ಬೆಂಗಳೂರು: 15 ಶಾಸಕರು ಅನರ್ಹಗೊಂಡ ಪ್ರಯುಕ್ತ ಮೊನ್ನೆ ನಡೆದ 15 ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ನಾಳಿದ್ದು ಹೊರಬೀಳಲಿದೆ. ಈ ಮಧ್ಯೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಗೆಲುವು ಯಾರದಾಗಲಿದೆಯೋ ಎಂಬುದು ಎಲ್ಲರ ದುಗುಡಕ್ಕೆ ಕಾರಣವಾಗಿದೆ. ಆದ್ರೆ ಬಿಜೆಪಿ ಪಾಳಯ ತುಸು ಹೆಚ್ಚೇ ಅನಿಸುವಷ್ಟು ಬೀಗುತ್ತಿದೆ. ಗೆಲುವು ನಮ್ಮದೇ, ನಮ್ಮ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಆ ಪಕ್ಷದ ನಾಯಕರು ಆತ್ಮವಿಶ್ವಾಸದಲ್ಲಿದ್ದಾರೆ. ಇನ್ನು ಸಚಿವ ಸೋಮಣ್ಣ ಅವರಂತೂ ಫುಲ್ ಜೋಶ್ ನಲ್ಲಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಇಂದು ಸಚಿವ ವಿ.ಸೋಮಣ್ಣ ಭೇಟಿಯಾಗಿ, ಫಲಿತಾಂಶದ ಬಗ್ಗೆ ಲೆಕ್ಕಾಚಾರ ಹಾಕಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ.ಸೋಮಣ್ಣ ‘ನಾನು ಉಪಚುನಾವಣೆಯ ಮಾಸ್ಟರ್’ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಲು ಗೆಲುವಿಗಿಂತ ಸ್ಥಿರತೆ, ಅಸ್ಥಿರತೆ ಬಗ್ಗೆ ಜನ ಯೋಚಿಸಿದ್ದಾರೆ. ಬಿಜೆಪಿ ಸರ್ಕಾರವನ್ನು ಮುಂದುವರಿಸುವುದು ಜನರ ಉದ್ದೇಶವಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿ 12ರಿಂದ 13 ಸ್ಥಾನ ಗೆಲ್ಲುತ್ತದೆ. ಸೋತವರಿಗೆ ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ. ಆದ್ರೆ ಸಿಎಂ ಬಿಎಸ್‌ವೈ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಈಶ್ವರಪ್ಪ ಹೇಳಿಕೆಗೆ ಸೋಮಣ್ಣ ಜಾರಿಕೆ ಉತ್ತರ:
‘ವಯಸ್ಸಿಗೆ ಬಂದವರು ಐಶ್ವರ್ಯಾ ರೈ ಬೇಕೆಂದು ಬಯಸ್ತಾರೆ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿರುವುದಕ್ಕೆ ಸೋಮಣ್ಣ ಪ್ರತಿಕ್ರಿಯೆಯಿಸಿದ್ದಾರೆ. ಈಶ್ವರಪ್ಪಗೆ ವಯಸ್ಸಾಗಿದೆ, ಹೀಗಾಗಿ ಆ ರೀತಿ ಹೇಳಿದ್ದಾರೆ. K.S. ಈಶ್ವರಪ್ಪ ಹೇಳಿಕೆ ಅವರಿಗೆ ಸೇರಿದ್ದು ಎಂದು ಸೋಮಣ್ಣ ಜಾರಿಕೊಂಡಿದ್ದಾರೆ.
Published On - 12:02 pm, Sat, 7 December 19