ಫ್ಯೂಚರ್ ರೀಟೇಲ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮಧ್ಯೆ ಒಂದು ವೇಳೆ ವ್ಯವಹಾರ ಕುದುರದಿದ್ದಲ್ಲಿ 11 ಲಕ್ಷದಷ್ಟು ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಎಫ್ಎಂಸಿಜಿ ವಿತರಕರು, ವರ್ತಕರ ಒಕ್ಕೂಟ ಮತ್ತು ದೆಹಲಿ ಮೂಲದ ಎನ್ಜಿಒ ಹೇಳಿಕೆಯಲ್ಲಿ ತಿಳಿಸಿವೆ. ‘ಫ್ಯೂಚರ್ ಸಮೂಹ ಹಾಗೂ ರಿಲಯನ್ಸ್ ಸೇರಿ ಎಲ್ಲ ಉದ್ಯಮಗಳನ್ನು ನಡೆಸಿಕೊಂಡು ಹೋಗುವುದಾಗಿ ಹೇಳಿವೆ. ಅವುಗಳಲ್ಲಿ ಬಿಗ್ ಬಜಾರ್, ಈಜೀಡೇ, ನೀಲ್ಗಿರೀಸ್, ಸೆಂಟ್ರಲ್, ಬ್ರ್ಯಾಂಡ್ ಫ್ಯಾಕ್ಟರಿ ಮತ್ತಿತರ ಸಂಸ್ಥೆಗಳು ಒಳಗೊಂಡಿವೆ. ಆಗ ಉದ್ಯೋಗಿಗಳು ಹಾಗೂ ಸರಬರಾಜುದಾರರು ತಮ್ಮ ಬದುಕಿನ ಮಾರ್ಗ ಕಳೆದುಕೊಳ್ಳುವುದಿಲ್ಲ ಎಂದು ಅಖಿಲ ಭಾರತ ಗ್ರಾಹಕ ಉತ್ಪನ್ನ (ಎಫ್ಎಂಸಿಜಿ) ವಿತರಕರ ಒಕ್ಕೂಟ, ಎಫ್ಎಂಸಿಜಿ ವಿತರಕರು ಮತ್ತು ವರ್ತಕರ ಒಕ್ಕೂಟ ದೆಹಲಿ ಹಾಗೂ ಪಬ್ಲಿಕ್ ರೆಸ್ಪಾನ್ಸ್ ಎಗೇನ್ಸ್ಟ್ ಹೆಲ್ಪ್ಲೆಸ್ನೆಸ್ ಅಂಡ್ ಆ್ಯಕ್ಷನ್ ಫಾರ್ ರೀಡ್ರಸೆಲ್ (PRAHAR) ಹೇಳಿಕೆ ನೀಡಿದೆ.
‘ಆದರೆ, ಅಮೆಜಾನ್ನಿಂದ ಪದೇಪದೇ ತಡೆಯೊಡ್ಡಲಾಗುತ್ತಿದೆ. ಆ ಕಾರಣಕ್ಕೆ ಈ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಉದ್ಭವಿಸಿದೆ. ಒಂದು ವೇಳೆ ಈ ವ್ಯವಹಾರ ಸುಸೂತ್ರವಾಗಿ ಆಗದಿದ್ದಲ್ಲಿ ಹಲವರು ಜೀವನದ ದಾರಿಯೇ ಕಳೆದುಕೊಂಡಂತಾಗುತ್ತದೆ’ ಎಂದು ತಿಳಿಸಲಾಗಿದೆ.
ಫ್ಯೂಚರ್ ಸಮೂಹವು ಭಾರತದಾದ್ಯಂತ 450 ನಗರಗಳಲ್ಲಿ 2000ದಷ್ಟು ಮಳಿಗೆಗಳನ್ನು ಹೊಂದಿದೆ. ಒಂದು ವೇಳೆ ರಿಲಯನ್ಸ್ ಜತೆಗಿನ ವ್ಯವಹಾರ ನಿಂತುಹೋದರೆ ಮಳಿಗೆಗಳನ್ನು ಮುಚ್ಚಿಬಿಡುತ್ತದೆ. ಇದರಿಂದ ಹನ್ನೊಂದು ಲಕ್ಷದಷ್ಟು ಉದ್ಯೋಗ ನಷ್ಟವಾಗುತ್ತದೆ. ಇದರ ಜತೆಗೆ 6000ದಷ್ಟು ಮಾರಾಟಗಾರರು ಮತ್ತು ಸರಬರಾಜುದಾರರು ತಮ್ಮ ಅತಿದೊಡ್ಡ ಗ್ರಾಹಕರನ್ನು ಕಳೆದುಕೊಂಡಂತಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಾಕಿ ಇರುವ ಮೊತ್ತ ಪಾವತಿ ಆಗುತ್ತದೆ
ಈ ವ್ಯವಹಾರದ ಭಾಗವಾಗಿ, ಮಾರಾಟಗಾರರು ಮತ್ತು ಸರಬರಾಜುದಾರರಿಗೆ ಬಾಕಿ ಇರುವ ಎಲ್ಲ ಮೊತ್ತ ಪಾವತಿ ಮಾಡುವುದಾಗಿ ರಿಲಯನ್ಸ್ ಹೇಳಿದೆ. ‘ಆದ್ದರಿಂದ ಮುಖ್ಯವಾಗಿ ಈ ವ್ಯವಹಾರ ಮತ್ತು ಫ್ಯೂಚರ್ ರೀಟೇಲ್ಗೆ ಸರಬರಾಜು ಮಾಡುವವರ ರಕ್ಷಣೆ ಆಗುತ್ತದೆ’ ಎಂದು ಹೇಳಲಾಗಿದೆ.
ಫ್ಯೂಚರ್ ಸಮೂಹದ ರೀಟೇಲ್, ಲಾಜಿಸ್ಟಿಕ್ಸ್ ಮತ್ತು ವೇರ್ಹೌಸಿಂಗ್ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿತ್ತು. ಆದರೆ ಫ್ಯೂಚರ್ ಸಮೂಹ ತಮ್ಮ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಅಮೆಜಾನ್, ಈ ವ್ಯವಹಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು. ಅಂದಹಾಗೆ, 24,713 ಕೋಟಿ ರೂಪಾಯಿಗೆ ತನ್ನ ಆಸ್ತಿಯನ್ನು ರಿಲಯನ್ಸ್ ರೀಟೇಲ್ ವೆಂಚರ್ಸ್ಗೆ ಮಾರಾಟ ಮಾಡುವುದಕ್ಕೆ ಕಳೆದ ವರ್ಷ ಆಗಸ್ಟ್ನಲ್ಲಿ ಫ್ಯೂಚರ್ ಸಮೂಹ ಒಪ್ಪಂದ ಮಾಡಿಕೊಂಡಿತ್ತು.
ಫ್ಯೂಚರ್ ಕೂಪನ್ಸ್ನಲ್ಲಿ ಅಮೆಜಾನ್ ಪಾಲು ಶೇ 49
ಅನ್ಲಿಸ್ಟೆಡ್ ಕಂಪೆನಿಯಾದ ಫ್ಯೂಚರ್ ಕೂಪನ್ಸ್ನಲ್ಲಿ ಅಮೆಜಾನ್ ಕಂಪೆನಿ ಶೇಕಡಾ 49ರಷ್ಟು ಪಾಲು ಹೊಂದಿದೆ. ಫ್ಯೂಚರ್ ಸಮೂಹ- ರಿಲಯನ್ಸ್ ಇಂಡಸ್ಟ್ರೀಸ್ ಮಧ್ಯೆ ವ್ಯವಹಾರ ನಡೆಯುವಾಗ ತನ್ನನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಮೂಲಕ ಈಗಾಗಲೇ ಇರುವ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅಮೆಜಾನ್ ಆರೋಪ ಮಾಡಿದೆ.
ಇದನ್ನೂ ಓದಿ: ಬ್ಯಾಟರಿ ತಯಾರಿಕೆಗೆ ಧುಮುಕಲಿದೆ ರಿಲಯನ್ಸ್; ಅಂಬಾನಿ ಸಿದ್ಧಪಡಿಸಿದ್ದಾರೆ ಹೊಸ ತಂತ್ರ?