AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವ್ ಜಿಹಾದ್ ತಡೆಗೆ ಕಾನೂನು ಬೇಕಾ? ಧರ್ಮದ ಹೆಸರಲ್ಲಿ ಅಸಲಿ ಪ್ರೇಮಿಗಳಿಗೂ ತೊಂದರೆಯಾಗುತ್ತಿದೆಯಾ?

ಅಂತರ್ ಧರ್ಮೀಯ ವಿವಾಹದ ವಿಚಾರಕ್ಕೆ ಬಂದಾಗ ಯಾವುದೇ ಯುವಕ ಅಥವಾ ಯುವತಿ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತಾಂತರ ಆಗಬಹುದೇ ವಿನಃ ಅವರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡುವಂತಿಲ್ಲ. ಮದುವೆಗಾಗಿ ಮತಾಂತರ ನಡೆಸುವುದು, ಮದುವೆಗಾಗಿ ಧರ್ಮವನ್ನು ಮರೆಮಾಚಿ ನಂತರದಲ್ಲಿ ಮತಾಂತರಕ್ಕೆ ಒತ್ತಾಯಿಸುವುದು, ಬೆದರಿಕೆ ಹಾಕುವುದು ಇವೆಲ್ಲವೂ ಕಾನೂನು ಬಾಹಿರವಾಗುತ್ತದೆ.

ಲವ್ ಜಿಹಾದ್ ತಡೆಗೆ ಕಾನೂನು ಬೇಕಾ? ಧರ್ಮದ ಹೆಸರಲ್ಲಿ ಅಸಲಿ ಪ್ರೇಮಿಗಳಿಗೂ ತೊಂದರೆಯಾಗುತ್ತಿದೆಯಾ?
Skanda
|

Updated on:Nov 27, 2020 | 11:34 AM

Share

ಲವ್ ಜಿಹಾದ್ ಭಾರತದಲ್ಲಿ ಹಲವು ವರ್ಷಗಳಿಂದ ಅನೇಕ ಚರ್ಚೆಗಳನ್ನು, ಗಲಾಟೆಗಳನ್ನು, ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿರುವ ವಿಷಯ. ಇದೇ ಲವ್ ಜಿಹಾದ್ ಈಗ ಹೊಸತೊಂದು ಕಾನೂನಿಗೂ ಕಾರಣವಾಗಲಿದೆಯಾ ಎಂಬುದು ಸದ್ಯ ಎಲ್ಲೆಡೆ ನಡೆಯುತ್ತಿರುವ ಬಿಸಿಬಿಸಿ ಚರ್ಚೆ.

ಲವ್ ಜಿಹಾದನ್ನು ಅಪರಾಧವೆಂದು ಪರಿಗಣಿಸಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೂಗೆದ್ದಿರುವ ಸಂದರ್ಭದಲ್ಲೇ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಂತರ್ ಧರ್ಮೀಯ ವಿವಾಹವೊಂದನ್ನು ಎತ್ತಿ ಹಿಡಿದು ಮಹತ್ವದ ತೀರ್ಪು ನೀಡಿದೆ. ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ವಿವಾಹವಾಗುವುದಕ್ಕೆ ಯಾವುದೇ ಅಭ್ಯಂತರವಿಲ್ಲವೆಂದು ಹೇಳಿರುವ ಉಚ್ಛ ನ್ಯಾಯಾಲಯವು ಹುಡುಗ, ಹುಡುಗಿ ಇಬ್ಬರೂ ವಯಸ್ಕರಾಗಿರುವುದರಿಂದ ಅವರಿಗೆ ತಮಗೆ ಬೇಕಾದ್ದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿದೆ. ಈ ವಿಚಾರದಲ್ಲಿ ಧರ್ಮವನ್ನು ಅಡ್ಡ ತಂದು ಅವರನ್ನು ತಡೆಯುವುದಕ್ಕೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಈ ಕುರಿತು ಟಿವಿ9 ನಡೆಸಿದ ಫೇಸ್ಬುಕ್ ಲೈವ್ ಕಾರ್ಯಕ್ರಮದಲ್ಲಿ ಹೈಕೋರ್ಟ್ ಹಿರಿಯ ವಕೀಲೆ ಎಸ್.ಸುಶೀಲ ಅವರು ಅಲಹಾಬಾದ್ ಹೈಕೋರ್ಟಿನ ತೀರ್ಪು ಮತ್ತು ಲವ್ ಜಿಹಾದ್ ಕುರಿತು ವಿವರವಾಗಿ ಮಾತನಾಡಿದರು. ಯೂಟ್ಯೂಬ್​ನಲ್ಲಿ ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಸದರಿ ತೀರ್ಪಿನ ಕುರಿತು ವಿವರಣೆ ನೀಡಿ, ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಮತಾಂತರದ ಕುರಿತಾಗಲೀ, ವಿವಾಹದ ಮಾನ್ಯತೆಯ ಕುರಿತಾಗಲೀ ಉಲ್ಲೇಖಿಸಿಲ್ಲ. ವಿವಾಹವನ್ನು ಧರ್ಮದ ಆಧಾರದಲ್ಲಿ ತಡೆಯಲಾಗುವುದಿಲ್ಲ ಎನ್ನುವ ಕೋರ್ಟ್​ ಅಭಿಪ್ರಾಯವನ್ನು ಸ್ಪಷ್ಟಪಡಿಸುವ ಮೂಲಕ ಚರ್ಚೆಯನ್ನು ಆರಂಭಿಸಿದ ಅವರು, ತಮ್ಮ ಮಕ್ಕಳ ಕುರಿತು ಯೋಚಿಸುವ ಪೋಷಕರು ವಿವಾಹದ ವಿಚಾರ ಬಂದಾಗ ಕಟುವಾಗುತ್ತಾರೆ. ಇದರ ಕುರಿತು ಸೂಕ್ಷ್ಮವಾಗಿ ಯೋಚಿಸಬೇಕು. ಹುಡುಗ, ಹುಡುಗಿ ಪರಸ್ಪರ ಒಪ್ಪಿ ಮದುವೆಯಾಗುವುದನ್ನು ತಡೆಯುವುದರಲ್ಲಿ ಅರ್ಥವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಂತೆಯೇ, ಅಂತರ್ ಧರ್ಮೀಯ ವಿವಾಹದ ವಿಚಾರಕ್ಕೆ ಬಂದಾಗ ಯಾವುದೇ ಯುವಕ ಅಥವಾ ಯುವತಿ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತಾಂತರ ಆಗಬಹುದೇ ವಿನಃ ಅವರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡುವಂತಿಲ್ಲ. ಮದುವೆಗಾಗಿ ಮತಾಂತರ ನಡೆಸುವುದು, ಮದುವೆಗಾಗಿ ಧರ್ಮವನ್ನು ಮರೆಮಾಚಿ ನಂತರದಲ್ಲಿ ಮತಾಂತರಕ್ಕೆ ಒತ್ತಾಯಿಸುವುದು, ಬೆದರಿಕೆ ಹಾಕುವುದು ಇವೆಲ್ಲವೂ ಕಾನೂನು ಬಾಹಿರವಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಮದುವೆಯಿಂದ ಹೊರಬಂದು ಅದನ್ನು ಅಮಾನ್ಯಗೊಳಿಸುವಂತೆ ನ್ಯಾಯಾಲಯದ ಮೆಟ್ಟಿಲು ಹತ್ತಬಹುದು ಮತ್ತು ವಂಚಿಸಿದವರ ವಿರುದ್ಧ ದೂರು ದಾಖಲಿಸಲೂ ಅವಕಾಶವಿದೆ ಎನ್ನುವುದನ್ನು ತಿಳಿಸಿದರು.

ವಿವಾಹದ ಹೊರತಾಗಿಯೂ ಯಾವುದೇ ಒಬ್ಬ ವ್ಯಕ್ತಿಯ ಆತ್ಮಸಾಕ್ಷಿಗೆ ವಿರುದ್ಧವಾಗಿ ಮತಾಂತರ ಮಾಡುವಂತಿಲ್ಲ. ಆದರೆ, ಮತ ಹಾಗೂ ಮತಕ್ಕೆ ಸೇರಿದ ವ್ಯಕ್ತಿ ಎರಡನ್ನೂ ಒಪ್ಪಿ ಮತಾಂತರವಾದರೆ, ವಿವಾಹವಾದರೆ ಅದನ್ನು ತಡೆಯುವುದು ತಪ್ಪಾಗುತ್ತದೆ ಎಂದು ಹೇಳಿದರು.

ಫೇಸ್​ಬುಕ್​ ಲೈವ್​ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಇಷ್ಟಪಟ್ಟು ಮದುವೆಯಾಗುವವರ ಪ್ರಕರಣಕ್ಕೂ ಲವ್ ಜಿಹಾದ್​ಗೂ ನಡುವೆ ತೆಳುವಾದ ಗೆರೆಯೊಂದಿದೆ. ಲವ್ ಜಿಹಾದ್​ನಲ್ಲಿ ಪ್ರೀತಿಯ ನೆಪದಲ್ಲಿ ಆಮಿಷವೊಡ್ಡಿ, ವಂಚನೆ ಮಾಡಲಾಗುತ್ತದೆ. ಅದರ ಮೂಲ ಉದ್ದೇಶವೇ ಮತಾಂತರವಾಗಿರುತ್ತದೆ ಎಂದು ಹೇಳಿದರು.

ಈ ಬಗೆಯ ಮೋಸವನ್ನು ತಡೆಯಲು ಕಠಿಣ ಕಾನೂನು ರೂಪುಗೊಳ್ಳಲೇಬೇಕು ಆಗ ಮಾತ್ರ ಲವ್ ಜಿಹಾದ್ ಎಂಬ ವಿಷ ವರ್ತುಲದಿಂದ ಅಮಾಯಕ ಹೆಣ್ಣುಮಕ್ಕಳನ್ನು ರಕ್ಷಿಸಲು ಸಾಧ್ಯ ಎಂದರು.

ಸುಮಾರು 60 ಸಾವಿರ ಮಂದಿ ಫೇಸ್​ಬುಕ್​ ಲೈವ್ ವೀಕ್ಷಿಸಿದ್ದರು. ಟಿವಿ9 ಫೇಸ್​ಬುಕ್​ ಅಕೌಂಟ್​ನಲ್ಲಿ ನೀವೂ ರೆಕಾರ್ಡೆಡ್​ ವಿಡಿಯೊ ನೋಡಬಹುದು.

ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On - 7:09 pm, Thu, 26 November 20