ಒಂದು ತುತ್ತು ಅನ್ನ ಹೆಚ್ಚಾದರೆ ಎಲ್ಲಿ ದಪ್ಪ ಆಗುತ್ತೇವೋ ಅಂತ ಯೋಚಿವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಅತಿಯಾದ ಅನ್ನ ಸೇವಿಸುವುದು ಒಳ್ಳೆಯದಲ್ಲ. ಹಾಗಂತ ಅನ್ನ ತಿನ್ನದೆ ಇದ್ದರೂ ದೈಹಿಕ ಸಾಮರ್ಥ್ಯ ಹೆಚ್ಚಾಗಲ್ಲ. ಇದೇನೆ ಇರಲಿ. ನಿಮಗೆ ಕುಚ್ಚಲಕ್ಕಿ (Brown Rice) ಗೊತ್ತಾ? ಕುಚ್ಚಲಕ್ಕಿಯಿಂದ ಸೌಂದರ್ಯ ಹೆಚ್ಚುತ್ತದೆ ಅಂದರೆ ನೀವು ನಂಬುತ್ತೀರಾ? ಬ್ರೌನ್ ರೈಸ್ನ ಕನ್ನಡದಲ್ಲಿ ಕುಚ್ಚಲಕ್ಕಿ ಅಂತ ಕರೆಯಲಾಗುತ್ತದೆ. ಇದರಲ್ಲಿ ಸೌಂದರ್ಯ ಹೆಚ್ಚಿಸುವ ಕೆಲ ಗುಣಗಳು ಅಡಗಿವೆ.
ಆರೋಗ್ಯ ದೃಷ್ಟಿಯಿಂದ ಕುಚ್ಚಲಕ್ಕಿ (Brown Rice) ತುಂಬಾ ಒಳ್ಳೆಯದು. ದೇಹವನ್ನು ಹೆಚ್ಚು ತಂಪಾಗಿಸುವ ಈ ಅಕ್ಕಿ ಬೆಳ್ತಿಗೆ ಅಕ್ಕಿಗಿಂತ ಒಳ್ಳೆಯದು. ಹೆಚ್ಚು ಪೋಷಕಾಂಶವನ್ನು ಕುಚ್ಚಲಕ್ಕಿ ಹೊಂದಿದೆ. ಇದರ ಗಂಜಿ ತುಂಬಾ ರುಚಿಯಾಗಿರುತ್ತದೆ. ಇದನ್ನು ವಾರಕ್ಕೆ ಕನಿಷ್ಠ ಎರಡು ಬಾರಿ ಸೇವಿಸದರೆ ಒಳ್ಳೆಯದು. ಕಿಡ್ನಿ ಸ್ಟೋನ್, ಮಧುಮೇಹದಂತಹ ಕಾಯಿಲೆಗಳನ್ನು ದೂರ ಮಾಡುತ್ತದೆ.
ಸೌಂದರ್ಯ ಹೆಚ್ಚಿಸುವ ಗುಣಗಳು
* ಚರ್ಮ ಹೊಳೆಯುತ್ತದೆ
ಪಳ ಪಳನೆ ಹೊಳೆಯುವ ಮುಖ ಎಲ್ಲರಿಗೂ ಇಷ್ಟವಾಗುತ್ತದೆ. ಕುಚ್ಚಲಕ್ಕಿಯಲ್ಲಿರುವ ಸೆಲೆನಿಯಮ್ ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖ ಕಾಂತಿಯುತವಾಗಲು ಕುಚ್ಚಲಕ್ಕಿಯಿಂದ ಫೇಸ್ ಪ್ಯಾಕ್ ಸಿದ್ಧಪಡಿಸಬೇಕು. ಇದಕ್ಕೆ 2 ಚಮಚ ಕುಚ್ಚಲಕ್ಕಿ ಮತ್ತು ಒಂದು ಚಮಚ ಮೊಸರು ಬೇಕಾಗುತ್ತದೆ. ಮೊದಲು ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಮೊಸರನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಸುಮಾರು 10 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡಬಹುದು.
* ಮೊಡವೆ ನಿವಾರಣೆ
ಮೊಡವೆಗಳಿಗೆ ಇದು ಉತ್ತಮ ಔಷಧಿಯಾಗಿದೆ. ಕುಚ್ಚಲಕ್ಕಿಯಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಮೆಗ್ನೀಸಿಯಮ್ ಇದೆ. ಇದು ಚರ್ಮದ ಕಲೆಗಳು ಮತ್ತು ಮೊಡವೆಗಳಿಂದ ರಕ್ಷಿಸುತ್ತದೆ. ಮೊಡವೆಗಳ ಸುತ್ತಲಿನ ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಫೇಸ್ ಪ್ಯಾಕ್ಗೆ 2 ಚಮಚ ಅಕ್ಕಿ ನೀರು ಬೇಕಾಗುತ್ತದೆ. ಹತ್ತಿಯನ್ನು ಅಕ್ಕಿ ನೀರಿನಲ್ಲಿ ಅದ್ದಿ, ಪೀಡಿತ ಪ್ರದೇಶಗಳಲ್ಲಿ ಹಚ್ಚಿ. 10 ರಿಂದ 15 ನಿಮಿಷಗಳ ಕಾಲ ಮುಖ ಒಣಗಲು ಬಿಡಿ. ಇದನ್ನು ವಾರದಲ್ಲಿ ಮೂರು ದಿನ ಮಾಡಬಹುದು.
* ಕೂದಲಿಗೆ ಹೆಚ್ಚು ಪ್ರಯೋಜನಕಾರಿ
ಕೂದಲಿನ ಆರೋಗ್ಯ ಕಾಪಾಡಲು ಬ್ರೌನ್ ರೈಸ್ ಒಳ್ಳೆಯದು. ಕುಚ್ಚಲಕ್ಕಿ ವಿಟಮಿನ್ ಬಿ 1, ವಿಟಮಿನ್ ಬಿ 3, ವಿಟಮಿನ್ ಬಿ 6, ವಿಟಮಿನ್ ಇ, ಫೋಲಾಸಿನ್, ಪೊಟ್ಯಾಸಿಯಮ್ ಮತ್ತು ಫೈಬರ್ ಇರುತ್ತದೆ. ಆರೋಗ್ಯಕರ ಕೂದಲಿಗೆ ಇವೆಲ್ಲವೂ ಅವಶ್ಯಕ. ಕುಚ್ಚಲಕ್ಕಿ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಹೀಗಾಗಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.
* ಹೇರ್ ಸ್ಪ್ಲಿಟ್ಸ್ ನಿವಾರಣೆಯಾಗುತ್ತದೆ
ಹೇರ್ ಸ್ಪ್ಲಿಟ್ಸ್ ಆಗಿದ್ದರೆ ಮತ್ತು ಕೂದಲು ಉದುರುತ್ತಿದ್ದರೆ ಕುಚ್ಚಲಕ್ಕಿ ಬಳಸಿ. ಕೂದಲು ಒಡೆಯುವುದನ್ನು ಕಡಿಮೆ ಮಾಡಲು ಪ್ಯಾಕ್ ರೆಡಿ ಮಾಡಿ. 3 ರಿಂದ 4 ಚಮಚ ಅಕ್ಕಿ ಹಿಟ್ಟು, 1 ಮೊಟ್ಟೆ ಮತ್ತು 1 ಕಪ್ ನೀರು ಬೇಕಾಗುತ್ತದೆ. ಅಕ್ಕಿ ಹಿಟ್ಟಿಗೆ ಎಗ್ ವೈಟ್ ಹಾಕಿ. ಅದಕ್ಕೆ ಒಂದು ಕಪ್ ನೀರು ಸೇರಿಸಿ. ಈ ಮಿಶ್ರಣ ಸ್ವಲ್ಪ ನೊರೆಯಾಗುವಂತೆ ಕಲಸಿ. ನಂತರ ಕೂದಲಿಗೆ ಹಚ್ಚಿ, 10 ನಿಮಿಷಗಳ ನಂತರ ತೊಳೆಯಿರಿ.
* ಕೂದಲಿಗೆ ಕಂಡಿಷನರ್
ಕಂಡಿಷನರ್ ಬಳಸಿದರೆ ಕೂದಲು ರೇಷ್ಮೆಯಂತೆ ಹೊಳೆಯುತ್ತದೆ. ಹೀಗಾಗಿ ಕುಚ್ಚಲಕ್ಕಿಯಲ್ಲಿ ನೈಸರ್ಗಿಕ ಕಂಡಿಷನರ್ ತಯಾರಿಸಬಹುದು. ಕಂಡಿಷನರ್ ಸಿದ್ಧಪಡಿಸಲು 1 ಕಪ್ ಕುಚ್ಚಲಕ್ಕಿ ನೀರು ಮತ್ತು ಲ್ಯಾವೆಂಡರ್ ಎಣ್ಣೆ ಬೇಕಾಗುತ್ತವೆ. ಕುಚ್ಚಲಕ್ಕಿ ನೀರಿಗೆ ಸ್ವಲ್ಪ ಲ್ಯಾವೆಂಡರ್ ಎಣ್ಣೆ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ಶಾಂಪೂ ಹಾಕಿ ಕೂದಲು ತೊಳೆದ ಬಳಿಕ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ. ಇದನ್ನು 10 ರಿಂದ 15 ನಿಮಿಷಗಳ ಕಾಲ ಬಿಡಿ, ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಪ್ರತಿ ಬಾರಿ ತಲೆ ಸ್ನಾನ ಮಾಡುವಾಗ ಬಳಸಬಹುದು.
ಇದನ್ನೂ ಓದಿ
ನೀವು ಎಗ್ ಕಾಫಿ ಕುಡಿದಿದ್ದೀರಾ? ಮಾಡುವ ವಿಧಾನ ಸುಲಭವಿದೆ
(Benefits of Brown Rice for beauty)