ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರನ್ನು ಕೊರೊನಾ ಬಿಟ್ಟು ಬಿಡದೆ ಕಾಡುತ್ತಿದ್ದು, ಮತ್ತೆ ಮೂರನೇ ಬಾರಿಗೆ ಕ್ವಾರಂಟೈನ್ ಆಗಬೇಕಾದ ಅನಿವಾರ್ಯತೆಯಲ್ಲಿ ಡಾ. ಸುಧಾಕರ್ ಇದ್ದಾರೆ ಎನ್ನಲಾಗಿದೆ.
ಸಚಿವ ಸುಧಾಕರ್ ಅವರ ಆಪ್ತ ಸಹಾಯಕನಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಈ ಕಾರಣದಿಂದಾಗಿ ಸಚಿವರು ಕ್ವಾರಂಟೈನ್ ಆಗಲಿದ್ದಾರೆ ಎನ್ನಲಾಗಿದೆ. ಜೊತೆಗೆ ಸಚಿವರ ಕಾರ್ಯ ಕ್ಷೇತ್ರವಾದ ವಿಧಾನಸೌಧದ ಮೂರನೇ ಮಹಡಿಯ ಕಚೇರಿ 339 ನ್ನು ಸೀಲ್ ಡೌನ್ ಮಾಡಲಾಗಿದೆ. ಹಾಗೆಯೇ ಸಚಿವರ ಆಪ್ತ ಸಿಬ್ಬಂದಿ ಇದ್ದ ಕೊಠಡಿ 339 (A) ಕೂಡ ಸೀಲ್ ಡೌನ್ ಮಾಡಲಾಗಿದೆ.
ಈ ಹಿಂದೆ ಸಚಿವ ಸುಧಾಕರ್ ಅವರ ಕುಟುಂಬ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಿಂದ ಸಚಿವರು ಕ್ವಾರಂಟೈನ್ ಆಗಿದ್ದರು. ಅದಕ್ಕೂ ಹಿಂದೆ ಅವರ ಆಪ್ತ ವಲಯದಲ್ಲಿ ಕೊರೊನಾ ಪ್ರಕರಣ ಕಂಡು ಬಂದಿದ್ದರಿಂದ ಡಾ. ಸುಧಾಕರ್ ಕ್ವಾರಂಟೈನ್ ಆಗಿದ್ದರು ಎನ್ನಲಾಗಿದೆ.