ಬೆಂಗಳೂರು ಮಿಷನ್-2022: ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು ಇಲ್ಲಿವೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬೆಂಗಳೂರು ಮಿಷನ್ 2022 ರ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು ಇಲ್ಲಿವೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬೆಂಗಳೂರು ಮಿಷನ್ 2022 ರ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು ಹೀಗಿವೆ:
1. ಹೈ-ಡೆನ್ಸಿಟಿ ಕಾರಿಡಾರ್: ನಗರದ ಜನತೆಗೆ ಉನ್ನತ ಮಟ್ಟದ ಸಂಚಾರವನ್ನು ಒದಗಿಸುವ ನಿಟ್ಟಿನಲ್ಲಿ 190 ಕಿಮೀ ಉದ್ದದ 12 ಹೈ-ಡೆನ್ಸಿಟಿ ಕಾರಿಡಾರ್‍ಗಳ ಅಭಿವೃದ್ಧಿ ಮತ್ತು ನಿರ್ವಹಣೆ ಯೋಜನೆಯನ್ನು ರೂ. 477 ಕೋಟಿಗಳ ಮೊತ್ತದಲ್ಲಿ ಕೈಗೊಂಡಿದ್ದು ಈಗಾಗಲೇ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಏಪ್ರಿಲ್-2021ರೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚಿಸಿದರು.
2. ಸ್ಮಾರ್ಟ್ ಸಿಟಿ ರಸ್ತೆಗಳು: ನಗರದ ಹೃದಯ ಭಾಗದಲ್ಲಿರುವ ರಸ್ತೆಗಳನ್ನು ಮೇಲ್ದರ್ಜೆಗೆರಿಸಲು ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ 37 ರಸ್ತೆಗಳ ಅಭಿವೃದ್ಧಿಯನ್ನು ಕೈಗೊಂಡಿದ್ದು, ತ್ವರಿತವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು. ಈ ನಿಟ್ಟಿನಲ್ಲಿ 05 ರಸ್ತೆಗಳು ಪೂರ್ಣಗೊಂಡಿವೆ. ಒಟ್ಟಾರೆ 32 ರಸ್ತೆಗಳನ್ನು ಮೇ-2021ರೊಳಗೆ ಪೂರ್ಣಗೊಳಿಸಲು ಸೂಚಿಸಲಾಯಿತು. ಈ ಕಾಮಗಾರಿಗಳನ್ನು ನಡೆಸುವ ಸಂದರ್ಭದಲ್ಲಿ ಸುಸ್ಥಿತಿಯಲ್ಲಿರುವ ಪಾದಚಾರಿ ಮಾರ್ಗಗಳನ್ನು ಹಾಗೆಯೇ ಉಳಿಸಿಕೊಂಡು ರಸ್ತೆ ಅಭಿವೃದ್ಧಿ ಪಡಿಸಿ. ಅನಗತ್ಯವಾಗಿ ಹಣ ಪೋಲು ಮಾಡದಿರಿ ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
3. ಮೆಟ್ರೋ ಕಾಮಗಾರಿ: ಮೆಟ್ರೋ ರೈಲು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಪಣ ತೊಟ್ಟಿದ್ದು, ದಿನಾಂಕ: 14 ಜನವರಿ 2021 ರಂದು ಕನಕಪುರ ಲೈನ್‍ನ್ನು ಲೋಕಾರ್ಪಣೆಗೊಳಿಸಲಾಗಿದೆ. ಮುಂದುವರೆದು ಜೂನ್-2021 ಅಂತ್ಯದೊಳಗೆ ಕೆಂಗೇರಿ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವೈಟ್‍ಫೀಲ್ಡ್ ಮಾರ್ಗ ಹಾಗೂ ಇಲೆಕ್ಟ್ರಾನಿಕ್ ಸಿಟಿ ಮಾರ್ಗಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಹಾಗೂ ಇದಕ್ಕೆ ಇರುವ ತೊಡಕುಗಳನ್ನು ಶೀಘ್ರವೇ ನಿವಾರಣೆ ಮಾಡುವಂತೆ ಮುಖ್ಯಮಂತ್ರಿಗಳು ತಿಳಿಸಿದರು.
4. ಕೆ-100 ರಾಜಕಾಲುವೆ ಯೋಜನೆ: ವಿನೂತನ ರೀತಿಯಲ್ಲಿ ರಾಜಕಾಲುವೆ ಸುಂದರಗೊಳಿಸುವ ಯೋಜನೆಯನ್ನು ರೂಪಿಸಿದ್ದು, ಸುಮಾರು 11 ಕಿಮೀ ಉದ್ದದ ಕೆ-100 ರಾಜಕಾಲುವೆಯನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಟೆಂಡರ್ ಆಹ್ವಾನಿಸಲಾಗಿರುತ್ತದೆ. ಇದಕ್ಕೆ ಪೂರಕವಾಗಿ ರಾಜಕಾಲುವೆಯಲ್ಲಿ ಜಲಮಂಡಳಿಯ ತ್ಯಾಜ್ಯ ನೀರು ಒಯ್ಯುವ ಕೊಳವೆಗಳನ್ನು ಸ್ವಚ್ಛಗೊಳಿಸುವ ಕಾಮಗಾರಿಗಳನ್ನು ಫೆಬ್ರವರಿ-2021ರ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು.
5. ಕೆರೆಗಳ ಪುನಶ್ಚೇತನ: ನಗರದ ಕೆರೆಗಳನ್ನು ಉಳಿಸಲು ಮತ್ತು ಜೀವವೈವಿದ್ಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ 25 ಕೆರೆಗಳ ಅಭಿವೃದ್ಧಿ ಮತ್ತು ಪುನಶ್ಚೇತನ ಕಾಮಗಾರಿಯನ್ನು ಕೈಗೊಂಡಿದ್ದು, ಹಂತಹಂತವಾಗಿ ಪೂರ್ಣಗಳಿಸಲಾಗುವುದು. ಇದರ ಜೊತೆಗೆ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಫೆಬ್ರುವರಿ 2022ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
6. ಬೃಹತ್ ವೃಕ್ಷೋದ್ಯಾನಗಳು: ಬೆಂಗಳೂರು ನಗರದ ಹಸಿರು ಸಿರಿಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೆ ಪೂರಕವಾಗುವಂತೆ ಬೃಹತ್ ವೃಕ್ಷೋದ್ಯಾನಗಳನ್ನು ನಿರ್ಮಿಸಲಾಗುತ್ತಿದೆ. ಏಪ್ರಿಲ್-2021ರ ಅಂತ್ಯಕ್ಕೆ ತುರಹಳ್ಳಿ (400 ಎಕರೆ), ಮೇ-2021ರ ಅಂತ್ಯಕ್ಕೆ ಕಾಡುಗೋಡಿ (102 ಎಕರೆ) ಮತ್ತು ಜೂನ್-2021ರ ಅಂತ್ಯಕ್ಕೆ ಮಾಚೋಹಳ್ಳಿ (98 ಎಕರೆ) ವೃಕ್ಷೋದ್ಯಾನಗಳನ್ನು ಲೋಕಾರ್ಪಣೆ ಮಾಡಲಾಗುವುದು.
7. ಏಕೀಕೃತ ಡಿಜಿಟಲ್ ಪೋರ್ಟಲ್: ನಾಗರೀಕರ ಸೇವೆಗಳಾದ ಖಾತಾ, ಆಸ್ತಿ ತೆರಿಗೆ, ಜನನ ಮತ್ತು ಮರಣ ಪ್ರಮಾಣ ಪತ್ರ, ಉದ್ಯಮ ಪರವಾನಗಿ, ಕಟ್ಟಡ ನಕ್ಷೆ ಪರವಾನಗಿ ಇತ್ಯಾದಿ ಸೇವೆಗಳು ಈಗಾಗಲೇ ಲಭ್ಯವಿದ್ದು, ಈ ಎಲ್ಲಾ ಸೇವೆಗಳನ್ನು ಸರಳೀಕೃತಗೊಳಿಸಿ ಏಕೀಕೃತ ಡಿಜಿಟಲ್ ಪೋರ್ಟಲ್ ಅಡಿ ಒದಗಿಸಲು ಕ್ರಮವಹಿಸಿದ್ದು ಏಪ್ರಿಲ್-2021 ಅಂತ್ಯಕ್ಕೆ ಲಭ್ಯವಾಗುವುದು ಎಂದು ಮಾಹಿತಿ ನೀಡಿದರು.
8. ಎಕ್ಸ್ ಪೀರಿಯೆನ್ಸ್ ಬೆಂಗಳೂರು ಯೋಜನೆಯ ಅನುಷ್ಠಾನಕ್ಕೆ ಶೀಘ್ರವೇ ಬೆಂಗಳೂರು ಪರಿಸರ ಮತ್ತು ಪರಂಪರೆ ಟ್ರಸ್ಟ್ ಸ್ಥಾಪಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
9. ಸ್ವಚ್ಛ ಬೆಂಗಳೂರು: ನಗರದಲ್ಲಿ ಹೆಚ್ಚಿನ ಜನಸಂಖ್ಯೆಯಿಂದ ತ್ಯಾಜ್ಯ ನಿರ್ವಹಣೆ ಪ್ರಮುಖ ಸವಾಲಿನ ಅಂಶವಾಗಿದೆ. ಪ್ರತಿನಿತ್ಯ ನಗರದಲ್ಲಿ ಸುಮಾರು 4500ಕ್ಕೂ ಅಧಿಕ ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ವೈಜ್ಞಾನಿಕ ಮತ್ತು ಸಮರ್ಪಕ ಘನತ್ಯಾಜ್ಯ ನಿರ್ವಹಣೆಗಾಗಿ 15 ದಿನದೊಳಗೆ ಎಸ್ ಪಿ ವಿ ಸ್ಥಾಪಿಸುವಂತೆ ಸೂಚಿಸಿದರು. ಮುಖ್ಯ ಕಾರ್ಯದರ್ಶಿ ಗಳು ಪ್ರತಿ ವಾರ ಈ ಯೋಜನೆಯ ಪ್ರಗತಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ರಾಜಧಾನಿಯಲ್ಲಿಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ SMART City Rounds