ಚಿತ್ರದುರ್ಗ: ಬರದನಾಡು ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆ ಜಿಲ್ಲೆಯ ಜನರಲ್ಲಿ ಖುಷಿ ತಂದಿದೆ. ಆದ್ರೆ, ಕಾಲುವೆ ನಿರ್ಮಾಣಕ್ಕಾಗಿ ರೈತರ ಭೂಮಿ ವಶಕ್ಕೆ ಪಡೆದು ಕಾಮಗಾರಿ ನಡೆಯುತ್ತಿದ್ದರೂ, ಭೂ ಪರಿಹಾರ ನೀಡದೆ ಇರುವುದು ರೈತರನ್ನು ಕೆರಳಿಸಿದೆ.
ಚಿತ್ರದುರ್ಗ ತಾಲೂಕಿನ ಬೆಳಘಟ್ಟ ಗ್ರಾಮದಲ್ಲಿ ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅಂತಿಮ ಘಟ್ಟದಲ್ಲಿದೆ. ಚಿತ್ರದುರ್ಗ ತಾಲೂಕಿನ ಸಾಸಲಹಟ್ಟಿ, ಕಲ್ಲೇನಹಳ್ಳಿ, ಬೆಳಘಟ್ಟ , ಹಾಯ್ಕಲ್, ದೊಡ್ಡಹಟ್ಟಿ, ಪೇಲವರಹಟ್ಟಿ, ಬೊಮ್ಮಕ್ಕನಹಳ್ಳಿಗಳ 200 ರೈತರಿಗೆ ಸೇರಿದ ಸುಮಾರು 800ಎಕರೆ ಭೂಮಿ ವಶಕ್ಕೆ ಪಡೆದು ಕಾಮಗಾರಿ ಮಾಡಲಾಗುತ್ತಿದೆ. ಆದ್ರೆ, ಆರಂಭದಲ್ಲಿ ಗುತ್ತಿಗೆದಾರರಿಂದ 20ಸಾವಿರ ರೂ. ನೀಡಿದ್ದು ಬಿಟ್ಟರೆ ಈವರೆಗೆ ಯಾವುದೇ ಪರಿಹಾರ ಹಣ ನೀಡಿಲ್ಲ. ಹೀಗಾಗಿ, ಈ ರೈತರಿಗೆ ಕಳೆದ ಒಂದು ವರ್ಷದಿಂದ ಭೂಮಿಯೂ ಇಲ್ಲ, ಪರಿಹಾರವೂ ಇಲ್ಲದಂತಾಗಿದೆ.
ಇನ್ನು ಈಗಾಗಲೇ ಈ ಭಾಗದ ರೈತರು ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು, ಭೂ ಸ್ವಾಧೀನ ಅಧಿಕಾರಿಗಳು, ಮತ್ತು ಜಿಲ್ಲಾಡಳಿತಕ್ಕೆ ಅನೇಕ ಸಲ ಸೂಕ್ತ ಭೂ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಆದ್ರೂ, ಅಧಿಕಾರಿಗಳು ಮಾತ್ರ ಕ್ಯಾರೆೇ ಅಂದಿಲ್ಲ. ಬದಲಾಗಿ ಇಲ್ಲದ ಕಥೆ ಹೇಳಿ ರೈತರನ್ನ ವಾಪಸ್ ಕಳುಹಿಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಪರಿಹಾರ ಒದಗಿಸಬೇಕೆಂಬುದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಯುವ ವೇಳೆ ಖುಷಿಯಲ್ಲಿರಬೇಕಿದ್ದ ರೈತರು ಅಧಿಕಾರಿಗಳ ಬೇಜವಬ್ದಾರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನಾದ್ರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ನೊಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕಿದೆ.