Hair Loss: ಕೂದಲು ಉದುರುವ ಸಮಸ್ಯೆ ಎಲ್ಲಾ ಸಂದರ್ಭದಲ್ಲೂ ಒಂದೇ ಥರ ಇರಲ್ಲ

Hair Loss: ಕೂದಲು ಉದುರುವ ಸಮಸ್ಯೆ ಎಲ್ಲಾ ಸಂದರ್ಭದಲ್ಲೂ ಒಂದೇ ಥರ ಇರಲ್ಲ
ಸಂಗ್ರಹ ಚಿತ್ರ

Hair Fall: ಬೊಕ್ಕತಲೆ ಬೇರೆಯವರಿಗೆ ಹಾಸ್ಯಾಸ್ಪದ ಎನ್ನಿಸಿದರೂ ಆ ಸಮಸ್ಯೆಗೆ ಒಳಗಾದವರು ವಿಚಿತ್ರ ಹಿಂಸೆ ಅನುಭವಿಸುತ್ತಿರುತ್ತಾರೆ. ಆದರೆ, ಈ ಸಮಸ್ಯೆಗೆ ಸಿಲುಕಿದವರು ಎಲ್ಲಾ ಸಂದರ್ಭದಲ್ಲೂ ಚಿಂತೆಗೆ ಒಳಗಾಗಬೇಕಿಲ್ಲ. ಏಕೆಂದರೆ, ಕೂದಲು ಉದುರುವಿಕೆಯಲ್ಲೂ ಬೇರೆಬೇರೆ ಬಗೆ ಉಂಟು.

Skanda

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 19, 2021 | 7:05 PM

ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂದು ಕೇಳಿದಾಗ ಉಂಟಾಗುವ ಸಂದಿಗ್ಧತೆಯೇ ತಲೆಬಿಸಿಯಿಂದ ಕೂದಲು ಉದುರುತ್ತಿದೆಯೋ? ಕೂದಲು ಉದುರುವುದರಿಂದ ತಲೆಬಿಸಿ ಆಗುತ್ತಿದೆಯೋ? ಎಂಬ ಪ್ರಶ್ನೆ ಕೇಳಿದಾಗಲೂ ಉಂಟಾಗುವ ಪರಿಸ್ಥಿತಿ ಇದೆ. ಏಕೆಂದರೆ, ಮೇಲ್ನೊಟಕ್ಕೆ ಕೂದಲು ಉದುರುವಿಕೆ ಒಂದು ಸಾಧಾರಣ ಸಂಗತಿಯಂತೆ ಕಂಡರೂ ಅದನ್ನು ಎದುರಿಸುವವರು ಪ್ರತಿನಿತ್ಯ ಚಿಂತೆಯಲ್ಲಿ ಬೇಯುತ್ತಿರುತ್ತಾರೆ. ಬೊಕ್ಕತಲೆ ಬೇರೆಯವರಿಗೆ ಹಾಸ್ಯಾಸ್ಪದ ಎನ್ನಿಸಿದರೂ ಆ ಸಮಸ್ಯೆಗೆ ಒಳಗಾದವರು ವಿಚಿತ್ರ ಹಿಂಸೆ ಅನುಭವಿಸುತ್ತಿರುತ್ತಾರೆ. ಆದರೆ, ಈ ಸಮಸ್ಯೆಗೆ ಸಿಲುಕಿದವರು ಎಲ್ಲಾ ಸಂದರ್ಭದಲ್ಲೂ ಚಿಂತೆಗೆ ಒಳಗಾಗಬೇಕಿಲ್ಲ. ಏಕೆಂದರೆ, ಕೂದಲು ಉದುರುವಿಕೆಯಲ್ಲೂ ಬೇರೆಬೇರೆ ಬಗೆ ಉಂಟು.

ಸಾಧಾರಣವಾಗಿ ಪ್ರತಿಯೊಬ್ಬರಿಗೂ ಸಣ್ಣ ಪ್ರಮಾಣದಲ್ಲಿ ಕೂದಲು ಉದುರುತ್ತಲೇ ಇರುತ್ತದೆ. ಮಾನಸಿಕ ಒತ್ತಡಕ್ಕೆ ಒಳಗಾದಾಗ, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾಗ, ಒಮ್ಮೆಲೆ ದೇಹದ ತೂಕದಲ್ಲಿ ಏರುಪೇರಾದಾಗ, ಸ್ತ್ರೀಯರಿಗೆ ಹೆರಿಗೆಯಾದ ನಂತರ ಕೂದಲು ಉದುರುವಿಕೆ ಕಾಣಿಸಿಕೊಳ್ಳುತ್ತದೆ. ಈ ವೇಳೆಯಲ್ಲಿ ದಿನಕ್ಕೆ 50 ರಿಂದ 100 ಕೂದಲು ಉದುರಲೂಬಹುದು. ಬಹುತೇಕರಿಗೆ ಇದರ ಅನುಭವ ಆಗಿರುತ್ತದೆ ಹಾಗೂ ಇದನ್ನೇ ದೊಡ್ಡ ವಿಷಯವನ್ನಾಗಿ ಮನಸ್ಸಿಗೆ ತೆಗೆದುಕೊಂಡು ಚಿಂತೆಗೆ ಬಿದ್ದಿರುತ್ತಾರೆ. ಆದರೆ, ವಾಸ್ತವವಾಗಿ ಹೀಗೆ ಕೂದಲು ಉದುರುವುದಕ್ಕೆ ಚಿಂತೆ ಮಾಡಬೇಕಾದ ಅವಶ್ಯಕತೆ ಇಲ್ಲ. ಈ ಸಮಸ್ಯೆ ಹೆಚ್ಚೆಂದರೆ 9 ರಿಂದ 10 ತಿಂಗಳು ಇರಲಿದ್ದು, ನಂತರ ತಾನಾಗಿಯೇ ಸರಿ ಹೋಗಲಿದೆ. ಉದುರಿಹೋದ ಕೂದಲಿಗೆ ಬದಲಾಗಿ ಹೊಸ ಕೂದಲು ಹುಟ್ಟಿಬರುವ ಕಾರಣ ಇದು ಗಂಭೀರ ತೊಂದರೆ ಏನಲ್ಲ.

ಕೂದಲು ಉದುರುವಿಕೆಗೆ ವ್ಯತಿರಿಕ್ತವಾದುದೆಂದರೆ ಬೊಕ್ಕತಲೆ ಸಮಸ್ಯೆ. ಇದರಲ್ಲಿ ಕೂದಲ ಬೆಳವಣಿಗೆಯೇ ಸ್ಥಗಿತವಾಗಿ ತಲೆ ಬೋಳಾಗಿ ಕಾಣಲಾರಂಭಿಸುತ್ತದೆ. ಬಿದ್ದುಹೋದ ಕೂದಲ ಜಾಗದಲ್ಲಿ ಹೊಸ ಕೂದಲು ಬಾರದೇ ತಲೆ ಬೋಳಾಗುತ್ತಾ ಹೋಗುತ್ತದೆ. ಈ ಸಮಸ್ಯೆಗೆ ಅನುವಂಶಿಕ, ಹಾರ್ಮೋನ್​ ಬದಲಾವಣೆ, ರೋಗ ನಿರೋಧಕ ಶಕ್ತಿಯ ಏರುಪೇರು, ಕೂದಲಿಗೆ ಕೆಮಿಕಲ್​ ಬಳಕೆ ಮುಖ್ಯ ಕಾರಣಗಳಾಗಿ ಕಂಡುಬರುತ್ತವೆ. ಇವುಗಳಿಂದ ಮುಕ್ತಿ ಸಿಗದ ಹೊರತು ಹೆಚ್ಚಿನವರಲ್ಲಿ ಕೂದಲು ಬೆಳವಣಿಗೆ ಕಂಡುಬರುವುದಿಲ್ಲ. ಹೀಗಾಗಿ ಕೂದಲು ಬೆಳವಣಿಗೆಯೇ ಕುಂಠಿತವಾಗಿದೆ ಎಂದಾದಲ್ಲಿ ನೀವು ಸೂಕ್ತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಒಳಿತು ಹಾಗೂ ಅದಕ್ಕೆ ಕಾರಣವಾದ ಅಂಶವನ್ನು ಕಂಡುಕೊಂಡು ಪರಿಹಾರ ಒದಗಿಸಿಕೊಳ್ಳಬಹುದು.

ಅಂತೆಯೇ, ಕೀಮೋಥೆರಪಿ ಸೇರಿದಂತೆ ಬೇರೆ ಬೇರೆ ಚಿಕಿತ್ಸೆಗಳಿಗೆ ಒಳಗಾದಾಗ, ಕೂದಲಿಗೆಂದೇ ಯಾವುದಾದರೂ ಚಿಕಿತ್ಸೆ ಪಡೆದಾಗಲೂ ಕೆಲಕಾಲದವರೆಗೆ ಕೂದಲು ಬೆಳವಣಿಗೆ ನಿಂತುಹೋಗುವ ಸಾಧ್ಯತೆ ಅಧಿಕವಾಗಿರುತ್ತದೆ. ಕೂದಲು ಬೆಳವಣಿಗೆ ನಿಂತು ಹೋಗುವುದು ಪುರುಷ, ಮಹಿಳೆ ಇಬ್ಬರಲ್ಲೂ ಕಂಡುಬರುವ ಸಮಸ್ಯೆಯಾದರೂ ಮಹಿಳೆಯರಲ್ಲಿ ಕ್ರಮೇಣ ಕೂದಲ ಪ್ರಮಾಣ ತೆಳುವಾಗುತ್ತಾ ಹೋಗುವುದರಿಂದ ಒಂದೇಬಾರಿಗೆ ಗಮನಕ್ಕೆ ಬರುವುದಿಲ್ಲ. ಆದರೆ, ಹೆಚ್ಚಿನ ಪುರುಷರಲ್ಲಿ ಏಕಾಏಕಿ ನೆತ್ತಿ ಬೋಳಾಗುತ್ತಾ ಬರುತ್ತದೆ. ಹೀಗಿದ್ದಾಗ ಒಮ್ಮೆ ತಜ್ಞರ ಸಲಹೆ ಪಡೆಯುವುದು ಉತ್ತಮ.

ಇದೆಲ್ಲಕ್ಕಿಂತ ಮುಖ್ಯವಾಗಿ ನೀವು ನಿಮ್ಮ ಆಹಾರ ಕ್ರಮ, ವ್ಯಾಯಾಮ, ಮಾನಸಿಕ ನೆಮ್ಮದಿ, ನಿದ್ರೆ ಹೀಗೆ ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ನಿಭಾಯಿಸಿದರೆ ಈ ಸಮಸ್ಯೆಯನ್ನು ಬಹುತೇಕ ನಿಯಂತ್ರಿಸಬಹುದು. ಕೆಮಿಕಲ್​, ಕಂಡೀಷನರ್​ ಇತ್ಯಾದಿ ಬಳಸುವ ಮುನ್ನವೂ ನಿಮಗೆ ಯಾವುದು ಸೂಕ್ತ, ನಿಮ್ಮ ಕೂದಲ ಆರೋಗ್ಯಕ್ಕೆ ಯಾವುದು ಅಪಾಯಕಾರಿ ಅಲ್ಲ ಎಂಬುದನ್ನು ಗಮನಿಸಿ ನಂತರವೇ ಮುಂದುವರೆಯುವುದು ಒಳ್ಳೆಯದು ಎನ್ನುತ್ತಾರೆ ಡಾ.ಸೆರಿನ್.

ಇದನ್ನೂ ಓದಿ: ಒಣಹವೆಗೆ ತುಟಿಯ ಸೌಂದರ್ಯ ಕಳೆಗುಂದದಿರಲಿ; ಚಳಿಗಾಲದ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಮದ್ದು!

Follow us on

Related Stories

Most Read Stories

Click on your DTH Provider to Add TV9 Kannada