ಶಿರಸಿಯಲ್ಲಿ ಎಗ್ ಫ್ರೂಟ್ ಕೃಷಿ: ಆದಾಯವೂ ಇದೆ, ಆರೋಗ್ಯವೂ ಇದೆ! ಏನೀ ಹಣ್ಣಿನ ಮಾಯೆ?
ಉತ್ತರ ಕನ್ನಡ: ಕುಸಿಯುತ್ತಿರುವ ಆದಾಯ ಮತ್ತು ದಿನೇ ದಿನೆ ಏರುತ್ತಿರುವ ಖರ್ಚುಗಳಿಂದ ರಾಜ್ಯ ಸೇರಿದಂತೆ ದೇಶದ ಹಲವಾರು ರೈತರು ಕಣ್ಣೀರಲ್ಲಿ ಕೈ ತೊಳೆಯುವಂಥ ದುಃಸ್ಥಿತಿಯಲ್ಲಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಪಂಡಿತರು ಹಲವಾರು ದಾರಿಗಳನ್ನು ತೋರಿಸುತ್ತಿದ್ದಾರೆ. ಅದರಲ್ಲಿ ಪರ್ಯಾಯ ಬೆಳೆ ಕೃಷಿ ಪದ್ಧತಿ ಸಹ ಒಂದು. ಈಗಾಗಲೇ ಈ ರೀತಿಯ ಪ್ರಯೋಗ ಮಾಡಿ ಯಶಸ್ಸು ಕಂಡವರು ಬಹಳಷ್ಟು ಜನ ಇದ್ದಾರೆ. ಅಂಥದ್ದೇ, ಒಂದು ಪ್ರಯೋಗ ಮಾಡಿ ಯಶಸ್ಸು ಕಂಡು, ಈಗ ಬೇರೆ ರೈತರಿಗೆ ಮಾದರಿ ಆದವರು, ಜಿಲ್ಲೆಯ […]

ಉತ್ತರ ಕನ್ನಡ: ಕುಸಿಯುತ್ತಿರುವ ಆದಾಯ ಮತ್ತು ದಿನೇ ದಿನೆ ಏರುತ್ತಿರುವ ಖರ್ಚುಗಳಿಂದ ರಾಜ್ಯ ಸೇರಿದಂತೆ ದೇಶದ ಹಲವಾರು ರೈತರು ಕಣ್ಣೀರಲ್ಲಿ ಕೈ ತೊಳೆಯುವಂಥ ದುಃಸ್ಥಿತಿಯಲ್ಲಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಪಂಡಿತರು ಹಲವಾರು ದಾರಿಗಳನ್ನು ತೋರಿಸುತ್ತಿದ್ದಾರೆ. ಅದರಲ್ಲಿ ಪರ್ಯಾಯ ಬೆಳೆ ಕೃಷಿ ಪದ್ಧತಿ ಸಹ ಒಂದು. ಈಗಾಗಲೇ ಈ ರೀತಿಯ ಪ್ರಯೋಗ ಮಾಡಿ ಯಶಸ್ಸು ಕಂಡವರು ಬಹಳಷ್ಟು ಜನ ಇದ್ದಾರೆ. ಅಂಥದ್ದೇ, ಒಂದು ಪ್ರಯೋಗ ಮಾಡಿ ಯಶಸ್ಸು ಕಂಡು, ಈಗ ಬೇರೆ ರೈತರಿಗೆ ಮಾದರಿ ಆದವರು, ಜಿಲ್ಲೆಯ ಶಿರಸಿ ತಾಲೂಕಿನ ಹುಲೇಕಲ್ಲಿನ ಓಣಿಕೇರಿ ಗ್ರಾಮದ ದೇವರಗದ್ದೆ ನಿವಾಸಿ ಗುರುಪಾದ ಹೆಗಡೆ.
ರಾಜ್ಯದಲ್ಲಿ ಕೃಷಿಕರಿಗೆ ಆದಾಯದ ಕೊರತೆ ಉಂಟಾಗುತ್ತಿದೆ. ಹೀಗಿರುವಾಗ ರೈತರು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರದೇಶದ ಹವಾಮಾನಕ್ಕೆ ಮತ್ತು ಮಣ್ಣಿನ ಗುಣಮಟ್ಟಕ್ಕೆ ಹೊಂದುವ ಇತರ ಬೆಳೆಗಳನ್ನು ಪರ್ಯಾಯವಾಗಿ ಬೆಳೆಯುತ್ತಿದ್ದೇನೆ. ಅದರಲ್ಲೂ, ಹೆಚ್ಚಾಗಿ ವಿವಿಧ ಬಗೆಯ ಹಣ್ಣುಗಳನ್ನು ಬೆಳೆಯಲಾರಂಭಿಸಿದ್ದೇನೆ ಎಂದು ಗುರುಪಾದ ಹೆಗಡೆ ಹೇಳಿದ್ದಾರೆ.
ಮೊಟ್ಟೆ ಆಕಾರದ ಎಗ್ ಫ್ರೂಟ್!
ಗುರುಪಾದ ಹೆಗಡೆ ಮೂಲತಃ ರೈತರೇ. ಕೃಷಿಯಲ್ಲಿ ವಿವಿಧ ಬಗೆಯ ಪ್ರಯೋಗ ಮಾಡಿ ಯಶಸ್ಸು ಕಂಡವರು. ಈಗ, ತಮ್ಮ ಜಮೀನಿನಲ್ಲಿ ಅಡಿಕೆ ಕೃಷಿಯ ಜೊತೆಗೆ ವಿವಿಧ ಬಗೆಯ ಹಣ್ಣುಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ವಿಶೇಷ ತಳಿಯಾದ ಎಗ್ ಫ್ರೂಟ್ ಎಂಬ ಹಣ್ಣೂ ಸಹ ಒಂದು. ಅಂದ ಹಾಗೆ, ಇದರ ಮೂಲ ಹೆಸರು ಪೌಟೇರಿಯಾ ಕ್ಯಾಂಪೇಚಿಯಾನಾ. ಉತ್ತರ ಅಮೆರಿಕದ ಮೆಕ್ಸಿಕೋ ಹಾಗೂ ಗ್ವಾಟೆಮಾಲಾ ರಾಷ್ಟ್ರಗಳಲ್ಲಿ ಹೇರಳವಾಗಿ ಬೆಳೆಸಲಾಗುತ್ತಿದೆ. ವಿದೇಶದ ಈ ಹಣ್ಣನ್ನು ಇದೀಗ ನಮ್ಮ ದೇಶದಲ್ಲೂ ಬೆಳೆಸಲಾಗುತ್ತಿದೆ. ಭಾರತದಲ್ಲಿ ಈ ಹಣ್ಣನ್ನು ಎಗ್ ಫ್ರೂಟ್ ಎಂದು ಕರೆಯುತ್ತಾರೆ. ಈ ಹಳದಿ ಬಣ್ಣದ ಹಣ್ಣಿನ ರೂಪ ಮೊಟ್ಟೆ ಆಕಾರದಲ್ಲಿದ್ದು, ಮೃದುವಾದ ಸಿಪ್ಪೆಯನ್ನು ಹೊಂದಿದೆ.
ಎಗ್ ಫ್ರೂಟ್ ಬೆಳೆಸುವುದರಿಂದ ರೈತನ ಆದಾಯ ಹೆಚ್ಚುತ್ತದೆ. ಏಕೆಂದರೆ, ದೇಶದ ಕೆಲವು ಪ್ರದೇಶಗಳಲ್ಲಿ ಮಾತ್ರ ಈ ಹಣ್ಣನ್ನು ಬೆಳೆಯಲಾಗುತ್ತಿದೆ. ಜೊತೆಗೆ, ಮಾರುಕಟ್ಟೆಯಲ್ಲಿ ಸಹ ಇದರ ಬೇಡಿಕೆ ಹೆಚ್ಚಿದೆ. ನಾನು ವರ್ತಕರಿಗೆ 1 ಕೆ.ಜಿ ಹಣ್ಣನ್ನ 100 ರೂಪಾಯಿ ದರದಲ್ಲಿ ಮಾರುತ್ತೇನೆ. ಆದರೆ, ಮಾರುಕಟ್ಟೆಯಲ್ಲಿ ಇದರ ಬೆಲೆ ಪ್ರತಿ ಕೆ.ಜೆಗೆ 250 ರೂಪಾಯಷ್ಟು ಇದೆ ಎಂದು ಗುರುಪಾದ ಹೆಗಡೆ ಹೇಳಿದ್ದಾರೆ.
ಅತ್ಯಂತ ಪೌಷ್ಠಿಕ ಹಾಗೂ ಸ್ವಾದಿಷ್ಟ ಹಣ್ಣು ಒಂದು ಸಸಿಗೆ 100 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದೇನೆ. ಇದು ಬಹಳ ಅಪರೂಪದ ಹಣ್ಣು. ಕಾಶ್ಮೀರದ ಕಡೆ ಈ ಹಣ್ಣು ಹೆಚ್ಚು ಫೇಮಸ್ಸಾಗಿದ್ದು ಅಲ್ಲಿನ ನಿಯೋಜನೆಗೊಂಡಿರುವ ಸೈನಿಕರಿಗೆ ಈ ಹಣ್ಣನ್ನು ನೀಡಲಾಗುತ್ತದೆ. ಎಗ್ ಫ್ರೂಟ್ ಅತ್ಯಂತ ಪೌಷ್ಠಿಕ ಹಾಗೂ ಸ್ವಾದಿಷ್ಟವಾದ ಹಣ್ಣು. ಆದ್ದರಿಂದ, ಸೈನಿಕರು ಈ ಹಣ್ಣನ್ನು ತುಂಬಾ ಇಷ್ಟಪಡುತ್ತಾರೆ ಎಂಬ ಮಾಹಿತಿಯನ್ನು ಗುರುಪಾದ ಹೆಗಡೆ ಹಂಚಿಕೊಂಡಿದ್ದಾರೆ.
ಎಗ್ ಫ್ರೂಟ್ ಹಣ್ಣಿನ ವಿಶೇಷತೆ ಏನು?
ಅಂದ ಹಾಗೆ, ಎಗ್ ಫ್ರೂಟ್ ಕೃಷಿಗೆ ಅಧಿಕ ಪರಿಶ್ರಮದ ಅಗತ್ಯವಿಲ್ಲ. ಸಸಿಯಿಂದ ವೃಕ್ಷವಾಗಿ ಬೆಳೆದು ಹಣ್ಣು ಬೀರಲು ಸುಮಾರು 6-7 ವರ್ಷಗಳ ಕಾಲ ಹಿಡಿಯುತ್ತದೆ. ಯಾವುದೇ ರೋಗಗಳ ಕಾಟ ಈ ಸಸಿಗಳಿಗಿಲ್ಲ. ರಾಜ್ಯದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕೆಂಪು ಮಣ್ಣಿನಲ್ಲಿ ಎಗ್ ಫ್ರೂಟ್ ಸಸಿ ಅತ್ಯಂತ ಸುಲಭವಾಗಿ ಬೆಳಯುತ್ತದೆ. ಜೊತೆಗೆ, ಇದಕ್ಕೆ ಮಣ್ಣಿನಲ್ಲಿರುವ ತೇವಾಂಶದ ಪ್ರಮಾಣವೇ ಸಾಕಾಗುತ್ತದೆ. ಹೀಗಾಗಿ, ಇದಕ್ಕೆ ಹೆಚ್ಚಿನ ಆರೈಕೆ ಬೇಕಿಲ್ಲ.
ಈ ಹಣ್ಣು ಬೆಳೆಸಲು ಹೆಚ್ಚು ಖರ್ಚಾಗುತ್ತಾ? ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ಎಗ್ ಫ್ರೂಟ್ ಮರ ಹಣ್ಣು ಬೀರುತ್ತದೆ. ಅಧಿಕ ತಾಪಮಾನವಿರುವ ಪ್ರದೇಶದಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಅಡಿಕೆ ಮತ್ತು ತೆಂಗು ಬೆಳೆಗಾರರು ಅಧಿಕ ಖರ್ಚಿಲ್ಲದೆ ಈ ಹಣ್ಣನ್ನು ಸುಲಭವಾಗಿ ಬೆಳೆಸಬಹುದು.
ಮಿಲ್ಕ್ ಶೇಕ್, ಐಸ್ ಕ್ರೀಂನಲ್ಲಿ ಎಗ್ ಫ್ರೂಟ್ ಬಳಕೆ ಎಗ್ ಫ್ರೂಟ್ ಬಳಸಿ ಸಖತ್ ಮಿಲ್ಕ್ ಶೇಕ್ ತಯಾರಿಸಬಹುದಾಗಿದೆ. ಈ ಹಣ್ಣಿನ ಐಸ್ ಕ್ರೀಂ ಅಂತೂ ಸವಿಯಲು ತುಂಬಾನೇ ಟೇಸ್ಟಿ. ಜೊತೆಗೆ, ಎಗ್ ಫ್ರೂಟ್ನಿಂದ ಹಲ್ವಾ, ಫ್ರೂಟ್ ಸಲಾಡ್ ಸೇರಿದಂತೆ ಬಗೆಬಗೆಯ ತಿನಿಸುಗಳನ್ನು ತಯಾರಿಸಬಹುದು. ಈ ಹಣ್ಣನ್ನು ಹಾಗೆ ಸವಿಯಲು ಬಲು ರುಚಿ. -ಶ್ರುತಿ ಹೆಗಡೆ ಶಿರಸಿ

Published On - 7:44 pm, Thu, 12 November 20




