನಿಲ್ಲ ಎಂದು ಹೇಳಿದ್ದಾರೆ.
‘ಎರಡನೇ ಅತಿವೇಗದಲ್ಲಿ 400 ವಿಕೆಟ್ಗಳನ್ನು ಪಡೆಯುವ ಸಾಧನೆಯನ್ನು ಅಶ್ವಿನ್ ಮಾಡಿರುವುದು ಸಾಮಾನ್ಯ ಮಾತಲ್ಲ. ಸ್ವದೇಶದಲ್ಲಿ ಆಡುತ್ತಿರಲಿ ಅಥವಾ ವಿದೇಶದಲ್ಲಿ; ಪಿಚ್ ಕಂಡೀಶನ್ಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳುವ ಅವರು ನಿಸ್ಸಂದೇಹವಾಗಿ ಚಾಣಾಕ್ಷ ಬೌಲರ್. ಅವರ ಬೌಲಿಂಗ್ಲ್ಲಿರುವ ವೈವಿಧ್ಯತೆ ಮತ್ತು ನಿಯಂತ್ರಣ ಅಪ್ರತಿಮವಾದದ್ದು’ ಎಂದು ಪೀಟರ್ಸನ್ ಬ್ಲಾಗ್ನಲ್ಲಿ ಹೇಳಿದ್ದಾರೆ.
‘ಕ್ರಿಕೆಟ್ನ ಎಲ್ಲ ಫಾರ್ಮಾಟ್ಗಳಲ್ಲೂ ಅವರು ಉತ್ಕೃಷ್ಟ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಅವರಲ್ಲಿ ಇನ್ನೂ ಎಷ್ಟು ಸಾಮರ್ಥ್ಯ ಉಳಿದಿದೆಯೆಂದರೆ, ಕ್ರಿಕೆಟ್ಗೆ ವಿದಾಯ ಹೇಳುವಾಗ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಂಡಿರುತ್ತಾರೆ’ ಎಂದು ಪೀಟರ್ಸನ್ ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅವರು ಇದುವರೆಗೆ ಮುಗಿದಿರುವ 3 ಪಂದ್ಯಗಳಲ್ಲಿ 15.71 ಸರಾಸರಿಯಲ್ಲಿ 24 ವಿಕೆಟ್ ಪಡೆದಿದ್ದಾರೆ. ಕಳೆದ ತಿಂಗಳು ಐಸಿಸಿಯ ಮಾಸಿಕ ಕ್ರಿಕೆಟರ್ ಗೌರವಕ್ಕೆ ಪಾತ್ರರಾದ ಅವರು ಪ್ರಸಕ್ತ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿ ಐಸಿಸಿ ಬೌಲರ್ಗಳ ಟೆಸ್ಟ್ ರ್ಯಾಕಿಂಗ್ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಸದರಿ ಸರಣಿಯ ಕೊನೆ ಮತ್ತು ನಾಲ್ಕನೆ ಟೆಸ್ಟ್ ಗುರುವಾರದಂದು ಅದೇ ಮೊಟೆರಾ ಮೈದಾನದಲ್ಲಿ ನಡೆಯಲಿದೆ. ಭಾರತ 2-1 ಅಂತರದ ಮುನ್ನಡೆ ಸಾಧಿಸಿದ್ದು ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಮತ್ತೊಮ್ಮೆ ಇಂಗ್ಲೆಂಡ್ ಆಟಗಾರರನ್ನು ಗೋಳು ಹೊಯ್ದಕೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ: ನ್ಯೂಜಿಲೆಂಡ್ನಲ್ಲಿ ನಾವು ಮೂರೇ ದಿನಗಳಲ್ಲಿ ಟೆಸ್ಟ್ ಸೋತಾಗ ಪಿಚ್ಗಳ ಬಗ್ಗೆ ಯಾರೂ ಮಾತಾಡಲಿಲ್ಲ: ವಿರಾಟ್ ಕೊಹ್ಲಿ
Published On - 10:54 pm, Wed, 3 March 21