Budget 2021 | ವಿತ್ತೀಯ ಕೊರತೆ ಸರಿದೂಗಿಸಲು ನಿರ್ಮಲಾ ಸೀತಾರಾಮನ್ ಹೆಣಗಾಟ

2020-21ರ ಬಜೆಟ್ ಅಂದಾಜಿನ ಖರ್ಚುಗಳನ್ನು ತುಂಬಿಕೊಳ್ಳಲು ಸರ್ಕಾರಕ್ಕೆ ಇನ್ನೂ ₹ 80,000 ಕೋಟಿ ಅವಶ್ಯಕತೆಯಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ಅದನ್ನು ಸಾಲವಾಗಿ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

Budget 2021 | ವಿತ್ತೀಯ ಕೊರತೆ ಸರಿದೂಗಿಸಲು ನಿರ್ಮಲಾ ಸೀತಾರಾಮನ್ ಹೆಣಗಾಟ
ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಅರುಣ್​ ಕುಮಾರ್​ ಬೆಳ್ಳಿ Edited By:

Updated on: Feb 01, 2021 | 4:14 PM

ನವದೆಹಲಿ: ಸಂಸತ್ತಿನಲ್ಲಿ ಇಂದು ಬಜೆಟ್ 2021 ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020-21 ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ (fiscal deficit) ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 9.5 ರಷ್ಟಿದೆ. ಕೊವಿಡ್-19 ಪಿಡುಗಿನಿಂದಾಗಿ ಆದಾಯ ಸಂಗ್ರಹ ಪ್ರಮಾಣ ಬಹಳಷ್ಟು ಕ್ಷೀಣಿಸಿದೆ ಎಂದು ವಿವರಿಸಿದರು.

2021-22ರ ಹಣಕಾಸಿನ ವರ್ಷಕ್ಕೆ ವಿತ್ತೀಯ ಕೊರತೆ ಶೇಕಡಾ 6.8ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ ಎಂದ ನಿರ್ಮಲಾ ಸೀತಾರಾಮನ್ ಸರ್ಕಾರದ ಬಂಡವಾಳ ವೆಚ್ಚದಲ್ಲಿ (Capital Expenditure) ಈ ಬಾರಿ ತೀವ್ರ ಸ್ವರೂಪದ ಏರಿಕೆ ಮಾಡುವ ಉದ್ದೇಶ ಪ್ರಸ್ತಾಪಿಸಿದರು. ಈ ವರ್ಷ ₹ 5.54 ಲಕ್ಷ ಕೋಟಿ ಬಂಡವಾಳ ವೆಚ್ಚದ ಉದ್ದೇಶವಿದೆ. ಕಳೆದ ವರ್ಷದ ಬಜೆಟ್​ಗೆ ಹೋಲಿಸಿದರೆ ಇದು ಶೇ 34.5ರಷ್ಟು ಹೆಚ್ಚು ಎಂದು ಮಾಹಿತಿ ನೀಡಿದರು.

2020-21ರ ಬಜೆಟ್ ಅಂದಾಜಿನ ಖರ್ಚುಗಳನ್ನು ತುಂಬಿಕೊಳ್ಳಲು ಸರ್ಕಾರಕ್ಕೆ ಇನ್ನೂ ₹ 80,000 ಕೋಟಿ ಅವಶ್ಯಕತೆಯಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ಅದನ್ನು ಸಾಲವಾಗಿ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ. ಕೇಂದ್ರವು ರಾಜ್ಯ ಸರ್ಕಾರ ಮತ್ತು ಇತರ ಸ್ವಾಯತ್ತ ಸಂಸ್ಥೆಗಳಿಗೆ ಅವುಗಳ ಬಂಡವಾಳ ವೆಚ್ಚಕ್ಕಾಗಿ ₹ 2 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಿದೆ ಎಂದು ನಿರ್ಮಲಾ ಹೇಳಿದರು.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮೊದಲ ತ್ರೈಮಾಸಿಕದಲ್ಲಿ ಜಾರಿಗೊಳಿಸಲಾದ ಕಟ್ಟುನಿಟ್ಟಿನ ಲಾಕ್​ಡೌನ್​ನಿಂದಾಗಿ ಭಾರತದ ವಿತ್ತೀಯ ಕೊರತೆಯ ಗುರಿಯು ಕಳೆದ ಜುಲೈ ತಿಂಗಳಲ್ಲೇ ಮೀರಿತ್ತು. ಡಿಸೆಂಬರ್ 2020ರ ಹೊತ್ತಿಗೆ ಅದು ಸಂಪೂರ್ಣ ವರ್ಷದ ಬಜೆಟ್ ಅಂದಾಜಿನ ಶೇಕಡಾ 145.5 ರಷ್ಟು ಅಂದರೆ ₹ 11.58 ಲಕ್ಷ ಕೋಟಿಗೆ ಹೆಚ್ಚಾಗಿತ್ತು.

‘ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ (ಎಫ್​ಆರ್​ಬಿಎಮ್ ಆ್ಯಕ್ಟ್) ಅನ್ವಯ ಮಾರ್ಚ್ 31, 2021 ರ ಹೊತ್ತಿಗೆ ಜಿಡಿಪಿಯ ಶೇಕಡಾ 3ರಷ್ಟನ್ನು ನಿಯಂತ್ರಿಸಲಿದೆ ಎನ್ನುವುದು ನಮಗೆ ಗೊತ್ತಿದೆ. ಆದರೆ ಕೊವಿಡ್-19 ಪಿಡುಗಿನಿಂದ ಸೃಷ್ಟಿಯಾಗಿರುವ ಸ್ಥಿತಿಯು ನಾವು ಬೇರೆ ದಾರಿಯನ್ನು ಹುಡುಕಿಕೊಳ್ಳುವಂತೆ ಮಾಡಿದೆ. ಈ ಕುರಿತು ನಾನು ಹೇಳಿಕೆಯೊಂದನ್ನು ಸಂಸತ್ತಿನಲ್ಲಿ ನೀಡಲಿದ್ದೇನೆ. ಎಫ್​ಆರ್​ಬಿಎಮ್ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ನಾವು ಮಾಡಲಿದ್ದೇವೆ’ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಾ ಹೇಳಿದರು.

Budget 2021 LIVE: ಆದಾಯ ತೆರಿಗೆ ನಿಯಮದಲ್ಲಿ ಬದಲಾವಣೆ ಇಲ್ಲ.. ಹಿರಿಯ ನಾಗರಿಕರಿಗೆ ಐಟಿ ರಿಟರ್ನ್​ ಸಲ್ಲಿಕೆ ವಿನಾಯ್ತಿ

Budget 2021 | ಮನೆ ಖರೀದಿದಾರರಿಗೆ ಬಿಗ್​ ರಿಲೀಫ್​, ಗೃಹಸಾಲದ ವಿನಾಯ್ತಿಗಳು ವಿಸ್ತರಣೆ

 

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us