ರಮೇಶ್ ಜಾರಕಿಹೊಳಿಗೆ ಚುನಾವಣೆ ಉಸ್ತುವಾರಿಯಿಂದ ಕೊಕ್.. ಹೊಸ ನಾಯಕತ್ವ ಹುಡುಕಾಟದಲ್ಲಿ ಕೇಸರಿ ಪಡೆ
belagavi lok sabha by election 2021| ಇದೀಗ ಜಾರಕಿಹೊಳಿ ಸಹೋದರರನ್ನ ಕೈ ಬಿಟ್ರೇ ಬಿಜೆಪಿಗೆ ಹಿನ್ನಡೆಯಾಗುವ ಆತಂಕವೂ ಇದೆ. ಈ ಕಾರಣಕ್ಕೆ ಬಾಲಚಂದ್ರ ಜಾರಕಿಹೊಳಿಗೆ ಉಸ್ತುವಾರಿ ನೀಡುವಂತೆ ಕೆಲ ಮೂಲ ಬಿಜೆಪಿ ಮುಖಂಡರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆಯಾಗಿದೆ. ಬೆಳಗಾವಿಯಲ್ಲಿ ಸಂಸದೀಯ ಕ್ಷೇತ್ರವೊಂದಕ್ಕೆ ಉಪಚುನಾವಣೆ ನಡೆಯಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ಅಂದರೆ ರಮೇಶ್ ಜಾರಕಿಹೊಳಿ ಹೆಗಲಿಗೆ ಜವಾಬ್ದಾರಿ ವಹಿಸುತ್ತಿತ್ತು ಆಡಳಿತಾರೂಢ ಬಿಜೆಪಿ ಪಕ್ಷ. ರಮೇಶ್ ಸಹ ತಣ್ಣಗೆ ತಮ್ಮ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದರು. ಆದರೆ ಈಗ ಚಿತ್ರಣ ಬದಲಾಗಿದೆ. ರಾಜಕೀಯವಾಗಿ ಜಾರಕಿಹೊಳಿ ವರ್ಜ್ಯ, ಅಪಥ್ಯ ಅನ್ನುವಂತಾಗಿದೆ ಬಿಜೆಪಿಗೆ. ಇದಕ್ಕೆ ಕಾರಣ ಏನೆಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಅದುವೇ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ.
ಸಿಡಿ ಬಹಿರಂಗ ಬೆನ್ನಲ್ಲೇ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಪರ್ಯಾಯ ನಾಯಕತ್ವದ ಹುಡುಕಾಟ ಆರಂಭವಾಗಿದೆ. ಉಪಚುನಾವಣೆ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದ ರಮೇಶ್ ಗೆ ಇದೀಗ ಚುನಾವಣೆ ಉಸ್ತುವಾರಿಗೆ ಕೊಕ್ ನೀಡಲಾಗಿದೆ. ಕೇಸರಿ ಪಡೆ ಹೊಸ ನಾಯಕತ್ವ ಹುಡುಕಾಟದಲ್ಲಿ ತೊಡಗಿದೆ.
ಸುರೇಶ್ ಅಂಗಡಿ ಸಾವಿನಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 17ರಂದು ಮತದಾನ ನಡೆಯಲಿದೆ. ಸಿಡಿ ಬಿಡುಗಡೆಗೂ ಮುನ್ನ ಬಿಜೆಪಿ ಸಹಜವಾಗಿಯೇ ರಮೇಶ್ ಗೆ ಉಪಚುನಾವಣೆ ಉಸ್ತುವಾರಿ ನೀಡಿತ್ತು. ಆದರೆ ಈಗ ಅನಿವಾರ್ಯವಾಗಿ ಇದೀಗ ಬೇರೊಬ್ಬ ನಾಯಕರಿಗೆ ಉಪಚುನಾವಣೆ ಜವಾಬ್ದಾರಿ ನೀಡಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಉಮೇಶ್ ಕತ್ತಿ ಅಥವಾ ಸಿಎಂ ಪುತ್ರ ವಿಜಯೇಂದ್ರ ಹೆಸರು ಮುಂಚೂಣಿಯಲ್ಲಿರುವುದು ಗಮನಾರ್ಹ.
ಶೀಘ್ರದಲ್ಲಿ ಸಭೆ ನಡೆಸಿ ಯಾರಿಗೆ ಉಸ್ತುವಾರಿ ನೀಡಬೇಕು ಅಂತಾ ತೀರ್ಮಾನವಾಗುವ ಸಾಧ್ಯತೆಯಿದೆ. ಈಗಾಗಲೇ ಡಿಸಿಎಂ ಸವದಿ ಮತ್ತು ಉಮೇಶ್ ಕತ್ತಿ ಸಿಎಂ ಯಡಿಯೂರಪ್ಪ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಈ ನಾಯಕರಿಬ್ಬರೂ ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳುವ ಆಶಯ, ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಮಧ್ಯೆ ರಮೇಶ್ ಜಾರಕಿಹೊಳಿ ಬ್ರದರ್ ಬಾಲಚಂದ್ರ ಜಾರಕಿಹೊಳಿ ಅವರಿಗೇ ಉಸ್ತುವಾರಿ ನೀಡುವಂತೆ ಕೆಲ ಸಚಿವರು ಮತ್ತು ಶಾಸಕರು ಪಟ್ಟು ಹಿಡಿದಿರುವುದು ಸೋಜಿಗವಾಗಿದೆ. ಇದಕ್ಕೆ ಪ್ರಧಾನ ಕಾರಣ ಬೆಳಗಾವಿಯಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಜಾರಕಿಹೊಳಿ ಬ್ರದರ್ಸ್! ಇದೀಗ ಜಾರಕಿಹೊಳಿ ಸಹೋದರರನ್ನ ಕೈ ಬಿಟ್ರೇ ಬಿಜೆಪಿಗೆ ಹಿನ್ನಡೆಯಾಗುವ ಆತಂಕವೂ ಇದೆ. ಈ ಕಾರಣಕ್ಕೆ ಬಾಲಚಂದ್ರ ಜಾರಕಿಹೊಳಿಗೆ ಉಸ್ತುವಾರಿ ನೀಡುವಂತೆ ಕೆಲ ಮೂಲ ಬಿಜೆಪಿ ಮುಖಂಡರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬ್ರದರ್ಸ್ ಸಿಎಂ ಮತ್ತು ಗೃಹ ಸಚಿವರನ್ನ ಭೇಟಿಯಾಗುವ ಸಾಧ್ಯತೆ:
ಸಿಡಿ ವಿಚಾರ ಸಮರ್ಥನೆ ವಿಷಯದಲ್ಲಿ ಬಿಜೆಪಿ ನಾಯಕರು ಹಿಂದೇಟು ಹಾಕಿರುವುದುರ ಬೆನ್ನಿಗೇ ಬಿಜೆಪಿ ನಾಯಕರ ಈ ನಡೆಯಿಂದ ಜಾರಕಿಹೊಳಿ ಬ್ರದರ್ಸ್ ಬೇಸರಗೊಂಡಿದ್ದಾರೆ. ಈ ಹಿನ್ನೆಲೆ ಸರ್ಕಾರದ ಮೇಲೆ ಒಂದಷ್ಟು ಬೇಸರ ವ್ಯಕ್ತ ಪಡಿಸುತ್ತಿರುವ ಬ್ರದರ್ಸ್ ಇಂದು ಸಿಎಂ ಮತ್ತು ಗೃಹ ಸಚಿವರನ್ನ ಭೇಟಿ ಮಾಡುವ ಸಾಧ್ಯತೆಯೂ ಇದೆ. ಪ್ರಕರಣ ತನಿಖೆ ಯಾವ ಹಂತದಲ್ಲಿದೆ ಸಾಗುತ್ತಿದೆ. ಈ ಪ್ರಕರಣ ಎಲ್ಲಿಗೆ ಹೋಗಿ ತಲುಪಬಹುದು ಎಂಬುದರ ಬಗ್ಗೆಯೂ ಚರ್ಚೆ ಸಾಧ್ಯತೆಯಿದೆ.
Published On - 10:16 am, Fri, 19 March 21