ಚಿಕ್ಕಮಗಳೂರು: ಅಲ್ಲಿಗೆ ಹೋಗ್ಬೇಕು ಅಂದ್ರೆ ಸುಮ್ನೆ ಅಲ್ಲ. ಅದು ಒಂಥರಾ ಸವಾಲೇ ಸರಿ. ಆ ಬೆಟ್ಟವನ್ನ ಏರ್ಬೇಕು ಅಂತಾನೇ ಭಕ್ತರು ದಿನಗಳನ್ನ ಏಣಿಸ್ತಾ ಇರ್ತಾರೆ. ಕಾಡು ಮೇಡಿನ ಸವಾರಿ ಮಾಡಿ, ಬೆಟ್ಟ-ಗುಡ್ಡ ಏರಿ ಹತ್ತೋ ಚಾಲೆಂಜ್ ಇದೆಯಲ್ಲಾ ಅದು ನಿಜಕ್ಕೂ ರೋಮಾಂಚನ. ವರ್ಷಕ್ಕೊಮ್ಮೆ ಮಾತ್ರ ಆ ದೇವಿ ದರ್ಶನ ನೀಡುವ ಈ ದಿನಕ್ಕಾಗಿ ರಾಜ್ಯ-ಹೊರರಾಜ್ಯದಿಂದ ಭಕ್ತರು ಚಾತಕ ಪಕ್ಷಿಯಂತೆ ಕಾಯ್ತಾ ಇರ್ತಾರೆ.
ಅಯ್ಯೋ..! ಬಂದೆ ಬಿಡ್ತು ನೋಡು.. ಇನ್ನು ಸ್ವಲ್ಪ ದೂರ ಅಷ್ಟೇ..ಸಿಕ್ಕೇ ಬಿಡ್ತು.. ಈ ತರಹದ ಸಂಭಾಷಣೆ ಈ ಬೆಟ್ಟವನ್ನ ಏರ್ಬೇಕಾದ್ರೆ ಬಹುತೇಕರ ಬಾಯಲ್ಲಿ ಕೇಳಿ ಬರೋ ಸಾಮಾನ್ಯ ಮಾತುಗಳು.
ಅಂದಾಗೆ ಬಿಂಡಿಗ ದೇವಿರಮ್ಮ ದೇವಾಲಯ ಬೆಟ್ಟ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಈ ದೇವಿ ದರ್ಶನ ಮಾಡಲು ಬರುವ ಭಕ್ತರು ಸುಮಾರು 6 ಕೀಲೋ ಮೀಟರ್ ದೂರವನ್ನ ನಡೆದೇ ಕ್ರಮಿಸಬೇಕು.
ಪ್ರತಿವರ್ಷ ಈ ಕ್ಷೇತ್ರಕ್ಕೆ ರಾಜ್ಯ-ಹೊರರಾಜ್ಯದಿಂದ 75 ಸಾವಿರದಿಂದ ಒಂದು ಲಕ್ಷದವರೆಗೂ ಭಕ್ತರು ಬಂದು ದರ್ಶನ ಮಾಡಿಕೊಂಡು ಪುನೀತರಾಗುತ್ತಾರೆ. ಆದ್ರೆ ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೆಟ್ಟವೇರಲು ಹೊರಗಡೆಯಿಂದ ಬರುವ ಭಕ್ತರಿಗೆ ನಿರ್ಬಂಧ ಹೇರಿತ್ತು. ಕೇವಲ ಅಕ್ಕಪಕ್ಕದ ಗ್ರಾಮಸ್ಥರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು.
ಹರಕೆ ಕಟ್ಟಿಕೊಂಡವರು ಉಪವಾಸವಿದ್ದು ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡೋದು. ಸಂಜೆಯಾಗುತ್ತಿದ್ದಂತೆ ಭಕ್ತರು ತಾವು ತಂದಿದ್ದ ಸೌದೆ, ಎಣ್ಣೆ, ಬೆಣ್ಣೆ, ಸೀರೆಗೆ ಅಗ್ನಿ ಸ್ಪರ್ಶ ಮಾಡುತ್ತಾರೆ. ನಂತರ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನ ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿ ಆಚರಿಸುತ್ತಾರೆ.
ಪ್ರತಿವರ್ಷ ದೇವಿಯ ದರ್ಶನ ಮಾಡಲು ತಾ ಮುಂದು ನಾ ಮುಂದು ಅಂತಾ ಬರ್ತಿದ್ರು, ಆದ್ರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರ್ಬಂಧ ಹೇರಿದ್ರಿಂದ ಸೀಮಿತ ಜನರಿಗೆ ಮಾತ್ರ ದೇವಿಯ ದರ್ಶನ ಮಾಡಲು ಅವಕಾಶ ಸಿಕ್ತು.