
ತುಮಕೂರು: ಕೂಲಿಗಾಗಿ ಬಂದವರು ರೋಗ ಪೀಡಿತರಾಗಿ ಬೀದಿಗೆ ಬಿದ್ದಿರುವ ಮನಕಲುಕುವ ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ನೆಡೆದಿದೆ.
ತಿಪಟೂರು ತಾಲೂಕಿನವರಾದ ಈ ಬಡ ವ್ಯಕ್ತಿ ತನ್ನ ಮಗಳೊಂದಿಗೆ ಗುಬ್ಬಿ ಪಟ್ಟಣಕ್ಕೆ ಗಾರೆ ಕೆಲಸ ಅರಸಿ ಬಂದಿದ್ದರು. ಆದರೆ ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ಬದುಕು ದುಸ್ತರವಾಯಿತು. ಆಶ್ರಯ ಬಯಸಿ ಇಬ್ಬರು ಪಟ್ಟಣದ ಒಕ್ಕಲಿಗ ಸಮುದಾಯ ಭವನದ ಬಳಿ ನೆಲೆ ಊರುವಂತಾಯಿತು. ಜೊತೆಗೆ, ಊಟ ತಿಂಡಿ ಇಲ್ಲದೆ ಪರದಾಡುವಂತಾಯಿತು. ಇನ್ನೂ ಈ ಬಡ ಕೂಲಿ ಕಾರ್ಮಿಕನಿಗೆ ಕ್ಷಯ ರೋಗವಿದೆ. ಆದರೆ, ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಆತನ ಮಗಳು ಪರದಾಡುತ್ತಿದ್ದಳು.
ಇವರ ಸ್ಥಿತಿ ಕಂಡ ಸ್ಥಳೀಯರು ದಿನನಿತ್ಯದ ಊಟದ ವ್ಯವಸ್ಥೆಗೆ ಏರ್ಪಾಡು ಮಾಡಿದ್ದರು ಎಂದು ತಿಳಿದುಬಂದಿದೆ. ಹಾಗೆಯೇ, ಸ್ಥಳೀಯ ಶಾಸಕ ಎಸ್ ಆರ್ ಶ್ರೀನಿವಾಸ್ ಬೆಂಬಲಿಗರು ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎನ್ನಲಾಗಿದೆ. ದುರಾದೃಷ್ಟವೆಂಬಂತೆ ಆತನ ಮಗಳೂ ಸಹ ಕಾಮಾಲೆಯಿಂದ ಬಳಲುತ್ತಿದ್ದಾಳೆ ಎಂದು ತಿಳಿದುಬಂದಿದೆ. ಹಾಗಾಗಿ, ಈಕೆಗೂ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಸ್ಥಳೀಯರು ಸಹೃದಯಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
Published On - 6:47 pm, Sun, 12 July 20