ಕಾರವಾರ: ಅವರೆಲ್ಲಾ ಕಲೆಯನ್ನೇ ನಂಬಿ ಜೀವನ ಸಾಗಿಸ್ತಿದ್ದವರು. ನಾಟಕ, ತಾಳಮದ್ದಲೆ, ವಾದ್ಯ, ಮೇಳ, ಯಕ್ಷಗಾನ ಹೀಗೆ ಕಲೆ ಹೊರತುಪಡಿಸಿ ಬೇರೆ ಉದ್ಯೋಗ ಅವರಿಗೆ ಗೊತ್ತಿಲ್ಲ. ಆದ್ರೆ ಜಿಲ್ಲಾಡಳಿತದ ಕ್ರಮದಿಂದಾಗಿ ಅಂಧಕಾರ ಕವಿದಂತಾಗಿದೆ. ಹೊಟ್ಟೆ ತುಂಬಿಸುತ್ತಿದ್ದ ಕಲೆಗೆ ಬೆಲೆಯಿಲ್ಲದೇ ಬದುಕು ಬೀದಿಗೆ ಬಿದ್ದಂತಾಗಿದೆ.
ರಾಜ್ಯದಲ್ಲಿ ಕೊರೊನಾ ಅನ್ಲಾಕ್ 5.0 ನಂತರ ಬಹುತೇಕ ಚಟುವಟಿಕೆಗಳು ಓಪನ್ ಆಗಿವೆ. ಬಾರ್, ಪಬ್, ಬೀಚ್, ಪ್ರವಾಸೋದ್ಯಮ ಹೀಗೆ ಎಲ್ಲಾ ಮರಳಿ ಹಳಿ ತಲುಪುತ್ತಿವೆ. ಇನ್ನೇನು ಶಾಲಾ-ಕಾಲೇಜುಗಳು ಕೂಡ ತೆರೆಯುವ ಹಂತ ತಲುಪಿದೆ. ಹೀಗೆ ಎಲ್ಲಾ ಮುಕ್ತವಾಗಿದ್ರೂ ಉತ್ತರ ಕನ್ನಡ ಜಿಲ್ಲೆ ಕಲಾವಿದರಿಗೆ ಮಾತ್ರ ಕಲೆಯನ್ನು ಪ್ರದರ್ಶನ ಮಾಡಲು ಅವಕಾಶ ಸಿಕ್ಕಿಲ್ಲ.
‘ನೆರೆಯ ಜಿಲ್ಲೆಯಲ್ಲಿ ಅನುಮತಿ, ನಮ್ಮಗೆ ಮಾತ್ರ ಏಕಿಲ್ಲ?’
ಜಿಲ್ಲಾಡಳಿತ ಕಲಾ ಪ್ರದರ್ಶನ ಮಾಡದಂತೆ ನಿರ್ಬಂಧ ವಿಧಿಸಿದ್ದು, ಜಿಲ್ಲೆಯ ಕಲಾವಿದರ ನಿದ್ದೆಗೆಡಿಸಿದೆ. ಅಲ್ಲದೆ ಜೀವನಕ್ಕೆ ಬೇರೆ ದಾರಿ ಇಲ್ಲದ ಕಲೆಯನ್ನೇ ನಂಬಿಕೊಂಡಿದ್ದ ಕುಟುಂಬಗಳು ಕಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇನ್ನು ದುಡಿಮೆ ಇಲ್ಲದೇ ಮನೆ ನಿಭಾಯಿಸೋದು ದುಸ್ಥರವಾಗುತ್ತಿದೆ. ಶಾಲಾ ಕಾಲೇಜು ಇನ್ನೇನು ಪ್ರಾರಂಭದ ಹಂತದಲ್ಲಿದ್ದು, ಮಕ್ಕಳನ್ನ ಹೇಗೆ ಸೇರಿಸುವುದು ಎನ್ನುವ ಚಿಂತೆಯಲ್ಲಿದ್ದಾರೆ. ನೆರೆಯ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಕಲಾವಿದರಿಗೆ ಪ್ರೋತ್ಸಾಹದನವನ್ನೂ ನೀಡಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಅದೇ ರೀತಿ ನಮ್ಮಲ್ಲೂ ಅವಕಾಶ ನೀಡಬೇಕೆಂದು ಕಲಾವಿದರು ಮನವಿ ಮಾಡಿದ್ದಾರೆ.
ಮೇಕಪ್ ಆರ್ಟಿಸ್ಟ್, ವಸ್ತ್ರಾಲಂಕಾರರು, ಹಿನ್ನೆಲೆಗಾಯಕರ ಬದುಕು ಕೂಡ ಬೀದಿಗೆ ಬಿದ್ದಂತಾಗಿದೆ. ಇದರಿಂದ ಎಲ್ಲಾ ಪದಾದಧಿಕಾರಿಗಳೂ ಒಟ್ಟಾಗಿ ಮನವಿ ಮಾಡಿದ್ದಾರೆ. ಲಿಖಿತ ರೂಪದಲ್ಲಿ ಯಾವುದೇ ನಿರ್ಬಂಧ ಹೇರದಿದ್ದರೂ ತಾಲೂಕು ದಂಡಾಧಿಕಾರಿ ಇಲ್ಲವೇ ಪೊಲೀಸರ ಬಳಿ ಕಲೆ ಪ್ರದರ್ಶನದ ಫರ್ಮಿಷನ್ಗೆ ಹೋದ ವೇಳೆ ಜನ ಸೇರಿದರೆ ಕಾರ್ಯಕ್ರಮ ಆಯೋಜಕರೇ ಜವಾಬ್ದಾರರು ಎಂದು ಮುಚ್ಚಳಿಕೆ ಬರೆಸಿಕೊಳ್ಳುತ್ತಾರೆ. ಇದರಿಂದಾಗಿ ಆಯೋಜಕರೂ ತಮ್ಮನ್ನ ಯಾವುದೇ ಕಾರ್ಯಕ್ರಮಕ್ಕೆ ಕರೆಯಲ್ಲ ಮತ್ತು ನಾವಾಗಿಯೇ ಆಯೋಜನೆ ಮಾಡುವುದಕ್ಕೂ ಭಯಪಡುವ ಸ್ಥಿತಿ ಎದುರಾಗುತ್ತದೆ. ಹಾಗಾಗಿ ಈ ಎಲ್ಲಾ ವಿಚಾರಗಳನ್ನ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಅವರಿಂದ ಸಕಾರಾತ್ಮಕ ಸ್ಪಂದನೆಯ ನಿರೀಕ್ಷೆಯಲ್ಲಿದ್ದೇವೆ ಅಂತಾರೆ ಕಾರವಾರ ನಗರ ಕಲಾವಿದರ ಸಂಘದ ಕಾರ್ಯದರ್ಶಿ.
ಒಟ್ನಲ್ಲಿ ಕೊರೊನಾ ನಂತರ ಜಿಲ್ಲೆಯ ಬಹುತೇಕ ಚಟುವಟಿಕೆ ಮರಳಿ ಪ್ರಾರಂಭವಾಗುತ್ತಿರುವ ಸಂದರ್ಭದಲ್ಲೂ ಕಲಾವಿದರು ಮಾತ್ರ ಕಲೆ ಪ್ರದರ್ಶನಕ್ಕೆ ಅವಕಾಶವಿಲ್ಲದೇ ಪರದಾಡ್ತಿದ್ದಾರೆ. ಇನ್ನು ಈ ವಿಚಾರವನ್ನ ಸಂಬಂಧಪಟ್ಟವರು ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಿದೆ.