AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಹೊಂಡ-ಗುಂಡಿಗಳಿಂದ ಅಪಘಾತವಾದರೆ BBMP ನೀಡುತ್ತೆ ಪರಿಹಾರ; ಇದನ್ನು ಪಡೆಯೋದು ಹೇಗೆ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ದುಸ್ಥಿತಿಯಿಂದ ವಾಹನ ಅಪಘಾತಕ್ಕೆ ಈಡಾಗಿ ಸವಾರ ಗಾಯಗೊಂಡರೆ ಅಥವಾ ಮೃತಪಟ್ಟರೆ ಅವರಗೆ ಪರಿಹಾರ ಸಿಗಲಿದೆ. ಇದರ ಜೊತೆಗೆ ಪಾದಾಚಾರಿ ಮಾರ್ಗದಲ್ಲಿ ಇರುವ ಹೊಂಡ-ಗುಂಡಿಗಳಿಂದ ಪ್ರಾಣಾಪಾಯ ಉಂಟಾದರೂ ಪರಿಹಾರ ಸಿಗಲಿದೆ.

ಬೆಂಗಳೂರಿನ ಹೊಂಡ-ಗುಂಡಿಗಳಿಂದ ಅಪಘಾತವಾದರೆ BBMP ನೀಡುತ್ತೆ ಪರಿಹಾರ; ಇದನ್ನು ಪಡೆಯೋದು ಹೇಗೆ?
ಸಾಂದರ್ಭಿಕ ಚಿತ್ರ
preethi shettigar
| Updated By: ಸಾಧು ಶ್ರೀನಾಥ್​|

Updated on: Dec 04, 2020 | 11:52 AM

Share

ಬೆಂಗಳೂರು: ನಗರದ ರಸ್ತೆಗಳಲ್ಲಿ ಓಡಾಡುವಾಗ ನಿಮಗೆ ಹೊಂಡ-ಗುಂಡಿಗಳಿಲ್ಲದ ರಸ್ತೆ ಎಲ್ಲಾದರೂ ಕಂಡಿದೆಯಾ? ಬಹುಶಃ ಆ ರೀತಿ ದೃಶ್ಯ ಕಾಣೋದು ತುಂಬಾನೇ ಅಪರೂಪ. ಕಾರು-ಜೀಪ್​ಗಳಿಗಿಂತ ದ್ವಿಚಕ್ರ ವಾಹನ ಸವಾರರಿಗೆ ಹೊಂಡ-ಗುಂಡಿಗಳ ಪರಿಚಯ ಹೆಚ್ಚಿರುತ್ತದೆ. ಅನೇಕ ದ್ವಿಚಕ್ರ ವಾಹನ ಚಾಲಕರು ಹೊಂಡ ಗುಂಡಿಯಿಂದಾಗಿ ಬಿದ್ದು ಮೃತಪಟ್ಟ ಉದಾಹರಣೆ ಕೂಡ ಸಾಕಷ್ಟಿದೆ. ಇನ್ನುಮುಂದೆ ಕಳಪೆ ರಸ್ತೆಗಳಿಂದ ಅಪಘಾತ ಉಂಟಾದರೆ ನೀವು ಪರಿಹಾರ ಕೇಳಬಹುದು! ಹೀಗೊಂದು ಅವಕಾಶವನ್ನು ಬಿಬಿಎಂಪಿ ಕಲ್ಪಿಸಿದೆ.

ಹೌದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ದು:ಸ್ಥಿತಿಯಿಂದ ವಾಹನ ಅಪಘಾತಕ್ಕೆ ಈಡಾಗಿ ಸವಾರ ಗಾಯಗೊಂಡರೆ ಅಥವಾ ಮೃತಪಟ್ಟರೆ ಅವರಿಗೆ ಪರಿಹಾರ ಸಿಗಲಿದೆ. ಇದರ ಜೊತೆಗೆ ಪಾದಾಚಾರಿ ಮಾರ್ಗದಲ್ಲಿ ಇರುವ ಹೊಂಡ-ಗುಂಡಿಗಳಿಂದ ಪ್ರಾಣಾಪಾಯ ಉಂಟಾದರೂ ಪರಿಹಾರ ಸಿಗಲಿದೆ.

ಯಾರು ಪರಿಹಾರಕ್ಕೆ ಅರ್ಜಿ ಹಾಕಬಹುದು?:

ರಸ್ತೆಯ ಗುಣಮಟ್ಟ ಹಾಳಾಗಿದ್ದು ಅಥವಾ ರಸ್ತೆಯಲ್ಲಿರುವ ಗುಂಡಿಗಳಿಂದ ಅಪಘಾತವಾಗಿದ್ದರೆ ಅಂಥವರು ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಪ್ರಕರಣವನ್ನು ಬಿಬಿಎಂಪಿಯವರು ಪರಿಶೀಲಿಸಿ ನಂತರದಲ್ಲಿ ನಿಯಮಗಳ ಪ್ರಕಾರ ಎಷ್ಟು ಪರಿಹಾರ ನೀಡಬೇಕೋ ಅದನ್ನು ನೀಡಲಿದೆ.

ಎಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು?:

ಅಪಘಾತ ನಡೆದ ಒಂದು ತಿಂಗಳೊಳಗಾಗಿ ವಿಶೇಷ ಆಯುಕ್ತ (ಕಂದಾಯ) ಅಥವಾ ಇದಕ್ಕಾಗಿ ನೇಮಕಗೊಂಡ ವಿಶೇಷ ಅಧಿಕಾರಿ ಎದುರು ಅರ್ಜಿ ಸಲ್ಲಿಕೆ ಮಾಡಬೇಕು. ಒಂದು ತಿಂಗಳ ನಂತರದಲ್ಲಿ ಬರುವ ಮನವಿಯನ್ನು ಬಿಬಿಎಂಪಿ ಸ್ವೀಕಾರ ಮಾಡುವುದಿಲ್ಲ. ಅರ್ಜಿ ಸಲ್ಲಿಕೆ ಆದ ಏಳು ದಿನಗಳ ಒಳಗಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಅರ್ಜಿದಾರ ನೀಡಿದ ದಾಖಲೆಗಳು ಸರಿಯಾಗಿದ್ದರೆ, ಆಯುಕ್ತರು ಅಥವಾ ವಿಶೇಷ ಅಧಿಕಾರಿ ಅಪಘಾತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಒಂದೊಮ್ಮೆ ನೀವು ಮನವಿಯಲ್ಲಿ ಸತ್ಯ ಇದೆ ಎಂಬುದು ವಿಶೇಷ ಆಯುಕ್ತರಿಗೆ (ಕಂದಾಯ) ಮನದಟ್ಟಾದರೆ ಅವರು ಪರಿಹಾರ ನೀಡುವಂತೆ ಸೂಚನೆ ಮಾಡುತ್ತಾರೆ.

ಪರಿಹಾರ ಹಣ ಎಷ್ಟು?:

ಅಪಘಾತದಲ್ಲಿ ಮೃತಪಟ್ಟರೆ, ಗಾಯಗೊಂಡರೆ ಎಷ್ಟು ಪರಿಹಾರ ಸಿಗುತ್ತದೆ ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ರಸ್ತೆ ಸರಿ ಇಲ್ಲದೆ ಅಪಘಾತ ಸಂಭವಿಸಿದ್ದು ಸಾಬೀತಾದರೆ  ಬಿಬಿಎಂಪಿ ಮೃತರ ಕುಟುಂಬಕ್ಕೆ 3 ಲಕ್ಷ ರೂಪಾಯಿ ಹಾಗೂ ಗಾಯಗೊಂಡರೆ 15 ಸಾವಿರ ರೂಪಾಯಿ ಪರಿಹಾರ ನೀಡಲಿದೆ. ಸಣ್ಣ-ಪುಟ್ಟ ಗಾಯಗಳಾಗಿದ್ದರೆ 10 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಕಂದಾಯ ಆಯುಕ್ತರು ಸೂಚನೆ ನೀಡಬಹುದು.

ನಿಮ್ಮ ಮನವಿ ತಿರಸ್ಕಾರಗೊಳ್ಳಬಹುದು:

ಒಂದೊಮ್ಮೆ ನೀವು ನೀಡಿದ ದಾಖಲೆಗಳು ತಿರುಚಿದ್ದು ಕಂಡುಬಂದಲ್ಲಿ ಅಂಥ ಸಂದರ್ಭದಲ್ಲಿ ನಿಮ್ಮ ಅರ್ಜಿ ತಿರಸ್ಕಾರಗೊಳ್ಳಲಿದೆ. ಒಂದೊಮ್ಮೆ ಬೇರೆ ವಾಹನದಿಂದ ಅಪಘಾತ ಉಂಟಾಗಿ ಅದನ್ನು ನೀವು ರಸ್ತೆ ಸರಿಯಿಲ್ಲ ಎಂದು ಮೃತಪಟ್ಟಿರುವುದಾಗಿ ತೋರಿಸಿದರೂ ಪರಿಹಾರ ಸಿಗುವುದಿಲ್ಲ.

ಪರಿಹಾರ ಸಿಗೋಕೆ ಎಷ್ಟು ದಿನ ಬೇಕು?:

ನೀವು ಅರ್ಜಿ ಸಲ್ಲಿಕೆ ಮಾಡಿದ 45 ದಿನಗಳ ಒಳಗಾಗಿ ಕಂದಾಯ ಆಯುಕ್ತ ಅಥವಾ ಅಧಿಕಾರಿ ಪರಿಹಾರ ನೀಡುವಂತೆ ಆದೇಶಿಸುತ್ತಾರೆ. ಈ ಆದೇಶ ಹೊರಡಿಸಿದ 55 ಕೆಲಸದ ದಿನಗಳ ಒಳಗಾಗಿ ಪರಿಹಾರದ ಹಣ ಸಿಗಲಿದೆ.