ಬೆಳಗಾವಿ:ಆಸ್ಪತ್ರೆಗೆ ಅಲೆದು ಅಲೆದು ಸರಿಯಾದ ಚಿಕಿತ್ಸೆ ಸಿಗದೇ ಗರ್ಭಿಣಿಯೊಬ್ಬರು ತಮ್ಮ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ನಡೆದಿದೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ತೆಲಸಂಗ ಗ್ರಾಮದ ಗರ್ಭಿಣಿ ಮೊದಲು ತೆಲಸಂಗ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಆದರೆ ಸಮುದಾಯ ಕೇಂದ್ರದ ವೈದ್ಯೆ ಗರ್ಭಿಣಿಯ ಸ್ಥಿತಿ ಗಂಭೀರವಾಗಿದ್ದರಿಂದ ಅಥಣಿಯ ತಾಲೂಕು ಆಸ್ಪತ್ರೆಗೆ ತೆರಳಲು ತಿಳಿಸಿದ್ದಾರೆ.
ಇದರಿಂದ ಅಥಣಿಯ ತಾಲೂಕು ಆಸ್ಪತ್ರೆಗೆ ಬಂದ ಗರ್ಭಿಣಿಯನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳದ ಆಸ್ಪತ್ರೆಯ ವೈದ್ಯ ಔಷಧಿ ಕೊಟ್ಟು ಮನೆಗೆ ವಾಪಸ್ ಕಳಿಸಿದ್ದಾರೆ. ವೈದ್ಯನ ಮಾತು ಕೇಳಿ ಮತ್ತೆ ಗ್ರಾಮಕ್ಕೆ ಮರಳಿದ ಗರ್ಭಿಣಿಗೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಗರ್ಭಿಣಿಯನ್ನು ಮತ್ತೆ ಆಂಬುಲೆನ್ಸ್ ನಲ್ಲಿ ಆಸ್ಪತ್ರೆ ಕರೆದುಕೊಂಡು ಹೋಗಲಾಗಿದೆ.
ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ದಾರಿ ಮಧ್ಯದಲ್ಲಿ ಗರ್ಭಿಣಿಗೆ ಹೆರಿಗೆಯಾಗಿದ್ದು ಮಗು ಹೊಟ್ಟೆಯಲ್ಲಿ ಸಾವನ್ನಪ್ಪಿದೆ. ಮಗು ಸಾವನ್ನಪ್ಪಲು ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ವೈದ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ.