
‘ಮದುವೆ ಆದಾಗ ನನ್ನ ಹೆಂಡತಿಗೆ ಒಂದು ಕಾಫಿ ಮಾಡಲು ಕೂಡ ಬರುತ್ತಿರಲಿಲ್ಲ. ಆದರೆ ಈಗ 300 ಜನಕ್ಕೆ ಒಬ್ಬಳೇ ಅಡುಗೆ ಮಾಡುತ್ತಾಳೆ. ಕ್ಯಾಟರಿಂಗ್ ಮಾಡುತ್ತಾಳೆ. ಕಳೆದ 11 ವರ್ಷಗಳಲ್ಲಿ ನನ್ನ ಹೆಂಡತಿ ಕೊಟ್ಟ ಊಟವನ್ನು ತಿಂದವರ ಪೈಕಿ ಸುಮಾರು 10-15 ಜನ ಸತ್ತುಹೋಗಿದ್ದಾರೆ’ ಎಂದು ಹೇಳುವ ಮೂಲಕ ಶಂಕರ್ ಅಶ್ವತ್ಥ್ ಅವರು ಒಂದು ಕ್ಷಣ ಎಲ್ಲರನ್ನೂ ದಂಗಾಗಿಸಿದರು. ಅಷ್ಟಕ್ಕೂ ಅವರ ಮಾತಿನ ಅರ್ಥವೇನು? ನಿಜಕ್ಕೂ ಅವರ ಹೆಂಡತಿಯ ಅಡುಗೆ ತಿಂದವರು ಸತ್ತು ಹೋಗಿದ್ದಾರಾ? ಇಂಥ ಪ್ರಶ್ನೆ ಮೂಡುವುದು ಸಹಜ. ಹಾಗಾಗಿ ಮರುಕ್ಷಣವೇ ಅಸಲಿ ವಿಚಾರ ಏನು ಎಂಬುದನ್ನು ಎಳೆಎಳೆಯಾಗಿ ವಿವರಿಸಿದರು.
‘ನಾನು ನೇರವಾಗಿ ಹೇಳುತ್ತೇನೆ. ನಾವು ದುಡಿದು ಬದುಕಬೇಕು ಎಂದು ನಮ್ಮ ತಂದೆ ಕಲಿಸಿದ್ದಾರೆ. ಕೂತು ತಿಂದರೆ ಎಷ್ಟಿದ್ದರೂ ಸಾಲದು. ರೋಗವೂ ಬರುತ್ತದೆ. ನನ್ನ ಹೆಂಡತಿ ಕ್ಯಾಟರಿಂಗ್ ಮಾಡುತ್ತಾಳೆ. ನಾನು ಈಗ ಹೇಳುವುದು ಕೇಳಿ ಎಲ್ಲರೂ ತಪ್ಪು ತಿಳಿದುಕೊಳ್ಳುತ್ತಾರೆ. ಆದರೆ ನಿಧಾನವಾಗಿ ಗ್ರಹಿಸಬೇಕು. ನನ್ನ ಹೆಂಡತಿಯ ಊಟ ತಿಂದು 10-15 ಜನರು ಸತ್ತು ಹೋಗಿದ್ದಾರೆ. ಅಂದರೆ ಅಷ್ಟು ಕೆಟ್ಟದಾಗಿ ಅಡುಗೆ ಮಾಡುತ್ತಾರೆ ಅಂತ ನೀವೆಲ್ಲ ಅಂದುಕೊಳ್ಳುತ್ತೀರಿ. ಆದರೆ ವಿಷಯ ಅದಲ್ಲ. 10-15 ಜನರು ಸಾಯುವ ಕೊನೇ ಕಾಲದಲ್ಲಿ ಇವಳು ಊಟ ಕೊಟ್ಟಿದ್ದಾಳೆ’ ಎಂದು ಶಂಕರ್ ಅಶ್ವತ್ಥ್ ವಿವರಿಸಿದಾಗ ಅವರ ಮಾತಿನ ಅರ್ಥ ಎಲ್ಲರಿಗೂ ತಿಳಿಯಿತು.
‘ಹಾಸಿಗೆ ಹಿಡಿದ ಅನೇಕರಿಗೆ ಅವಳು ಊಟ ನೀಡಿದ್ದಾಳೆ. ನೀವು ನಂಬುವುದಿಲ್ಲ. ಅವಳು ಮಾಡಿದ ಸಹಾಯವನ್ನು ನೆನೆದು, ಅವಳನ್ನು ಕರೆದು ಎಷ್ಟೋ ಕಡೆ ಬಾಗಿನ ನೀಡಿದ್ದಾರೆ. ಯಾರಾದರೂ ಕಷ್ಟಪಡುತ್ತಿದ್ದಾರೆ ಎಂಬುದು ಗೊತ್ತಾದರೆ ನನ್ನ ಹೆಂಡತಿ ಅಳುತ್ತಾಳೆ’ ಎಂದಿದ್ದಾರೆ ಶಂಕರ್ ಅಶ್ವತ್ಥ್.
ಇನ್ನು, ಅಡುಗೆಗೆ ಸಂಬಂಧಿಸಿದಂತೆ ಬಿಗ್ ಬಾಸ್ ಮನೆಯಲ್ಲಿ ಭಾರಿ ಚೆರ್ಚೆ ನಡೆದಿದೆ. ಈ ಹಿಂದಿನ ಸೀಸನ್ಗಳಲ್ಲಿ ಎಷ್ಟೋ ಬಾರಿ ಜಗಳ ಆರಂಭ ಆಗಿದ್ದು ಅಡುಗೆ ಮನೆಯಿಂದಲೇ! ಬಿಗ್ ಬಾಸ್ಗೆ ಎಂಟ್ರಿ ನೀಡುವುದಕ್ಕೂ ಮುನ್ನ ‘ನಿಮಗೆ ಅಡುಗೆ ಮಾಡೋಕೆ ಬರುತ್ತಾ’ ಎಂಬ ಪ್ರಶ್ನೆಯನ್ನು ಸುದೀಪ್ ಎಲ್ಲರಿಗೂ ಕೇಳಿದ್ದರು. ಸ್ವತಃ ಸುದೀಪ್ ಅವರಿಗೂ ಅಡುಗೆ ಬಗ್ಗೆ ಅಪಾರ ಆಸಕ್ತಿ ಇದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲೇ ಮದುವೆಯಾದ ಮಂಜು ಪಾವಗಡ – ದಿವ್ಯಾ ಸುರೇಶ್!
Published On - 2:53 pm, Wed, 3 March 21