ಬೆಂಗಳೂರು: ಇನ್ನು ಎರಡುವರೆ ವರ್ಷ ತಾನೇ ಮುಖ್ಯಮಂತ್ರಿಯೆಂದು ಘಂಟಾಘೋಷವಾಗಿ ಬಿ.ಎಸ್. ಯಡಿಯೂರಪ್ಪ ಪುನರುಚ್ಚರಿಸಿದರೂ ಭಾರತೀಯ ಜನತಾ ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳಿಗೆ ಮಾತ್ರ ವಿರಾಮ ಸಿಗುತ್ತಿಲ್ಲ.
ಕೆಲವು ಸಂಪುಟ ಆಕಾಂಕ್ಷಿಗಳು ಕೂಗುಮಾರಿಗಳಂತೆ ಕ್ಯಾಮೆರಾ ಮುಂದೆ ಬಂದು ಮನಸ್ಸಿಗೆ ಬಂದಿದ್ದನ್ನು ಹೇಳುತ್ತ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದರೆ ಇನ್ನು ಕೆಲವರು ಯಾವುದೇ ಮಾತನಾಡದೇ ಸಭೆಯ ಮೇಲೆ ಸಭೆ ಮಾಡುತ್ತಾ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತಾ ತಮ್ಮ ದಾರಿ ಸುಗಮ ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಯಡಿಯೂರಪ್ಪ ಮಾತ್ರ ಒಂದಾದ ಮೇಲೆ ಒಂದರಂತೆ ರಾಜಕೀಯ ದಾಳವನ್ನು ಉರುಳಿಸುತ್ತಾ ತಮ್ಮದೇ ಪಕ್ಷದ ಹೈಕಮಾಂಡ್ಗೆ ಮತ್ತು ಸ್ಥಳೀಯ ನಾಯಕರಿಗೆ ಆಶ್ಚರ್ಯವುಂಟು ಮಾಡುತ್ತಿದ್ದಾರೆ.
ಈವರೆಗಿನ ಯಡಿಯೂರಪ್ಪ ನಡೆ
ಉಪಚುನಾವಣೆ ಬರುತ್ತೆ ಎಂಬ ನಿರೀಕ್ಷೆಯಲ್ಲಿ ಮರಾಠಾ ಅಭಿವೃದ್ಧಿ ನಿಗಮ ಮಾಡಿ ಅದನ್ನು ಜೀರ್ಣಿಸಿಕೊಂಡಿದ್ದಷ್ಟೇ ಅಲ್ಲ, ಒಂದು ಹೆಜ್ಜೆ ಮುಂದೆ ಹೋಗಿ ಒಂದು ಮಾಸ್ಟರ್ ಸ್ಟ್ರೋಕ್ ಕೊಟ್ಟರು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಾಡಿದ್ದಷ್ಟೇ ಅಲ್ಲ, ಆ ನಿರ್ಧಾರ ಮಾಡಿದ ಎರಡು ದಿನದೊಳಗೆ ಆ ನಿಗಮಕ್ಕೆ ₹ 500 ಕೋಟಿ ತೆಗೆದಿಟ್ಟು ಇಡೀ ವೀರಶೈವ ಲಿಂಗಾಯತ ಸಮುದಾಯದ ಹೃದಯವನ್ನು ಗೆದ್ದಂತೆ ಕಾಣುತ್ತಿದೆ. ಸದ್ಯಕ್ಕೆ ಬೇರೆ ಯಾವ ಪಕ್ಷಗಳೂ ಲಿಂಗಾಯತ ಮತ ಬ್ಯಾಂಕಿಗೆ ಕೈ ಹಾಕಲು ಸಾಧ್ಯವಾಗದಂತೆ ಮಾಡಿ ಬಿಟ್ಟಿದ್ದಾರೆ.
ಕಳೆದ ಎರಡು ದಿನಗಳಲ್ಲಿ ತಮಗೆ ಮತ್ತು ಪಕ್ಷಕ್ಕೆ ಹತ್ತಿರವಿರುವ ಅನೇಕರನ್ನು ಅವರು ವಿವಿಧ ನಿಗಮ/ಮಂಡಲಿಗಳಿಗೆ ನೇಮಿಸಿ ಮತ್ತೆ ಹಲವರಿಗೆ ಶಾಕ್ ಕೊಟ್ಟರು. ಅಷ್ಟೇ ಅಲ್ಲ, ತನ್ನನ್ನು ಇಳಿಸಲು ಪಕ್ಷ ಮುಂದೊಮ್ಮೆ ವಿಚಾರ ಮಾಡಿದರೆ ತಮ್ಮ ಸಮುದಾಯದ ಮತದಾರರು ಪಕ್ಷದ ಹೈಕಮಾಂಡ್ ವಿರುದ್ಧ ತಿರುಗಿ ಬೀಳುವಂತೆ ಮಾಡಲು ಭೂಮಿಕೆ ಸಿದ್ಧಪಡಿಸಿದ್ದಾರೆ.
ಮುಂದೇನು?
ಯಡಿಯೂರಪ್ಪ ಈಗ ಇನ್ನೊಂದು ಮಾಸ್ಟರ್ ಸ್ಟ್ರೋಕ್ ನೀಡಲು ತಯಾರಾಗಿದ್ದಾರೆ. ನಾಳೆ (ನ.27) ನಡೆಯಲಿರುವ ಸಂಪುಟ ಸಭೆಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿ ಕೊಡಲು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಕಸ್ಮಾತ್ ಪಕ್ಷ ಏನಾದರೂ ವಿಟೋ ಚಲಾಯಿಸಿದರೆ, ನಾಳೆ ಆ ಪ್ರಸ್ತಾಪ ಬರದಿರಲೂಬಹುದು.
ಮತ ಬರಲಿ ಬಿಡಲಿ, ದಕ್ಷಿಣ ಭಾಗದಿಂದ ಬರುವ ಧ್ವನಿಯನ್ನು ಮೊದಲೇ ಗಮನಿಸಿರುವ ಯಡಿಯೂರಪ್ಪ ಒಕ್ಕಲಿಗರಿಗೂ ಒಂದು ನಿಗಮ ನೀಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಇದು ಸಹ ನಾಳೆಯ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಇವೆಲ್ಲವನ್ನು ಮಾಡಿ ಯಡಿಯೂರಪ್ಪ ಏನು ಸಾಧಿಸುತ್ತಾರೆ? ಸದ್ಯಕ್ಕೆ ಅವರ ಮುಂದಿರುವ ಸವಾಲು: ಕುರ್ಚಿ ಉಳಿಸಿಕೊಂಡು ಎರಡುವರೆ ವರ್ಷ ತಾನೆ ಮುಖ್ಯಮಂತ್ರಿಯಾಗಿರುವುದು. ಅದಕ್ಕೆ ಏನೆಲ್ಲಾ ಬೇಕೋ ಆ ದಾಳಗಳನ್ನು ಅವರು ಉರುಳಿಸುತ್ತಿದ್ದಾರೆ. ಅದಕ್ಕೆ ಏನೆಲ್ಲಾ ಬೇಕೋ ಅದನ್ನು ಮಾಡುತ್ತಾ ಮುನ್ನುಗ್ಗುತ್ತಿದ್ದಾರೆ.
ಇಷ್ಟೇ ಅಲ್ಲ, ನಾಳೆ ಸಂಜೆ ಪಕ್ಷದ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರುಗಳಿಗೆ ಡಿನ್ನರ್ ನೀಡಲು ಮುಂದಾಗಿದ್ದಾರೆ. ಈ ಮೂಲಕ ಅವರನ್ನು ತನ್ನ ಕಡೆ ಒಲಿಸಿಕೊಳ್ಳಲು ಮುಂದಾದಂತೆ ಕಾಣುತ್ತಿದೆ.
Published On - 6:07 pm, Thu, 26 November 20