ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಖಾತೆ ಕ್ಯಾತೆ ಶುರುವಾಗಿದೆ. ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನದ ಸಿಡಿಗುಂಡು ಸ್ಫೋಟಗೊಂಡಿದೆ. ಇದ್ದದ್ದನ್ನ ಕಸಿದುಕೊಂಡು, ಬದಲಿ ಖಾತೆ ಕೊಟ್ಟಿದ್ದಕ್ಕೆ ಸಚಿವ ಮಾಧುಸ್ವಾಮಿ ಮುನಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಖಾತೆ ಬದಲಾವಣೆ ಮಾಡಿದ ಹಿನ್ನೆಲೆಯಿಂದಾಗಿ ಬೇಸರಗೊಂಡಿರುವ ಸಚಿವ ಮಾಧುಸ್ವಾಮಿ, ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗದೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇಂದು ಸಿದ್ದಗಂಗಾ ಶ್ರೀ ಶಿವಕುಮಾರ ಶ್ರೀ ಗಳ ಎರಡನೇ ಪುಣ್ಯ ಸ್ಮರಣೆ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುಮಕೂರಿಗೆ ತೆರಳಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಮಾಧುಸ್ವಾಮಿ ಗೈರಾಗುವ ಸಾಧ್ಯತೆಗಳಿವೆ.
ಮನವೊಲಿಕೆಗೂ ಬಗ್ಗದ ಮಾಧುಸ್ವಾಮಿ..
ಕಾನೂನು- ಸಂಸದೀಯ ವ್ಯವಹಾರ ಹಾಗೂ ಸಣ್ಣನೀರಾವರಿ ಸಚಿವರಾಗಿದ್ದ ಮಾಧುಸ್ವಾಮಿ, ಖಾತೆ ಬದಲಾವಣೆಯ ನಂತರ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ನೆಲೆಯೂರಿದ್ದಾರೆ.
ನಿನ್ನೆಯಿಂದ ಶಾಸಕ ತಿಪಟೂರು ನಾಗೇಶ್ ಸೇರಿದಂತೆ, ಹಲವು ಜಿಲ್ಲಾ ಬಿಜೆಪಿ ಶಾಸಕರಿಂದ ಮನವೊಲಿಕೆಗೆ ಪ್ರಯತ್ನ ನಡೆಯುತ್ತಿದೆಯಾದರೂ ಜೆ.ಸಿ.ಮಾಧುಸ್ವಾಮಿ ಯಾರ ಮನವೊಲಿಕೆಗೂ ಬಗ್ಗುವ ಮನಸ್ಸು ಮಾಡುತ್ತಿಲ್ಲ ಎಂದು ತಿಳಿದುಬಂದಿದೆ.
ಅಸಮಾಧಾನದ ಬಗ್ಗೆ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ
ನಾನು ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಟಿವಿ9ಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. 2 ದಿನದ ಹಿಂದೆ ಸಿಎಂ ಕೇಳಿದಾಗ ಸಣ್ಣ ನೀರಾವರಿ ಮುಂದುವರಿಸುವಂತೆ ಹೇಳಿದ್ದೇನೆ. ಅದು ಬಿಟ್ಟರೆ ಬೇರೆ ಯಾವುದೇ ಅಸಮಾಧಾನವಿಲ್ಲ. ಸಣ್ಣ ನೀರಾವರಿ ಬಗ್ಗೆ ಆಸಕ್ತಿ ಇದೆ ಎಂದಿದ್ದೇನೆ. ಹೊಸಬರಿಗೆ ಖಾತೆ ನೀಡಬೇಕಾಗಿದೆ ಎಂದಿದ್ದರು. ಹೀಗಾಗಿ ನಾನು ಆ ಬಗ್ಗೆ ಏನು ಮಾತನಾಡಲಿಲ್ಲ. ಸಣ್ಣ ನೀರಾವರಿ ನನಗೆ ಹೆಚ್ಚುವರಿಯಾಗಿ ಕೊಟ್ಟಿದ್ದರು ನನಗೆ ಇಂತಹ ಖಾತೆ ಬೇಕೆಂದು ಕೇಳುವುದಿಲ್ಲ. ಸಿಎಂ ಕೊಟ್ಟ ಖಾತೆಯನ್ನು ನಾನು ನಿಭಾಯಿಸ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ಹಾಜರಾಗುವ ಬಗ್ಗೆ ಮಾತನಾಡಿದ ಮಾಧುಸ್ವಾಮಿ ಡಾ.ಶಿವಕುಮಾರಶ್ರೀಗಳ 2ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಕೇಂದ್ರ ಸಚಿವ ಸಾರಂಗಿಯವರು ಬರುತ್ತಿದ್ದಾರೆ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಹೋಗಬೇಕಾಗಿದೆ. ನಾನ್ಯಾಕೆ ಅಸಮಾಧಾನ ಮಾಡಿಕೊಳ್ಳಲಿ. ನಾನು ಸಿಟ್ಟಾಗುವುದಕ್ಕೆ ಖಾತೆ ಬದಲಾವಣೆಗೇನು ಸಂಬಂಧ ಎಂದು ಹೇಳಿದ್ರು.