ಬೆಳಗಾವಿಯಲ್ಲಿ ಬಿಜೆಪಿ ನಾಯಕರು: ಕೋರ್ ಕಮಿಟಿ ಸಭೆ ಒಳಗೆ ನಡೆದಿದ್ದೇನು? ಇಂದಿನ ಕಾರ್ಯಕಾರಿಣಿ ಸಭೆ ಏನು ಮಾಡುತ್ತೆ?

ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಜೊತೆಗೆ ಚರ್ಚಿಸಿದ ರಾಜ್ಯದ ನಾಯಕರು ಲವ್ ಜಿಹಾದ್ ಮತ್ತು ಗೋ ಹತ್ಯೆ ನಿಷೇಧ ಕಾನೂನು ತರುವ ಬಗ್ಗೆ ಚಿಂತನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಬೆಳಗಾವಿ ಲೋಕ ಸಭಾ ಉಪ ಚುನಾವಣೆ ಬಗ್ಗೆ ಕೂಡ ಚರ್ಚೆ ನಡೆಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

  • bhaskar hegde
  • Published On - 13:52 PM, 5 Dec 2020
ಬೆಳಗಾವಿಯಲ್ಲಿ ಬಿಜೆಪಿ ನಾಯಕರು: ಕೋರ್ ಕಮಿಟಿ ಸಭೆ ಒಳಗೆ ನಡೆದಿದ್ದೇನು? ಇಂದಿನ ಕಾರ್ಯಕಾರಿಣಿ ಸಭೆ ಏನು ಮಾಡುತ್ತೆ?
ಅರುಣ್​ ಸಿಂಗ್ (ಎಡ); ಬಿ.ಎಸ್.​ ಯಡಿಯೂರಪ್ಪ (ಬಲ)

ನಿನ್ನೆ ರಾತ್ರಿ ಬೆಳಗಾವಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಹಲವಾರು ವಿಷಯದ ಬಗ್ಗೆ ಚರ್ಚೆ ಆಗಿದ್ದರೂ, ಒಂದು ಕುತೂಹಲಕಾರಿಯಾದ ವಿಷಯ ಸುದೀರ್ಘವಾಗಿ ಚರ್ಚೆಗೆ ಬಂದಿದೆ: ಮುಂಬರುವ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುದು.

ಪಕ್ಷದ ಉಸ್ತುವಾರಿ ತೆಗೆದುಕೊಂಡ ಮೇಲೆ ರಾಜ್ಯಕ್ಕೆ ಇದೇ ಮೊದಲ ಬಾರಿಗೆ ಬಂದಿರುವ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಮುಂದೆಯೇ ಈ ಚರ್ಚೆ ನಡೆದಿದೆ. ಅರುಣ್ ಸಿಂಗ್ ಯಾವ ಅಭಿಪ್ರಾಯ ಹೇಳದಿದ್ದರೂ ರಾಜ್ಯದ ನಾಯಕರಲ್ಲಿ ಒಂದು ಅಭಿಪ್ರಾಯ ಮೂಡಿ ಬಂದಂತೆ ಕಾಣುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅದೇನೆಂದರೆ ದಿವಂಗತ ಸುರೇಶ್ ಅಂಗಡಿ ಅವರ ಕುಟುಂಬದ ಯಾವ ಸದಸ್ಯರಿಗೂ ಟಿಕೆಟ್ ನೀಡೋದು ಬೇಡ ಎಂಬ ವಿಚಾರಕ್ಕೆ ಎಲ್ಲರು ಸಹಮತಿ ಸೂಚಿಸಿದ್ದಾರೆ.

ಮುಂದೇನು?
ಈ ಮಧ್ಯೆ, ಇಬ್ಬರು ಸ್ಥಳೀಯ ನಾಯಕರು, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮತ್ತು ಮಾಜಿ ಲೋಕ ಸಭಾ ಸದಸ್ಯ ರಮೇಶ್ ಕತ್ತಿ, ಸಿಂಗ್ ಅವರನ್ನು ಭೇಟಿ ಮಾಡಿ ತಮಗೆ ಪಕ್ಷದ ಟಿಕೆಟ್ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಲೋಕ ಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಟಿಕೆಟ್ ಕೇಳಿದ್ದ ಕತ್ತಿಗೆ ಪಕ್ಷದ ಆಶೀರ್ವಾದ ಸಿಕ್ಕಿರಲಿಲ್ಲ. ಈಗ ಮತ್ತೆ ಬೆಳಗಾವಿ ಲೋಕಸಭಾ ಉಪಚುನಾವಣೆಗಾಗಿ ಟಿಕೆಟ್ ಪಡೆಯಲು ಲಾಬಿ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬೇರೆ ತೀರ್ಮಾನಗಳು ಏನು?
ನಿನ್ನೆ ರಾತ್ರಿ ಕೋರ್ ಕಮಿಟಿ ಸಭೆ ಮುಗಿದ ನಂತರ, ಮಾತನಾಡಿದ ಪಕ್ಷದ ನಾಯಕ ಮತ್ತು ವಿಧಾನ ಸಭಾ ಸದಸ್ಯ ಅರವಿಂದ್ ಲಿಂಬಾವಳಿ ಹೇಳಿದ್ದಿಷ್ಟು: ಪ್ರಮುಖವಾಗಿ ನಾಲ್ಕಾರು ವಿಷಯದ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿಜೆಪಿ ಕಾರ್ಯಕರ್ತರನ್ನು ಒಳಗೊಂಡಿರುವ ಪಕ್ಷ. ಮೂರು ವರ್ಷಕ್ಕೊಮ್ಮೆ ಬೂತ್ ಕಮಿಟಿಯಿಂದ ಕೇಂದ್ರದ ವರೆಗೂ ಬದಲಾಗುತ್ತವೆ. ರಾಜ್ಯದಲ್ಲಿ 310 ಮಂಡಲಗಳಿದ್ದು 270 ಕಡೆ ತರಬೇತಿ ಶಿಬಿರಗಳು ಮುಕ್ತಾಯಗೊಂಡಿವೆ.

ಗ್ರಾ.ಪಂ. ಚುನಾವಣೆ ದೃಷ್ಟಿಯಿಂದ ನೇರವಾಗಿ ಪಕ್ಷದ ಚಿಹ್ನೆ ಮೇಲೆ ನಡೆಯುವ ಚುನಾವಣೆ ಅಲ್ಲ. ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಬಿಜೆಪಿ ಜಿಲ್ಲಾ ಉಸ್ತುವಾರಿಗಳು ಈ ಚುನಾವಣೆ ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಈ ನಿಮಿತ್ಯ ಈಗಾಗಲೇ ಆರು ತಂಡಗಳಲ್ಲಿ ಗ್ರಾಮ ಸ್ವರಾಜ್ ಕಾರ್ಯಕ್ರಮ ಮಾಡಿದ್ದೇವೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲಿಂಬಾವಳಿ ಮಂತ್ರಿಮಂಡಲದ ವಿಸ್ತರಣೆ ಬಗ್ಗೆ ಚರ್ಚೆ ಆಗಿಲ್ಲ. ಈ ವಿಷಯವಾಗಿ ಯಾರು ಮಂತ್ರಿ ಆಗಬೇಕು ಅಂತಾ ಚರ್ಚೆ ಕೂಡ ನಡೆದಿಲ್ಲ. ಇದು ಮುಖ್ಯಮಂತ್ರಿಗಳ ಪರಮಾಧಿಕಾರ. ಸಿಎಂ ಕೇಂದ್ರದ ನಾಯಕರ ಜತೆಗೆ ಚರ್ಚೆ ಮಾಡಿ ಮಂತ್ರಿಮಂಡಲ ವಿಸ್ತರಣೆ ದಿನಾಂಕ ನಿರ್ಧಾರ ಮಾಡುತ್ತಾರೆ. ಯಾರೂ ಕೂಡ ಪಕ್ಷದ ಆಂತರಿಕ ವಿಚಾರಗಳ ಕುರಿತಾಗಿ ಬಹಿರಂಗ ಹೇಳಿಕೆ ಕೊಡದಂತೆ ಮನವಿ ಮಾಡಲಾಗಿದೆ.

ಇಂದಿನ ಕಾರ್ಯಕಾರಿಣಿ
ಲಿಂಬಾವಳಿ ಹೇಳಿದ 2010ರಲ್ಲಿ ತಂದ ಗೋಹತ್ಯೆ ನಿಷೇಧ ಜಾರಿಗೆ ತಂದಿದ್ದೆವು. ಅಂದಿನ ರಾಜ್ಯಪಾಲರು ಒಪ್ಪದೆ ವಾಪಸ್ ಕಳ್ಸಿದ್ರೂ.. ನಂತರ ಕಾಂಗ್ರೆಸ್ ಪಕ್ಷ ಅದನ್ನ ಕತ್ತಲ ಕೋಣೆಯಲ್ಲಿ ಇಟ್ಟಿತ್ತು. ಗೋಹತ್ಯೆ ನಿಷೇಧ ಬಲವಾದ ಕಾನೂನು ತರಲು ಚರ್ಚೆಯಾಗಿ ನಿರ್ಣಯ ಕೈಗೊಳ್ಳುತ್ತೇವೆ.

ಲವ್ ಜಿಹಾದ್ ಪ್ರೀತಿ ಹೆಸರಿನಲ್ಲಿ ಮತಾಂತರ ಮಾಡುವುದಿದೆ. ಮಹಿಳೆಯರ ಶೋಷಣೆ ಮಾಡಿ ಉಗ್ರವಾದ ಚಟುವಟಿಕೆಗಳತ್ತ ತಳ್ಳುತ್ತಿದ್ದಾರೆ. ಇದಕ್ಕೆ ನಾವು ವಿರೋಧ ಮಾಡಿ ನಾಳೆ ಚರ್ಚೆ ಮಾಡಿ ಲವ್ ಜಿಹಾದ್ ತಡೆಯಲು ನಿರ್ಣಯ ಮಾಡಲಾಗುವುದು. ಮತ್ತೊಂದು ಗೋ ಹತ್ಯೆ ನಿಷೇದ ಕಾಯ್ದೆ ಬಗ್ಗೆ ಇಂದು ಚರ್ಚೆ ಆಗಿ ರಾಜ್ಯ ಕಾರ್ಯಕಾರಿಣಿ ನಿರ್ಣಯ ಅಂಗೀಕರಿಸುತ್ತದೆ ಎಂದು ಅವರು ಹೇಳಿದ್ದಾರೆ.