ಮುತ್ತು ಕೊಡುವ ಮುನ್ನ ಗೊತ್ತು ಮಾಡಿಕೊಳ್ಳಬೇಕಾದ ಗುಟ್ಟುಗಳು!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 09, 2021 | 7:58 PM

ಅಧರವನ್ನು ಕರಗಿಸುವ ಮಧುರ ಅನುಭೂತಿಯಾದ ಮುತ್ತಿನ ವಿಚಾರಕ್ಕೆ ಬಂದರೂ ನಮ್ಮಲ್ಲಿ ಅದೆಷ್ಟು ಜನರು ಮುಕ್ತವಾಗಿ ಯೋಚಿಸಬಲ್ಲರು? ಕದ್ದುಮುಚ್ಚಿ ಮುತ್ತು ಕೊಡುವುದರಲ್ಲೇ ತೃಪ್ತಿ ಅನುಭವಿಸುವ ಈ ಅಲ್ಪತೃಪ್ತರ ನಡುವೆ ಹೀಗೇ ಮುತ್ತನ್ನು ಕೊಡಬೇಕು, ಮುತ್ತಿನಲ್ಲಿ ಮತ್ತು ತುಂಬುವುದು ಹೀಗೆ, ಮುತ್ತೆಂದರೆ ಗಡಿಬಿಡಿಯ ಖಾದ್ಯವಲ್ಲ ಎಂದು ಬುದ್ಧಿವಾದ ಹೇಳುವವರ ಕೊರತೆ ನಿಜಕ್ಕೂ ಇದೆ.

ಮುತ್ತು ಕೊಡುವ ಮುನ್ನ ಗೊತ್ತು ಮಾಡಿಕೊಳ್ಳಬೇಕಾದ ಗುಟ್ಟುಗಳು!
ಮುತ್ತಿಡುವ ಮುನ್ನ ಮರೆಯಲೇಬಾರದ ಸಂಗತಿಗಳು
Follow us on

ಹರೆಯಕ್ಕೆ ಕಾಲಿಟ್ಟ ನಂತರ ಮನಸ್ಸು ದೇಹದೊಂದಿಗೆ ಸ್ಪರ್ಧೆಗೆ ಬಿದ್ದಂತೆ ದಿನೇ ದಿನೇ ಅರಳುತ್ತಲೇ ಸಾಗುತ್ತದೆ. ಹುಟ್ಟಿದಾಗಿನಿಂದ ಒಂದಷ್ಟು ಜನರೊಂದಿಗೆ ಮಾತ್ರ ಸಲುಗೆಯಿಂದ ಕಳೆದ ಜೀವಕ್ಕೆ ಅದರಾಚೆಗೆ ಒಂದು ಸಾಂಗತ್ಯ ಬೇಕೆಂಬ ಹಂಬಲ ಹುಟ್ಟುತ್ತದೆ. ತೀರಾ ಸೆಕೆಂಡುಗಳಷ್ಟೇ ಹೊತ್ತು ಪಕ್ಕದಲ್ಲಿ ಉಳಿದ ಹುಡುಗನ ನೆನಪು ಹುಡುಗಿಯ ಎದೆಯಲ್ಲಿ ಎಲ್ಲಿಲ್ಲದಷ್ಟು ಅಲೆಯೆಬ್ಬಿಸಿದರೆ, ಅವಳ ಕಣ್ಣ ಪಕ್ಕದಲ್ಲಿ ಇಳಿಬಿದ್ದ ಒಂದೇ ಒಂದು ಎಳೆಯ ಮುಂಗುರುಳು ಕೂಡಾ ಹುಡುಗನ ಉಸಿರನ್ನೇ ಕಟ್ಟಿಹಾಕುತ್ತದೆ. ಇದು ಯಾವುದೋ ಮಾಯಾ ಪ್ರಪಂಚದ ವೈಭವೀಕೃತ ಕತೆಗಳೂ ಅಲ್ಲ ಅಥವಾ ಶತಮಾನಗಳಷ್ಟು ಹಿಂದೆ ಜರುಗುತ್ತಿದ್ದ ಪವಾಡಗಳೂ ಅಲ್ಲ. ಇದು ನಮ್ಮ, ನಿಮ್ಮೆಲ್ಲರ ಬದುಕಿನ ಹರೆಯದ ಘಟ್ಟದಲ್ಲಿ ಉಲ್ಬಣಿಸುವ ಸಹಜ, ಸುಂದರ ಭಾವನೆಗಳ ಒಂದು ಸಣ್ಣ ಎಳೆಯಷ್ಟೇ.

ಹರೆಯದ ಬಗ್ಗೆ ಆಗಷ್ಟೇ ಅರಳುವ ಮೊಗ್ಗುಗಳಿಗೆ ಕುತೂಹಲ ಸಹಜ. ಆದರೆ, ಈ ಕುತೂಹಲ ತಣಿಸಿಕೊಳ್ಳಬೇಕೆಂಬ ಆತುರವೇ ಅದೆಷ್ಟೋ ಬಾರಿ ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಭಾರತದಲ್ಲಂತೂ ಇಂದಿಗೂ ಸಹ ಪ್ರೀತಿ, ಪ್ರೇಮ ಎಂಬ ವಿಚಾರಗಳು ಗುಟ್ಟು ಗುಟ್ಟಾಗಿ ನಡೆಯಬೇಕಾದ ವಿಚಾರಗಳೆಂಬಂತೆ ಬಿಂಬಿತವಾಗಿವೆ. ಇನ್ನು ಅದರಾಚೆಗಿನ ಕ್ರಿಯೆ, ಪ್ರಕ್ರಿಯೆ, ವಿಧಿ ವಿಧಾನಗಳ ಬಗ್ಗೆ ಯೋಚಿಸುವುದೇ ಅಪರಾಧ ಎಂಬಂತಹ ಮನೋಭಾವವೂ ಹಲವರಲ್ಲಿದೆ. ಈಗಿನ ಹೊಸ ತಲೆಮಾರುಗಳು ಇಂತಹ ಕಟ್ಟುಪಾಡುಗಳನ್ನು ಕೊಂಚ ಸಡಿಲಿಸಿಕೊಂಡಂತೆ ಕಾಣುತ್ತದಾದರೂ ಪ್ರೀತಿ, ಪ್ರೇಮದ ವಿಚಾರವನ್ನು ಮುಕ್ತವಾಗಿ ಅನುಭವಿಸುವಲ್ಲಿ ಇನ್ನೂ ಪಳಗಿದಂತಿಲ್ಲ.

ಅಷ್ಟೆಲ್ಲಾ ಆಳಕ್ಕಿಳಿಯುವುದು ಬೇಡ ಬಿಡಿ. ಅಧರವನ್ನು ಕರಗಿಸುವ ಮಧುರ ಅನುಭೂತಿಯಾದ ಮುತ್ತಿನ ವಿಚಾರಕ್ಕೆ ಬಂದರೂ ನಮ್ಮಲ್ಲಿ ಅದೆಷ್ಟು ಜನರು ಮುಕ್ತವಾಗಿ ಯೋಚಿಸಬಲ್ಲರು? ಕದ್ದುಮುಚ್ಚಿ ಮುತ್ತು ಕೊಡುವುದರಲ್ಲೇ ತೃಪ್ತಿ ಅನುಭವಿಸುವ ಈ ಅಲ್ಪತೃಪ್ತರ ನಡುವೆ ಹೀಗೇ ಮುತ್ತನ್ನು ಕೊಡಬೇಕು, ಮುತ್ತಿನಲ್ಲಿ ಮತ್ತು ತುಂಬುವುದು ಹೀಗೆ, ಮುತ್ತೆಂದರೆ ಗಡಿಬಿಡಿಯ ಖಾದ್ಯವಲ್ಲ ಎಂದು ಬುದ್ಧಿವಾದ ಹೇಳುವವರ ಕೊರತೆ ನಿಜಕ್ಕೂ ಇದೆ. ಹೀಗಾಗಿಯೇ ಈ ತುಟಿಗಳ ನಡುವಿನ ವಿರಹ ವೇದನೆಗೆ ಒಂದು ತಾರ್ಕಿಕ ಅಂತ್ಯ ಕಾಣಿಸಲು ಹರೆಯದ ಹೊಸ್ತಿಲು ದಾಟುತ್ತಿರುವ ಅನನುಭವಿಗಳಿಗೆ ಒಂದಷ್ಟು ಸಲಹೆ ಇಲ್ಲಿದೆ.

ಚುಂಬನದಲ್ಲಿ ಕಾಮ, ಪೂರ್ಣವಿರಾಮಗಳನ್ನು ಅಷ್ಟು ಬೇಗನೇ ಇಟ್ಟುಬಿಡಬೇಡಿ
ಒಂದು ಸುದೀರ್ಘ ಚುಂಬನ ನಿಮ್ಮ ದೇಹದಲ್ಲಿ ರೋಮಾಂಚನವನ್ನುಂಟು ಮಾಡಬಲ್ಲದು. ಕೇವಲ ದೈಹಿಕ ಅಭಿಲಾಷೆಗಳನ್ನಷ್ಟೇ ಅಲ್ಲದೇ ಮನಸ್ಸಿನ ತೊಳಲಾಟಗಳಿಗೂ ಮುಕ್ತಿ ಕೊಡುವ ಮಂತ್ರವದು. ಹೀಗಾಗಿ ತುಟಿಗೆ ತುಟಿ ಒತ್ತುವಾಗ ಅಲ್ಲಿ ಕಾಮ, ಪೂರ್ಣ ವಿರಾಮ ಅಥವಾ ಅರ್ಥಬದ್ಧ ವ್ಯಾಕರಣಗಳಿರಬೇಕೆಂಬ ಗೋಜಿಗೆ ಹೋಗದೇ ನಿಮ್ಮ ಮನಸ್ಸು ಬಯಸುವಷ್ಟು ಹೊತ್ತು ತಲ್ಲೀನರಾಗಿ. ಅದು ನಿಮ್ಮ ವೈಯಕ್ತಿಕ ಖುಷಿಯನ್ನು ವೃದ್ಧಿಸುವುದಷ್ಟೇ ಅಲ್ಲದೇ ಪರಸ್ಪರರ ಸಂಬಂಧವನ್ನೂ ಬಿಗಿಗೊಳಿಸುತ್ತದೆ.

ಮುತ್ತಿಡುವ ತುಟಿಗೂ ಆರೈಕೆ ಇರಲಿ
ಮುತ್ತಿನಲ್ಲಿ ಒಳ್ಳೆಯದು, ಸಾಧಾರಣದ್ದು, ಕಳಪೆಯದ್ದು ಎಂಬೆಲ್ಲಾ ವಿಧಗಳಿರುತ್ತವಾ? ಎಂದು ಯೋಚಿಸುತ್ತಿದ್ದರೆ ಖಂಡಿತಾ ಅದು ಸರಿಯಾದ ಯೋಚನೆ! ಏಕೆಂದರೆ ಒಣಗಿದ ಒರಟು ತುಟಿಗಳಿಂದ ಮುತ್ತಿಡಲು ಹೋದರೆ ಅದು ಖುಷಿಗಿಂತ ಹೆಚ್ಚು ಮುಜುಗರ, ಇರಿಸುಮುರಿಸಿಗೆ ಕಾರಣವಾಗಬಹುದು. ಹೀಗಾಗಿ ಮುತ್ತು ಎಷ್ಟು ಮುಖ್ಯವೋ ಮುತ್ತಿಡುವ ತುಟಿಗಳ ಆರೋಗ್ಯವೂ ಅಷ್ಟೇ ಮುಖ್ಯ. ಈ ಕಾರಣದಿಂದಾಗಿ ನೀವು ನಿಮ್ಮ ತುಟಿಗಳ ಮೃದುತ್ವ ಕಾಪಾಡಿಕೊಳ್ಳಲು ಕಾಳಜಿ ವಹಿಸಲೇಬೇಕು. ಅಂತೆಯೇ, ಅಪ್ಪಿತಪ್ಪಿಯೂ ಬಾಯಿ ದುರ್ನಾತ ಬೀರುವ ಹೊತ್ತಲ್ಲಿ ಮುತ್ತಿಡುವ ಸಾಹಸ ಮಾಡಬೇಡಿ. ನಿಮ್ಮ ಬಾಯಿ ಪರಿಮಳಯುಕ್ತವಾಗಿರುವಂತೆ ನೋಡಿಕೊಳ್ಳುವುದೂ ಇಲ್ಲಿ ಮುಖ್ಯ ಎಂಬುದನ್ನು ಮರೆಯಬೇಡಿ.

ಮುತ್ತಿನ ಬಯಕೆಯನ್ನು ನಯವಾಗಿ ಬಿಟ್ಟುಕೊಡಿ
ಪ್ರೀತಿ, ಪ್ರೇಮವೇನೋ ಕಣ್ಮುಚ್ಚಿ ಬಿಡುವಷ್ಟರಲ್ಲಿ ಆಗಿಬಿಡಬಹುದು. ಆದರೆ, ಮುತ್ತು ಹಾಗಲ್ಲವಲ್ಲ. ಹೀಗಾಗಿಯೇ ಏಕಾಏಕಿ ಹೆಜ್ಜೇನು ದಾಳಿಯಿಟ್ಟಂತೆ ಮುತ್ತು ಕೊಡುವ ಬದಲು ಮೆಲ್ಲಗೆ ನಿಮ್ಮ ಸಂಗಾತಿಗೆ ಒಂದಷ್ಟು ಸೂಚನೆಗಳನ್ನು ಕಣ್ಣಲ್ಲೇ ರವಾನಿಸಿ. ಅವರಿಗೂ ನಿಮ್ಮ ಬಯಕೆ ನಾಟುವಂತೆ ವರ್ತಿಸಿ. ಮಾತನಾಡುತ್ತ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಹಾಗೇ ಒಂದಿಂಚು ಕೆಳಗೆ ದೃಷ್ಟಿ ಹರಿಸಿ ಕೆಂದುಟಿಯನ್ನು ಗಮನಿಸಿ ತುಸು ನಕ್ಕರೆ ತಲುಪಬೇಕಾದ ಸಂದೇಶ ಮಿಂಚಿನಷ್ಟೇ ವೇಗದಲ್ಲಿ ತಲುಪುತ್ತದೆ. ನಂತರ ಪರಸ್ಪರ ಸಮ್ಮತಿಯೊಂದಿಗೆ ಮುತ್ತಿನಲ್ಲಿ ಮಿಂದೇಳಬಹುದು.

ಭಾವವನ್ನು ಅನುಭವಿಸಿ ನೋವನ್ನಲ್ಲ
ಮುತ್ತು ಕೊಡಬೇಕೆಂಬ ಉದ್ವೇಗದಲ್ಲಿ ಯಡವಟ್ಟು ಮಾಡುವುದಕ್ಕಿಂತ ಅದನ್ನು ಅನುಭವಿಸುವುದು ಮುಖ್ಯ. ಮುದವಾಗಿ ತುಟಿಗೆ ತುಟಿಯೊತ್ತಿ ಚುಂಬಿಸುವಾಗ ಆ ಹೊತ್ತನ್ನು ಕಣ್ಮುಚ್ಚಿ ಅನುಭವಿಸಿ. ಮೆಲ್ಲಗೆ ತುಟಿಯಲ್ಲಿ ತುಟಿ ಬೆರೆತು ಪ್ರೇಮರಸ ಉತ್ಪತ್ತಿಯಾಗುವಾಗ ಅದು ನಿಮ್ಮನ್ನು ಸೊಗಸಾಗಿ ಆವರಿಸಿಕೊಳ್ಳಬಲ್ಲದು. ಹೀಗಾಗಿ ಯಾವುದೋ ಭಗ್ನಪ್ರೇಮಿಯ ಸಿನಿಮಾವನ್ನು ನೆನಪಿಸಿಕೊಂಡು ಮುತ್ತು ಕೊಡದೇ ತುಸು ಸಾವಧಾನದಿಂದ ವರ್ತಿಸಿ.

ಇದು ನೆನಪಿದ್ದರೂ ಮರೆತಂತಿರಬೇಕಾದ ಸಂಗತಿ
ಸ್ವಭಾವತಃ ಹೆಣ್ಣಿಗೆ ನಾಚಿಕೆ ಹೆಚ್ಚು, ಗಂಡು ಒರಟ, ಹುಂಬ ಎಂಬೆಲ್ಲಾ ಮಾತಿವೆ. ಆದರೆ, ಈ ಪ್ರೀತಿ, ಪ್ರೇಮದ ವಿಚಾರದಲ್ಲಿ ಸಂಕೋಚಕ್ಕೆ ಲಿಂಗಭೇದವಿಲ್ಲ. ಇಷ್ಟಾದರೂ ಸಾಧಾರಣವಾಗಿ ಹುಡುಗರಿಗೆ ಒಮ್ಮೆ ತಮ್ಮ ಸಂಗಾತಿ ಮುತ್ತು ಸ್ವೀಕರಿಸಲು ಸಿದ್ಧವಿದ್ದಾಳೆ ಎಂದು ಗೊತ್ತಾದರೆ ಮೆಲ್ಲಮೆಲ್ಲನೆ ಕಳ್ಳಹೆಜ್ಜೆಯನ್ನಿಟ್ಟು ಮುಂದೆ ಬರುತ್ತಾರೆ. ಹೀಗಾಗಿ ಈ ವಿಚಾರದಲ್ಲಿ ಹುಡುಗನೇ ಮೊದಲಾಗುವಂತೆ ಸಂದರ್ಭ ಸೃಷ್ಟಿಸುವುದು ಜಾಣತನ.

ಇದನ್ನೂ ಓದಿ:
ಮತ್ತೇರಿಸುವ ಮುತ್ತಿನಲ್ಲಿ ಎಷ್ಟೊಂದು ವಿಧ, ಯಾವ ಮುತ್ತಿಗೆ ಏನು ಅರ್ಥ?

ಪ್ರೀತಿಯಲ್ಲಿದ್ದಾಗಲೇ ಅನಾಮಿಕನಿಗೆ ಮುತ್ತಿಟ್ಟೆ.. ಈ ವಿಷಯವನ್ನು ನನ್ನ ಹುಡುಗನಿಗೆ ಹೇಳಲೇ..?