ಸಂಕಷ್ಟ ಕಾಲದಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಬಗ್ಗೆ ಹತ್ತಾರು ವಲಯಗಳಲ್ಲಿ ನೂರಾರು ನಿರೀಕ್ಷೆಗಳು ಮನೆಮಾಡಿವೆ. ಈ ಲೇಖನದಲ್ಲಿ ವೈಯಕ್ತಿಕ ಹಣಕಾಸು ತಜ್ಞರಾದ ರಾಘವೇಂದ್ರ ಭಟ್ ಡಿಜಿಟಲ್ ಆರ್ಥಿಕತೆಯಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ತಮ್ಮ ನಿರೀಕ್ಷೆ ಹಂಚಿಕೊಂಡಿದ್ದಾರೆ.
ಈ ಬಜೆಟ್ನಲ್ಲಿ ಸರ್ಕಾರದಿಂದ ಯಾವುದೇ ಬಹುದೊಡ್ಡ ನಿರೀಕ್ಷೆಗಳನ್ನು ಇರಿಸಿಕೊಳ್ಳಬಾರದು. ಸರ್ಕಾರ ಸದ್ಯ ಸಂಪನ್ಮೂಲ ಕೇಂದ್ರೀಕರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಹೀಗಿರುವಾಗ, ಸರ್ಕಾರದಿಂದ ಬೃಹತ್ ನಿರೀಕ್ಷೆ ಇರಿಸಿಕೊಳ್ಳುವುದು ತಪ್ಪೇ ಆಗುತ್ತದೆ. ದೇಶ ಒಂದು ಥರದ ಬದಲಾವಣೆಗೆ ಒಗ್ಗಿಕೊಳ್ಳುತ್ತಿದೆ.
ಕೆಲ ವರ್ಷಗಳಿಂದಷ್ಟೇ ಡಿಜಿಟಲ್ ವ್ಯವಹಾರ ಮುನ್ನೆಲೆಗೆ ಬಂದಿದೆ. ಈ ಕ್ಷೇತ್ರದಲ್ಲಿ ಆದ ಗಮನಾರ್ಹ ಬದಲಾವಣೆಗಳು ದೇಶದ ಆರ್ಥಿಕ ಸ್ಥಿತಿಯನ್ನು ಬೇರೆಯದೇ ಆದ ಮಟ್ಟಕ್ಕೆ ತಲುಪಿಸುತ್ತಿದೆ. ಈ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಾಗದವರು ಮಾತ್ರ ಆರ್ಥಿಕವಾಗಿಯೂ ಹಿಂದೆ ಬೀಳುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಹಿಂದಕ್ಕೆ ಹೋಗಲಿದ್ದಾರೆ.
ಈ ಬಜೆಟ್ನಲ್ಲಿ ಹೊಸ ಘೋಷಣೆಗಳಿಗಿಂತ ಹೆಚ್ಚು ಈಗ ಜಾರಿಯಲ್ಲಿರುವ ಕೆಲ ವ್ಯವಸ್ಥೆಗಳಲ್ಲೇ ಸುಧಾರಣೆ ತರಬೇಕಿದೆ ಎಂಬ ನಿರೀಕ್ಷೆಗಳು ನನ್ನಲ್ಲಿವೆ. ಡಿಜಿಟಲ್ ವ್ಯವಹಾರದಲ್ಲಿ ವಂಚನೆಗಳು ಹೆಚ್ಚುತ್ತಿವೆ. ಸುರಕ್ಷೆಯ ಬಗ್ಗೆ ಸರ್ಕಾರ ಹೆಚ್ಚು ಗಮನ ನೀಡಬೇಕು. ಬಳಕೆಯ ಡಿಜಿಟಲ್ ಹಣಕಾಸು ವಹಿವಾಟಿನಲ್ಲಿ ವಂಚನೆಗಳೂ ಅಷ್ಟೇ ಹೆಚ್ಚುತ್ತಿವೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ನಾನು ಬಯಸುತ್ತೇನೆ.
ಪರ್ಯಾಯ ಹಣಕಾಸು ಕ್ಷೇತ್ರದ ಕುರಿತೂ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕಿದೆ. ಪರ್ಯಾಯ ಆರ್ಥಿಕತೆಯೆಂದರೆ ಕ್ರಿಪ್ಟೋಕರೆನ್ಸಿಯಂತಹ ಅಧಿಕೃತವಲ್ಲದ ಕರೆನ್ಸಿಗಳು. ಇಂತವುಗಳ ವಹಿವಾಟು, ಬಳಕೆ ಹೆಚ್ಚುತ್ತಿದೆ. ಡಿಜಿಟಲ್ ವಹಿವಾಟು ಹೆಚ್ಚಿದಷ್ಟು ಇಂತಹ ಪರ್ಯಾಯ ಹಣಕಾಸಿನ ಬಳಕೆಯೂ ಹೆಚ್ಚುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಎಷ್ಟು ಬಿಗಿ ಪಟ್ಟು ಹಾಕಿದರೂ ಕಡಿಮೆಯೇ.
ಜಿಎಸ್ಟಿ ಜಾರಿಗೊಳಿಸಿ ಸರ್ಕಾರ ತೆರಿಗೆ ಪದ್ಧತಿಯಲ್ಲಿ ಸುಧಾರಣೆಯನ್ನೇನೋ ತಂದಿದೆ. ಆದರೆ, ದಿನಕಳೆದಂತೆ ಡಿಜಿಟಲ್ ಮೂಲಕ ಜಿಎಸ್ಟಿ ಕಟ್ಟುವಾಗಲೂ ನೇರವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಅಕ್ರಮವನ್ನು ತಡೆಯಲು ಕೇಂದ್ರ ಈ ಬಜೆಟ್ನಲ್ಲಿ ಯಾವುದಾದರೂ ಬೇಲಿ ಹಾಕಲಿದೆಯೇ ಎಂದು ಕಾಯುತ್ತಿದ್ದೇನೆ.
Union Budget 2021 Photo Gallery | ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಹಲ್ವಾ ಸಮಾರಂಭ
Published On - 2:02 pm, Wed, 27 January 21