
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟಿರುವ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ನೀಡುವ ಮಾಹಿತಿ ಮೇಲೆ ತನಿಖೆ ನಡೆಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕಲು ಮಹತ್ವದ ಚರ್ಚೆ ನಡೆಸಿದ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಡ್ರಗ್ಸ್ ಜಾಲ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಂಡಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಡ್ರಗ್ಸ್ ವಿಚಾರವಾಗಿ ಸಾಕಷ್ಟು ಬಿಗಿ ಕ್ರಮ ಕೈಗೊಂಡಿದ್ದೇವೆ. ಈವರೆಗೆ 1,438 ಡ್ರಗ್ ಕೇಸ್ ದಾಖಲಾಗಿದೆ. 1792 ಮಂದಿ ಅರೆಸ್ಟ್ ಮಾಡಿದ್ದೇವೆ. ಇವರಲ್ಲಿ 25 ಮಂದಿ ವಿದೇಶಿಗರು ಸಹ ಇದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
‘ರಾಜ್ಯದಲ್ಲಿ 2 ರೀತಿಯ ಮಾದಕ ವಸ್ತುಗಳು ಲಭ್ಯವಿದೆ’
ರಾಜ್ಯದಲ್ಲಿ ಎರಡು ರೀತಿಯ ಮಾದಕ ವಸ್ತುಗಳು ಇದೆ. ಒಂದು ಗಾಂಜಾ ಮತ್ತೊಂದು ಸಿಂಥೆಟಿಕ್ ಡ್ರಗ್ ಅಂತಾ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಎಲ್ಲಿ ಗಾಂಜಾ ಬೆಳೆಯಲಾಗುತ್ತಿದೆ ಎಂದು ಮೊದಲು ಪತ್ತೆ ಮಾಡಿ ನಾಶಪಡಿಸಲು ಸೂಚಿಸಿದ್ದೇನೆ. ಜೊತೆಗೆ, ಗೋವಾ, ತೆಲಂಗಾಣ ಮತ್ತು ಆಂಧ್ರದಿಂದ ಗಾಂಜಾ ಬರುತ್ತಿದೆ. ಅದನ್ನು ತಡೆಯಲು ಗಡಿ ಜಿಲ್ಲೆಯ ಎಸ್‌ಪಿಗಳಿಗೆ ಸೂಚನೆ ನೀಡಿದ್ದೇನೆ ಅಂತಾ ಹೇಳಿದ್ದಾರೆ.
ಡ್ರಗ್ಸ್ ಮಾಫಿಯಾ ಮಟ್ಟ ಹಾಕುವಂತೆ ಸೂಚನೆ ನೀಡಿದ್ದೇನೆ. ಯಾವುದೇ ರಂಗದಲ್ಲಿದ್ದರೂ ಮಟ್ಟ ಹಾಕಲು ಸೂಚಿಸಿದ್ದೇನೆ. ಎಷ್ಟೇ ಪ್ರಭಾವಿ ವ್ಯಕ್ತಿಯಿದ್ದರೂ ಬಿಡಬಾರದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಡ್ರಗ್ಸ್ ಜಾಲದಲ್ಲಿ ಚಿತ್ರರಂಗದ ಕೆಲವು ಗಾಯಕರು, ನಟ, ನಟಿಯರು ಇದ್ದಾರೆಂದು ಕೆಲವರು ಹೇಳುತ್ತಿದ್ದಾರೆ. ಡ್ರಗ್ಸ್ ಜಾಲದಲ್ಲಿ ಯಾರೇ ಇದ್ದರೂ ರಕ್ಷಣೆ ಮಾಡುವುದಿಲ್ಲ.
‘ಶರ್ಮಿಳಾ ಮಾಂಡ್ರೆ ಪ್ರಕರಣದಲ್ಲಿ FIR ದಾಖಲಾಗಿದೆ’
ನಟಿ ಶರ್ಮಿಳಾ ಮಾಂಡ್ರೆ ಪ್ರಕರಣದಲ್ಲಿ FIR ದಾಖಲಾಗಿದೆ. ಎಲ್ಲಾ ಸತ್ಯ ಬಯಲಾಗಲಿದೆ. ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಕ್ಕೆ ಆಗಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.