ಅಣ್ಣಾಮಲೈ ನಾಮಪತ್ರಕ್ಕೆ ತಡೆ; ಅಪರಾಧ ಪ್ರಕರಣಗಳ ಸ್ಪಷ್ಟೀಕರಣ ನೀಡಲು ಚುನಾವಣಾ ಆಯೋಗ ಸೂಚನೆ
ಅಣ್ಣಾಮಲೈ ವಿರುದ್ಧ 10ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ ಎಂದು ಸ್ವತಂತ್ರ ಅಭ್ಯರ್ಥಿಗಳು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ತಡೆ ಹೇರಲಾಗಿದೆ.

ಚೆನ್ನೈ: ತಮಿಳುನಾಡಿನ ಅರವಕುರಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನಾಮಪತ್ರಕ್ಕೆ ಚುನಾವಣಾ ಆಯೋಗ ತಡೆ ನೀಡಿದೆ. ನಾಮಪತ್ರದಲ್ಲಿ ಅಪರಾಧ ಪ್ರಕರಣಗಳ ಬಗ್ಗೆ ಉಲ್ಲೇಖಿಸಿಲ್ಲವೆಂಬ ಕಾರಣಕ್ಕೆ ತಡೆ ನೀಡಲಾಗಿದ್ದು, ಸ್ಪಷ್ಟೀಕರಣ ನೀಡುವಂತೆ ಚುನಾವಣಾ ಆಯೋಗ ಕೇಳಿದೆ. ಅಣ್ಣಾಮಲೈ ವಿರುದ್ಧ 10ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ ಎಂದು ಸ್ವತಂತ್ರ ಅಭ್ಯರ್ಥಿಗಳು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವುದಾಗಿ ತಿಳಿಸಿ ನಾಮಪತ್ರಕ್ಕೆ ತಡೆ ಹೇರಲಾಗಿದೆ.
ಅರವಕುರಚಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಅಣ್ಣಾಮಲೈ ಅವರನ್ನು ಪ್ರಬಲ ಅಭ್ಯರ್ಥಿಯಾಗಿ ಬಿಂಬಿಸಿರುವ ಬಿಜೆಪಿ ಶತಾಯಗತಾಯ ಗೆಲ್ಲಿಸಬೇಕೆಂದು ಪಣತೊಟ್ಟಿದೆ. ಡಿಎಂಕೆ ಪಕ್ಷದ ಭದ್ರಕೋಟೆಯಿಂದಲೇ ಸ್ಪರ್ಧಿಸುತ್ತಿರುವ ಅಣ್ಣಾಮಲೈ ಮಾರ್ಚ್ 18ರಂದು ಸೈಕಲ್ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ್ದರು. ನಾನು ಜನಸಾಮಾನ್ಯರ ಪ್ರತಿನಿಧಿ ಎಂದು ಹೇಳಿಕೊಂಡು ಸೈಕಲ್ನಲ್ಲಿ ಬಂದಿದ್ದ ಅಣ್ಣಾಮಲೈಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಮುನಿರತ್ನ ಸೇರಿದಂತೆ ತಮಿಳುನಾಡಿನ ಬಿಜೆಪಿ ನಾಯಕರು, ಕಾರ್ಯಕರ್ತರು ಬೆಂಬಲ ನೀಡಿದ್ದರು. ಏಪ್ರಿಲ್ 6ಕ್ಕೆ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಿಂದ ಸ್ಪರ್ಧಿಸಲು ಸರ್ವಸನ್ನದ್ಧರಾಗಿರುವ ಅಣ್ಣಾಮಲೈಗೆ ಇದೀಗ ಮೊದಲ ತಡೆ ಎದುರಾಗಿದೆ.
ಇದನ್ನೂ ಓದಿ: ತಮಿಳುನಾಡಿನ ಅರವಕುರುಚಿ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆಗೆ ಧುಮುಕಿದ ಕಮಲಧಾರಿ ಅಣ್ಣಾಮಲೈ
Published On - 1:07 pm, Sat, 20 March 21