
ಬಜೆಟ್ಗಾಗಿ ದೇಶಕ್ಕೆ ದೇಶವೇ ಕಾದುಕುಳಿತಿದೆ. ಈ ವರ್ಷದ ಬಜೆಟ್ನಲ್ಲಿ ಏನಿರಬಹುದು ಎಂಬ ಕಾತರ, ಆಸೆ, ಕುತೂಹಲಗಳು ಎಲ್ಲ ವಲಯಗಳಿಗೂ, ಎಲ್ಲ ಜನರಿಗೂ ಇದ್ದೇ ಇದೆ. ಕಂಡುಕೇಳರಿಯದಂಥ ಕಷ್ಟಗಳನ್ನು ಕಳೆದ ಒಂದು ವರ್ಷದಿಂದ ಅನುಭವಿಸಿದ್ದೇವೆ. ಮನುಷ್ಯರಿಗೆ ಕಷ್ಟ ಬರದೇ ಮರಕ್ಕೆ ಬಂದೀತೇ? ಎಂದು ನಮಗೆ ನಾವೇ ಸಮಾಧಾನ ಹೇಳಿಕೊಂಡಿದ್ದೇವೆ. ಎತ್ತರೆತ್ತರಕ್ಕೆ ಏರುವ ತವಕದ ಗೋಪುರವನ್ನು ಹತ್ತಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸರ್ಕಾರದ ಬಜೆಟ್ ನಮಗೆ ಸಾಥಿಯಾದರೆ ಸಾಕು ಎಂಬ ಆಸೆಯ ಹೊಂಬೆಳಕೊಂದು ಎಲ್ಲರಲ್ಲೂ ಚಿಗುರಿದೆ.
ಸರ್ಕಾರದ ಬಳಿಯೂ ದುಡ್ಡಿನ ಮರವಿಲ್ಲ ಆದರೂ ಎಲ್ಲಿಂದ ಹುಟ್ಟುತ್ತೆ ದುಡ್ಡು? ಈ ಪ್ರಶ್ನೆಗೆ ಉತ್ತರ ಹುಡುಕು ಪ್ರಯತ್ನ ಇಲ್ಲಿದೆ. ತನ್ನ ಆಡಳಿತ ಮತ್ತು ಸಾಮಾಜಿಕ ಜವಾಬ್ದಾರಿಗಾಗಿ ಸರ್ಕಾರ ಕಂದಾಯ ಸೇರಿದಂತೆ ಹಲವು ಮೂಲಗಳಿಂದ ಹಣ ಒಗ್ಗೂಡಿಸುತ್ತದೆ. ಈ ಪ್ರಕ್ರಿಯೆಯನ್ನೇ ನಿಧಿ ಸಂಚಯ ಎನ್ನುತ್ತಾರೆ. ಹೀಗೆ ಸಂಗ್ರಹಿಸಿದ ದುಡ್ಡನ್ನು ಆಡಳಿತ ನಿರ್ವಹಣೆ ಮತ್ತು ಸಾಮಾಜಿಕ ಜವಾಬ್ದಾರಿಗಾಗಿ ಸರ್ಕಾರ ಹೇಗೆ ವಿನಿಯೋಗಿಸಲು ಉದ್ದೇಶಿಸಿದ ಎಂಬ ವಿವರಗಳನ್ನು ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸಿ, ಅನುಮೋದನೆ ಕೋರುತ್ತಾರೆ. ಈ
ಪ್ರಕ್ರಿಯೆಗೆ Revenue Budget ಎನ್ನುತ್ತಾರೆ. ಆದಾಯಕ್ಕಿಂತಲೂ ಖರ್ಚು ಹೆಚ್ಚಾಗಿರುವ ಬಜೆಟ್ ಮಂಡಿಸಿದರೆ ಅದು ಖೋತಾ ಬಜೆಟ್ ಎನಿಸಿಕೊಳ್ಳುತ್ತದೆ. ಬಾಕಿ ಉಳಿಯುವ ಪ್ರಮಾಣ ವಿತ್ತೀಯ ಕೊರತೆ (Fiscal Deficit) ಎನಿಸಿಕೊಳ್ಳುತ್ತದೆ.
ಸರ್ಕಾರದ ದುಡ್ಡಿನ ಮೂಲ ಯಾವುದು?
ಸರ್ಕಾರ ವರ್ಷಪೂರ್ತಿ ಬೇರೆ ಬೇರೆ ಯೋಜನೆಗಳಿಗೆ ಹಣ ಹೂಡುತ್ತದೆ. ಅಲ್ಲಿ ಆ ಯೋಜನೆ..ಇಲ್ಲಿ ಈ ಯೋಜನೆ..ಒಮ್ಮೆ ಸುತ್ತಮುತ್ತ ಕಣ್ಣುಹಾಯಿಸಿ. ಸರ್ಕಾರ ಕಟ್ಟಿದ ಕಟ್ಟಡಗಳು, ಒದಗಿಸುವ ಸೇವೆಗಳು, ಸೌಲಭ್ಯಗಳು..ಇದಕ್ಕೆಲ್ಲ ಖರ್ಚು ಮಾಡಲು ಸರ್ಕಾರಕ್ಕೆಲ್ಲಿಂದ ದುಡ್ಡು ಸಿಗುತ್ತೆ ಎಂದು ನಿಮಗೆ ಯೋಚನೆ ಮೂಡಿರಬೇಕಲ್ಲವೇ..
ನಾವು ನೀವುಗಳೆಲ್ಲ ಸರ್ಕಾರಕ್ಕೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ತೆರಿಗೆ ಕಟ್ಟುತ್ತಿರುತ್ತೇವೆ. ನಮ್ಮ ವಾರ್ಷಿಕ ಆದಾಯ ನಿಗದಿತ ಮೊತ್ತವನ್ನು ತಲುಪಿದ್ದರೆ ನೇರವಾಗಿಯೇ ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಇದನ್ನು ನೇರ ತೆರಿಗೆ ಎಂದು ಕರೆಯುತ್ತೇವೆ. ಪ್ರತಿ ಆರ್ಥಿಕ ವರ್ಷ ಮುಕ್ತಾಯವಾಗುವುದರೊಳಗೆ ನೇರ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಅಂದಹಾಗೆ ಎಲ್ಲರೂ ನೇರ ತೆರಿಗೆಯನ್ನು ಕಟ್ಟುವುದಿಲ್ಲ. ಸದ್ಯದ ನಿಯಮಗಳ ಪ್ರಕಾರ ನಿಮ್ಮ ಆದಾಯ ₹ 2,50,000ವಿದ್ದರೆ ನೀವು ನೇರ ತೆರಿಗೆಯನ್ನು ಕಟ್ಟುವ ಅಗತ್ಯವಿಲ್ಲ. ಈ ಬಜೆಟ್ನಲ್ಲಿ ವರ್ಷಕ್ಕೆ 5 ಲಕ್ಷದವರೆಗೆ ಗಳಿಸುವವರಿಗೂ ಈ ವಿನಾಯ್ತಿಯನ್ನು ನೀಡಿದರೆ ಚೆನ್ನಾಗಿತ್ತು ಎಂಬುದು ಜನಸಾಮಾನ್ಯರ ಕೂಗು.
ಉಳಿದ ಹಣ ಬರುವುದೆಲ್ಲಿಂದ?
ಪ್ರತಿ ಸರ್ಕಾರವೂ ನಮ್ಮ ನಿಮ್ಮಂತೆಯೇ..ದುಡ್ಡಿನ ಮರ ಯಾರ ಬಳಿಯೂ ಇಲ್ಲ. ಕಷ್ಟಪಟ್ಟರೆ ಖುಷಿ. ದುಡಿದಿದ್ದಕ್ಕೆ ಸಂಬಳ ಪಡೆಯುವುದು ನೇರ ಆದಾಯದ ಮೂಲವಾದರೆ, ರಜೆಯ ದಿನ ಚಿಕ್ಕಪುಟ್ಟ ಕೆಲಸ ಮಾಡಿ ಚೂರುಪಾರು ಗಳಿಸಬಹುದಲ್ಲವೇ, ಹಾಗೇ ನಾವು ನೀವು ದಿನಂಪ್ರತಿ ಕೊಳ್ಳುವ ಪ್ರತಿ ವಸ್ತುಗಳ ಮೂಲಕವೂ ಸರ್ಕಾರಕ್ಕೆ ಆದಾಯ ಗಳಿಕೆಯಾಗುತ್ತದೆ. ಮನೆಯ ಪಕ್ಕದ ಶೆಟ್ಟರ ಅಂಗಡಿಯಲ್ಲಿ ಚಿಕ್ಕದೊಂದು ವಸ್ತು ಕೊಂಡಿರಿ ಎಂದರೆ ಸಾಕು. ನೀವು ಸರ್ಕಾರಕ್ಕೆ ತೆರಿಗೆ ನೀಡಿದಂತೆಯೇ ಆಯಿತು. ಅದೇ ಪರೋಕ್ಷ ತೆರಿಗೆ.
ಪರೋಕ್ಷ ತೆರಿಗೆಯಲ್ಲಿ ಎಷ್ಟು ವಿಧ?
ಮೊದಲೇ ಹೇಳಿದ್ದೆನಲ್ಲವೇ, ನಾವೆಲ್ಲರೂ ನಮಗೆ ತಿಳಿದೋ ತಿಳಿಯದೆಯೋ ತೆರಿಗೆ ಕಟ್ಟುತ್ತಲೇ ಇರುತ್ತೇವೆ ಎಂದು. ಸಾವಿಲ್ಲದ ಮನೆಯಿಂದ ಸಾಸಿವೆ ಕಾಳನ್ನು ತಂದಂತೆಯೇ ತೆರಿಗೆ ಕಟ್ಟದಿರಲು ಸಾಧ್ಯವಿಲ್ಲದಿರುವುದು. ದಿನಬಳಕೆ ಒಂದೊಂದು ವಸ್ತುವಿಗೂ ನಮ್ಮ ತೆರಿಗೆ ಸರ್ಕಾರಕ್ಕೆ ಸಂದಾಯವಾಗುತ್ತಲೇ ಇರುತ್ತದೆ. ಆದರೆ ಎಲ್ಲವೂ ನಮ್ಮ ಗಮನಕ್ಕೆ ಬರುವುದಿಲ್ಲ ಅಷ್ಟೇ.
ಅತಿ ಸರಳ ಉದಾಹರಣೆ: ₹ 10ರ ಒಂದು ಟೂತ್ಪೇಸ್ಟ್ ಕೊಂಡಿರಿ. ಅದರ ಉತ್ಪಾದನಾ ವೆಚ್ಚ, ಸಾಗಾಣಿಕಾ ವೆಚ್ಚ ಮತ್ತು ಪರೋಕ್ಷ ವೆಚ್ಚ ಎಲ್ಲವನ್ನೂ ಕೂಡಿಯೇ ನೀವು ₹10ನ್ನು ನೀವು ಪಾವತಿಸಿರುತ್ತೀರಿ. ಇದೇ ರೀತಿ ನಾವೆಲ್ಲರೂ ಕೊಳ್ಳುವ ಅಕ್ಕಿಯ ಕಾಳಿನಿಂದ ಹಿಡಿದು ಪ್ರತಿಯೊಂದು ವಸ್ತುವಿಗೂ ತೆರಿಗೆ ಸಲ್ಲಿಸುತ್ತೇವೆ. ಇದು ಸರ್ಕಾರದ ಆದಾಯದ ಮೂಲವೂ ಹೌದು.
Budget 2021 ವ್ಯಕ್ತಿ ವ್ಯಕ್ತಿತ್ವ | ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆದು ಬಂದ ದಾರಿ
Published On - 9:23 pm, Sun, 31 January 21