ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ರನ್ನು ನೇಮಿಸಲಾಗಿದೆ.
ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಥಾನಕ್ಕೆ 1990 ಬ್ಯಾಚ್ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಗಸ್ಟ್ 2ಕ್ಕೆ ಆಯುಕ್ತರಾಗಿ ಒಂದು ವರ್ಷ ಪೂರೈಸಲಿದ್ದ ಭಾಸ್ಕರ್ ರಾವ್ರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿದೆ.
ಪೊಲೀಸ್ ಕಮಿಷನರ್ ಹುದ್ದೆಗೆ ಇನ್ನಿಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಸುನೀಲ್ ಅಗರ್‌ವಾಲ್ ಮತ್ತು ಅಮೃತ್ ಪಾಲ್ ಹೆಸರು ಕೂಡಾ ಕೇಳಿ ಬಂದಿತ್ತು. ಆದ್ರೆ ಅಂತಿಮವಾಗಿ ಕಮಲ್ ಪಂತ್‌ರನ್ನ ನೇಮಕ ಮಾಡಲಾಗಿದೆ.
ಜೊತೆಗೆ, ರಾಜ್ಯ ಗುಪ್ತಚರ ಇಲಾಖೆಗೆ ಹೊಸ ಸಾರಥಿ ಬಂದಿದ್ದು, ನೂತನ ಎಡಿಜಿಪಿಯಾಗಿ ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಬಿ. ದಯಾನಂದ್ ನೇಮಕವಾಗಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಇಂದು ಸಂಜೆ ಕಮಲ್ ಪಂತ್ ಅಧಿಕಾರ ಸ್ವೀಕಾರ
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಇಂದು ಸಂಜೆ ಅಧಿಕಾರ ಸ್ವೀಕರಿಸಲಿದ್ದು, ಪೊಲೀಸ್ ಅಧಿಕಾರಿಯಾಗಿ ಅವರು ನಡೆದು ಬಂದ ದಾರಿ ಹೀಗಿದೆ. 1990 ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಕಮಲ್‌ಪಂತ್, ಮೂಲತಃ ಉತ್ತರಾಂಚಲ್ ನ ಪಿತೋರ್ ಗಡ್ ನವರು. ಭೂಗೋಳಶಾಸ್ತ್ರದಲ್ಲಿ ಎಂಎಸ್‌ಸಿ ಪದವಿ ಪಡೆದಿರುವ ಕಮಲ್‌ಪಂತ್ ಆ ನಂತರ 1990ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಆಗಿ ಐಪಿಎಸ್ ಕೆಡರ್‌ನಲ್ಲಿ ಆಯ್ಕೆಯಾದರು.
ಗುಲ್ಬರ್ಗಾದಲ್ಲಿ ಪ್ರೊಬೆಷನರಿ ಎಎಸ್ ಪಿ ಯಾಗಿ ಕೆಲಸ ಶುರು ಮಾಡಿದ ಕಮಲ್‌ಪಂತ್, ಶಿವಮೊಗ್ಗದ ಭದ್ರಾವತಿಯಲ್ಲಿ ಎಎಸ್ ಪಿ ಯಾಗಿ, ನಂತರ ಶಿವಮೊಗ್ಗ ಹಾಗೂ ಮಂಗಳೂರಲ್ಲಿ ಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದಾದ ಮೇಲೆ ಕಮಲ್ ಪಂತ್ ಕೇಂದ್ರ ಐಜಿಪಿಯಾಗಿ ಬಡ್ತಿ ಪಡೆದು ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆಸಲ್ಲಿಸಿದ್ದಾರೆ. ಆನಂತರ ಕಾನೂನು ಸುವ್ಯವಸ್ಥೆ ಹಾಗೂ ಆಂತರಿಕ ಭದ್ರತಾ ಇಲಾಖೆಯ ಎಡಿಜಿಪಿ ಆಗಿ ಕೂಡಾ ಕಮಲ್ ಪಂತ್ ಕಾರ್ಯನಿರ್ವಹಿಸಿದ್ದಾರೆ.
Published On - 3:27 pm, Fri, 31 July 20