ಚಿಕ್ಕಬಳ್ಳಾಪುರ: ಹಣದಾಸೆಗೆ ಬಿದ್ದು ತಾನು ಕೆಲಸ ಮಾಡುತ್ತಿದ್ದ ಕಂಪನಿಗೇ ಧ್ರೋಹ ಬಗೆದು ದಕಾಯಿತಿಯ ನಾಟಕವಾಡಿ ಲಕ್ಷಾಂತರ ಹಣ ದೊಚ್ಚಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿ ಕಂಬಿ ಹಿಂದೆ ಕಳಿಸಿದ್ದಾರೆ.
ಹೌದು ಚಿಕ್ಕಬಳ್ಳಾಪುರದ ಖಾಸಗಿ ಸಂಸ್ಥೆ ಲೋಟಸ್ ಫಾರ್ಮ್ಸ್ ಕಂಪೆನಿಯ ಉದ್ಯೋಗಿ ಉದಯಕುಮಾರ್ ಎನ್ನೋ ವ್ಯಕ್ತಿ ಹಣದ ಆಶೆಗೆ ಬಿದ್ದು ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಹಣವನ್ನೆ ಲಪಟಾಯಿಸಿದ್ದ. ಇದಕ್ಕಾಗಿ ಪಕ್ಕಾ ಪ್ಲ್ಯಾನ್ ಮಾಡಿದ್ದ ಉದಯ್, ತನ್ನ ಸಹಚರರಿಗೆ ತಾನು ಕಂಪನಿ ದುಡ್ಡು ತೆಗೆದುಕೊಂಡು ಹೋಗುವಾಗ ಡಕಾಯಿತಿ ಮಾಡಿ ಎಂದು ಹೇಳಿಕೊಟ್ಟಿದ್ದ. ಅದರಂತೆ ಆತ ಕಂಪೆನಿಗೆ ಸೇರಿದ 7ಲಕ್ಷ 91 ಸಾವಿರ ರೂಪಾಯಿಗಳನ್ನ ತೆಗೆದುಕೊಂಡು ಹೋಗುವಾಗ ಚಿಕ್ಕಬಳ್ಳಾಪುರ ತಾಲೂಕು ಕೇತೇನಹಳ್ಳಿ ಬಳಿ ಡಕಾಯಿತಿ ಮಾಡಿದ್ದರು.
ಇದಾದ ನಂತರ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಇಡೀ ಘಟನೆಯ ದೂರುದಾರ ಹಾಗೂ ಸೂತ್ರದಾರ ಉದಯ್ ಕುಮಾರ್ ಸೇರಿದಂತೆ ಗೌರೀಬಿದನೂರು ಮೂಲದ ಪ್ರಶಾಂತ್, ನರಸಿಂಹಮೂರ್ತಿ, ಪೃಥ್ವಿರಾಜ್, ಕಿರಣ್, ನವೀನ್ ಅವರನ್ನು ಬಂದಿಸಿದ್ದಾರೆ. ಬಂಧಿತರಿಂದ 7ಲಕ್ಷ 60 ಸಾವಿರನಗದು, ಒಂದು ಇನ್ನೋವಾ ಕಾರು ಹಾಗೂ ಒಂದು ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.