ಮರಾಠಿ ಅಸ್ಮಿತೆ ಮತ್ತು ಹಿಂದೂತ್ವದ ಪ್ರಶ್ನೆ ಬಂದಾಗ ಶಿವ ಸೇನೆಯ ಕಾರ್ಯಕರ್ತರು ಗೂಂಡಾಗಳೇ: ಸಂಜಯ ರಾವತ್
‘ಶಿವ ಸೇನಾ ಭವನ ಬಾಳಾಸಾಹೇಬ್ ಠಾಕ್ರೆ ಅವರು ಕೂರುತ್ತಿದ್ದ ಸ್ಥಳವಾಗಿದೆ. ಯಾರಾದರೂ ಶಿವ ಸೇನಾ ಭವನಕ್ಕೆ ನುಗ್ಗುವ ಪ್ರಯತ್ನ ಮಾಡಿದರೆ, ನಾವು ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ, ಅದನ್ನು ಗೂಂಡಾಗಿರಿ ಅಂತ ಕರೆಯುವುದಾದರೆ, ಹೌದು ನಾವು ಗೂಂಡಾಗಳೇ,’ ಎಂದು ಸಂಜಯ ರಾವತ್ ಹೇಳಿದರು.
ಮುಂಬಯಿ: ಬುಧವಾರದಂದು ನಗರದ ದಾದರ್ ಏರಿಯಾದಲ್ಲಿರುವ ಶಿವ ಸೇನೆ ಕಚೇರಿ ಸೇನಾ ಭವನ್ ಎದುರು ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯನ್ನು ಬಿಜೆಪಿ ಗೂಂಡಾಗಿರಿ ಎಂದು ಬಣ್ಣಿಸಿರುವುದಕ್ಕೆ ಶಿವ ಸೇನೆಯ ಧುರೀಣ ಸಂಜಯ ರಾವತ್ ಪ್ರತಿಕ್ರಿಯಿಸಿದ್ದಾರೆ. ಬುಧವಾರದಂದು ಮುಂಬಯಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ‘ನಾವು ಗೂಂಡಾಗಳೆಂದು ಯಾರೂ ಸರ್ಟಿಫಿಕೇಟ್ ನೀಡುವ ಅವಶ್ಯಕತೆಯಿಲ್ಲ, ನಾವು ಪ್ರಮಾಣೀಕೃತ ಗೂಂಡಾಗಳಾಗಿದ್ದೇವೆ,’ ಎಂದು ಹೇಳಿ ತಾವು ಯಾಕೆ ಗೂಂಡಾ ಪ್ರವೃತ್ತಿಯ ಜನ ಎನ್ನುವುದನ್ನು ವಿವರಿಸಿದರು. ‘ಮರಾಠಿ ಅಸ್ಮಿತೆ ಮತ್ತು ಹಿಂದುತ್ವದ ಪ್ರಶ್ನೆ ಬಂದಾಗ ನಾವು ಪ್ರಮಾಣೀಕೃತ ಗೂಂಡಾಗಳು, ನಮ್ಮ ಕಚೇರಿಯು ಮಹಾರಾಷ್ಟ್ರ ರಾಜ್ಯ ಮತ್ತು ಅದರ ಜನರ ಸಂಕೇತವಾಗಿದೆ, ಎಂದು ಹೇಳಿದರು.
ಅಯೋಧ್ಯೆಯಲ್ಲಿ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದ ಕುರಿತಂತೆ ಶಿವ ಸೇನೆಯ ಮುಖವಾಣಿಯಾಗಿರುವ ‘ಸಾಮ್ನಾ’ ಪತ್ರಿಕೆಯಲ್ಲಿ ಮಾಡಿರುವ ತೀಕ್ಷ್ಣವಾದ ಟೀಕೆಗಳ ಹಿನ್ನೆಲೆಯಲ್ಲಿ ಬುಧವಾರದಂದು ಬಿಜೆಪಿ ಯುವ ಮೋರ್ಚಾದ ನಾಯಕರು ಸೇನಾ ಭವನ ಎದುರು ಪ್ರತಿಭಟನೆ ನಡೆಸಿದಾಗ, ಸೇನೆ ಮತ್ತು ಬಿಜೆಪಿ ಕಾರ್ಯಕರ್ತರಿ ಕೈಕೈ ಮಿಲಾಯಿಸಿದ್ದರು. ಶಿವ ಸೇನೆ ಪಕ್ಷದ ಕಾರ್ಯಕರ್ತರನ್ನು ಗೂಂಡಾಗಳೆಂದು ಹೇಳಿರುವ ಬಿಜೆಪಿ, ಅವರು ತಮ್ಮ ಒಬ್ಬ ಮಹಿಳಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ದಾಂಧಲೆ ನಡೆಸಲಿದ್ದಾರೆಂಬ ಮಾಹಿತಿ ತನಗೆ ಸಿಕ್ಕತ್ತು ಎಂದು ಶಿವ ಸೇನೆ ಹೇಳಿದೆ.
‘ಬಿಜೆಪಿ ಯುವ ಕಾರ್ಯಕರ್ತರು ನಮ್ಮ ಕಚೇರಿ ಎದುರು ಧರಣಿ ನಡೆಸಲಿದ್ದಾರೆಂಬ ಮಾಹಿತಿ ನಮಗೆ ಸಿಕ್ಕಿತ್ತು. ಅವರು ಸೇನಾ ಭವನ್ನಲ್ಲಿ ದಾಂಧಲೆ ನಡೆಸಲಿದ್ದಾರೆಂಬ ಸುಳಿವು ನಮಗೆ ನಂತರ ಸಿಕ್ಕಿತ್ತು. ಹಾಗಾಗೇ, ನಾವು ಅವರನ್ನು ಕಚೇರಿ ತಲುಪುವ ಮೊದಲೇ ತಡೆದೆವು,’ ಎಂದು ಸೇನಾದ ಶಾಸಕ ಸಾದಾ ಸರ್ವಂಕರ್ ಪಿ ಟಿ ಐಗೆ ತಿಳಿಸಿದರು.
‘ಶಿವ ಸೇನಾ ಭವನ ಬಾಳಾಸಾಹೇಬ್ ಠಾಕ್ರೆ ಅವರು ಕೂರುತ್ತಿದ್ದ ಸ್ಥಳವಾಗಿದೆ. ಯಾರಾದರೂ ಶಿವ ಸೇನಾ ಭವನಕ್ಕೆ ನುಗ್ಗುವ ಪ್ರಯತ್ನ ಮಾಡಿದರೆ, ನಾವು ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ, ಅದನ್ನು ಗೂಂಡಾಗಿರಿ ಅಂತ ಕರೆಯುವುದಾದರೆ, ಹೌದು ನಾವು ಗೂಂಡಾಗಳೇ,’ ಎಂದು ಸಂಜಯ ರಾವತ್ ಹೇಳಿದರು.
‘ಬಿಜೆಪಿ ಯಾಜೆ ಉರಿದುಕೊಳ್ಳುತ್ತಿದೆ? ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿರುವುದಾದರೂ ಏನು? ಅದರಲ್ಲಿ ಕೇವಲ ಸ್ಪಷ್ಟೀಕರಣ ಕೇಳಲಾಗಿದೆ ಮತ್ತು ಒಂದು ವೇಳೆ ಆರೋಪಗಳು ಸುಳ್ಳು ಅಂತ ಸಾಬೀತಾದರೆ ಆರೋಪಗಳನ್ನು ಮಾಡಿರುವವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಗಿದೆ. ಈ ದೇಶದಲ್ಲಿ ಸ್ಪಷ್ಟೀಕರಣ ಕೇಳುವುದು ಅಪರಾಧವೇ? ಬಿಜೆಪಿ ಹಗರಣದಲ್ಲಿ ಭಾಗಿಯಾಗಿದೆ ಎಂದು ಸಂಪಾದಕೀಯದಲ್ಲಿ ಎಲ್ಲೂ ಹೇಳಿಲ್ಲ. ನಿಮಗೆ ಓದು ಬರಹ ಗೊತ್ತಿಲ್ಲವೇ? ಮೊದಲು ಅರೋಪಗಳು ಏನು ಅನ್ನುವುದನ್ನು ಅರ್ಥ ಮಾಡಿಕೊಳ್ಳಿ ಮತ್ತು ಶಿವ ಸೇನೆಯ ಬಾತ್ಮೀದಾರರು ಏನು ಹೇಳಿದ್ದಾರೆ ಎನ್ನುವುದನ್ನು ಗಮನಿಸಿ. ನೀವು ವಿದ್ಯಾವಂತರೇ ಅಥವಾ ಅನಕ್ಷರಸ್ಥರೇ?’ ಎಂದು ‘ಸಾಮ್ನಾ’ದ ಸಂಪಾದಕರೂ ಆಗಿರುವ ರಾವತ್ ಹೇಳಿದರು.
ಹಿಂದೆ, ಶಿವ ಸೇನೆಯ ಮಿತ್ರಪಕ್ಷವಾಗಿದ್ದ ಬಿಜೆಪಿ, ರಾಜಕೀಯ ಲಾಭಗಳಿಗಾಗಿ ಸೇನೆಯು ಭಗವಾನ್ ರಾಮನನ್ನು ಅಪಖ್ಯಾತಿಗೀಡು ಮಾಡಿದೆ ಎಂದು ಹೇಳಿದೆ.
‘ಹಿಂದೆ ಬಾಬ್ರಿ ಮಸೀದಿ ಧ್ವಂಸಗೊಳಿಸಿದ್ದರ ಬಗ್ಗೆ ಶಿವ ಸೇನೆ ಗರ್ವಪಡುತ್ತಿತ್ತು. ಆದರೆ ಅದರ ನಾಯಕರಿಗೆ ಈಗ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಸೋನಿಯಾ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ದೇವತೆಗಳಾಗಿದ್ದಾರೆ,’ ಎಂದು ರಾಜ್ಯದ ಬಿಜೆಪಿ ಧುರೀಣ ಆಶಿಷ್ ಶೇಲರ್ ಅವರು ಪಿ ಟಿ ಐನೊಂದಿಗೆ ಮಾತಾಡುತ್ತಾ ಹೇಳಿದರು.
ಇದನ್ನೂ ಓದಿ: ಉಪಚುನಾವಣೆ ಮರುದಿನ ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಕನ್ನಡಿಗರ ವಿರುದ್ಧ ಸಂಜಯ್ ರೌತ್ ಲೇಖನ, ಕರ್ನಾಟಕ ನಾಯಕರ ಮೌನ