ನವ ಸಂವತ್ಸರ: ದೇವಾಲಯಗಳಿಗೆ ಹರಿದು ಬಂದ ಜನಸಾಗರ

ನವ ಸಂವತ್ಸರ: ದೇವಾಲಯಗಳಿಗೆ ಹರಿದು ಬಂದ ಜನಸಾಗರ

ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಜನ ಸಾಗರವೇ ಹರಿದು ಬಂದಿದೆ. ಇಂದು ವರ್ಷದ ಮೊದಲ ದಿನ ದೇವರ ಕೃಪೆಯೊಂದಿಗೆ ಸಾಗಬೇಕೆಂದು ಅನೇಕ ಭಕ್ತರು ದೇವಾಲಯಕ್ಕೆ ಬಂದಿದ್ದರು. ನಾಡದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಹೊಸ ವರ್ಷವನ್ನ ಸ್ವಾಗತಿಸಿದ್ದಾರೆ.

ಇಂದು ಮುಂಜಾನೆಯಿಂದಲೇ ದೇವಿ ದರ್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ನಿಂತು ವರ್ಷದ ಮೊದಲ ದಿನ ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಹೊಸ ವರ್ಷದಂದು ಹೊಸ ಸಂಕಲ್ಪದೊಂದಿಗೆ ದೇವಿಗೆ ನಮಿಸಿದ್ದಾರೆ. ಪ್ರವಾಸಿಗರು ಹಾಗೂ ಸ್ಥಳೀಯರಿಂದ ಚಾಮುಂಡೇಶ್ವರಿ ದೇವಾಲಯ ತುಂಬಿ ಹೋಗಿದೆ.

ಅಲ್ಲದೆ ಮೈಸೂರಿನ ಪ್ರಸಿದ್ಧ ನಂಜನಗೂಡು ಶ್ರೀ ಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲೂ ಹೊಸ ವರ್ಷದ ಪ್ರಯುಕ್ತ ಜನಸಾಗರ ಹರಿದು ಬಂದಿದೆ. ಇಂದು ಮುಂಜಾನೆಯಿಂದಲೇ ಭಕ್ತರು ಕಪಿಲಾ ನದಿಯಲ್ಲಿ ಸ್ನಾನ ಮಾಡಿ ಶ್ರೀಕಂಠೇಶ್ವರ ಸ್ವಾಮಿಯ ದರ್ಶನ ಮಾಡಿ ಹೊಸ ವರ್ಷ ಆಚರಣೆ ಮಾಡಿದ್ದಾರೆ.

ದೇವರಿಗೆ ಅಭಿಷೇಕ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ದಾಸೋಹ ಭವನದಲ್ಲಿ ಪ್ರಸಾದ ವಿನಿಯೋಗ ಮಾಡಲಾಗಿದೆ. ಅಷ್ಟೆ ಅಲ್ಲದೆ ಮೈಸೂರಿನ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಚಾಮುಂಡಿ ದೇವಸ್ಥಾನ, ರಾಘವೇಂದ್ರ ಮಠ, ಮಲ್ಲನ ಮೂಲೆ ಮಠ ಸೇರಿದಂತೆ ವಿವಿಧೆಡೆ ಭಕ್ತರು ದೇವರ ದರ್ಶನಕ್ಕೆ ಮುಗಿಬಿದ್ದಿದ್ದಾರೆ.

Click on your DTH Provider to Add TV9 Kannada