India vs England Test Series | ಪಿಂಕ್-ಬಾಲ್ ಪಂದ್ಯಗಳೇ ಟೆಸ್ಟ್ ಕ್ರಿಕೆಟ್ನ ಭವಿಷ್ಯ: ಸೌರವ್ ಗಂಗೂಲಿ
ಅನಾರೋಗ್ಯದ ನಿಮಿತ್ತ ಪಂದ್ಯ ವೀಕ್ಷಿಸಲು ಅಹಮದಾಬಾದಿಗೆ ಹೋಗಲಾಗದಂಥ ಸ್ಥಿತಿಗೆ ನಿರಾಶೆ ವ್ಯಕ್ತಪಡಿಸಿದ ಗಂಗೂಲಿ ತಾವು ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳ ಬಗ್ಗೆ ಭವಿಷ್ಯವಾಣಿ ನುಡಿಯುವುದಿಲ್ಲ. ಆದರೆ, ಭಾರತ 3ನೇ ಟೆಸ್ಟ್ ಮತ್ತು ಸರಣಿಯನ್ನು ಗೆದ್ದು ವಿಶ್ವ ಟೆಸ್ಟ್ ಚಾಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಅಹಮದಾಬಾದ್: ಮೊಟೆರಾದ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 4-ಟೆಸ್ಟ್ಗಳ ಮೂರನೇ ಪಂದ್ಯವನ್ನು ಭಾರತ ಗೆಲ್ಲಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ICC) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು. ಕೆಲ ದಿಗಳ ಹಿಂದಷ್ಟೇ ಎರಡನೇ ಬಾರಿ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾಗಿ ಕೊಲ್ಕತ್ತಾದ ತಮ್ಮ ನಿವಾಸದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಗಂಗೂಲಿ, ಪಂದ್ಯ ವೀಕ್ಷಿಸಲು ಅನಾರೋಗ್ಯದ ನಿಮಿತ್ತ ಅಹಮದಾಬಾದಿಗೆ ಹೋಗಲಾಗದಂಥ ಸ್ಥಿತಿಗೆ ನಿರಾಶೆ ವ್ಯಕ್ತಪಡಿಸಿದರು. ನಾನು ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳ ಬಗ್ಗೆ ಭವಿಷ್ಯವಾಣಿ ನುಡಿಯುವುದಿಲ್ಲ. ಆದರೆ, ಭಾರತವು ಮೂರನೇ ಟೆಸ್ಟ್ ಮತ್ತು ಸರಣಿಯನ್ನು ಗೆದ್ದು ವಿಶ್ವ ಟೆಸ್ಟ್ ಚಾಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತಾಡಿದ ಗಂಗೂಲಿ ಪಿಂಕ್-ಬಾಲ್ ಟೆಸ್ಟ್ ಮುಂಬರುವ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ನ ಅವಿಭಾಜ್ಯ ಅಂಗವಾಗಲಿದೆ ಎಂದು ಹೇಳಿದರು.
‘ಪಿಂಕ್-ಬಾಲ್ ಪಂದ್ಯಗಳು ಟೆಸ್ಟ್ ಕ್ರಿಕೆಟ್ನ ಭವಿಷ್ಯವಾಗಲಿವೆ. ಕೊಲ್ಕತಾದಲ್ಲಿ ನಾವು ಬಾಂಗ್ಲಾದೇಶದ ವಿರುದ್ಧ ಪಿಂಕ್-ಬಾಲ್ ಟೆಸ್ಟ್ ಆಯೋಜಿಸಿದ್ದು ನನಗೆ ಚೆನ್ನಾಗಿ ನೆನಪಿದೆ. ಆ ಪಂದ್ಯವನ್ನು ನೋಡಲು ಈಡನ್ ಗಾರ್ಡನ್ಸ್ ತುಂಬಾ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಆಟಗಾರರು ಸಹ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಆನಂದಿಸಿದರು. ಹಾಗಾಗೇ, ಪಿಂಕ್-ಬಾಲ್ ಟೆಸ್ಟ್ ಪಂದ್ಯಗಳು ಟೆಸ್ಟ್ ಕ್ರಿಕೆಟ್ನ ಭವಿಷ್ಯವಾಗಿದೆ ಅಂತ ಹೇಳುತ್ತಿದ್ದೇನೆ’ ಎಂದು ಗಂಗೂಲಿ ಹೇಳಿದರು.
‘ಭಾರತೀಯ ಕ್ರಿಕೆಟ್ ಸಾಕಷ್ಟು ಬದಲಾಗಿದೆ ಮತ್ತು ಭಾರತದ ಅಟಗಾರರು ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಈ ಸರಣಿಯಲ್ಲೂ ಅವರು ಉತ್ತಮವಾಗಿ ಆಡುವುದನ್ನು ಮುಂದುವರೆಸಿದರೆ, ಭಾರತವು ಮೊಟೆರಾದಲ್ಲಿ ನಡೆಯುತ್ತಿರುವ ಪಿಂಕ್-ಬಾಲ್ ಟೆಸ್ಟ್ ಗೆಲ್ಲಲಿದೆ. ಈ ಪಂದ್ಯದಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ’ ಎಂದು ಗಂಗೂಲಿ ಹೇಳಿದರು.
ಮೊದಲ ಟೆಸ್ಟ್ ಸೋತರೂ ಎರಡನೆಯದರಲ್ಲಿ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಗೆಲುವಿನ ಲಯವನ್ನು ಕಾಯ್ದುಕೊಳ್ಳಲಿದೆ ಎಂಬ ನಿರೀಕ್ಷೆಯನ್ನು ಭಾರತದ ಕ್ರಿಕೆಟ್ ಪ್ರೇಮಿಗಳು ಇಟ್ಟುಕೊಂಡಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಭಾರತದ ತಂಡ ಪ್ರಪ್ರಥಮ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಡಲಿದೆ.
1.32 ಲಕ್ಷ ಪ್ರೇಕ್ಷಕರ ಒಟ್ಟಿಗೆ ಕೂತು ನೋಡುವಷ್ಟು ದೊಡ್ಡದಾಗಿರುವ ಮೊಟೆರಾ ಕ್ರಿಕೆಟ್ ಸ್ಟೇಡಿಯಂ ನಿನ್ನೆಯವರೆಗೆ ಸರ್ದಾರ ಪಟೇಲ್ ಸ್ಟೇಡಿಯಂ ಎಂದು ಕರೆಸಿಕೊಳ್ಳುತ್ತಿತ್ತು. ಅದರೆ, ಬುಧವಾರದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉದ್ಘಾಟನೆ ಮಾಡಿದ ನಂತರ ಅದನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಯಿತು.
ವಿಶ್ವದ ಎಲ್ಲಾ ಕ್ರಿಕೆಟ್ ಮೈದಾನಗಳು ವೃತ್ತಾಕಾರದಲ್ಲಿದ್ದರೆ, ಮೊಟೆರಾದ ಸ್ಟೇಡಿಯಂ ತತ್ತಿಯಾಕಾರದಲ್ಲಿದೆ. ಅದನ್ನು ಆ ಆಕಾರದಲ್ಲಿ ನಿರ್ಮಿಸಿರುವುದರ ಹಿಂದೆ ಕಾರಣವಿದೆ. ಈ ಸ್ಟೇಡಿಯಂನಲ್ಲಿ ಒಟ್ಟು 11 ಪಿಚ್ಗಳಿವೆ (6 ಕೆಂಪು ಮಣ್ಣು ಮತ್ತು 5 ಕಪ್ಪು ಮಣ್ಣಿನದು). ಟೆಸ್ಟ್ ಪಂದ್ಯವೊಂದು ಯಾವುದೇ ಪಿಚ್ ಮೇಲೆ ಆಡಿದರೂ ಬೌಂಡರಿಗಳ ಅಂತರ ಸಮನಾಗಿರಲಿದೆ. ಸಾಮಾನ್ಯವಾಗಿ ಬೇರೆ ಮೈದಾನಗಳಲ್ಲಿ ಇಂಥ ಸಮಾನತೆ ಇರುವುದಿಲ್ಲ.
.@ImIshant was felicitated by the Honourable President of India Shri Ram Nath Kovind & Honourable Home Minister of India Shri Amit Shah before the start of play here in Ahmedabad.@rashtrapatibhvn @AmitShah pic.twitter.com/7elMWDa9ye
— BCCI (@BCCI) February 24, 2021
ನರೇಂದ್ರ ಮೋದಿ ಸ್ಟೇಡಿಯಂ ಬಗ್ಗೆ ಮಾತಾಡಿದ ಗಂಗೂಲಿ, ಅದು ಇತಿಹಾಸವನ್ನು ಸೃಷ್ಟಿಸಲಿದೆ ಎಂದು ಹೇಳಿದರು. ‘ಭಾರತೀಯ ಕ್ರಿಕೆಟ್ ಇತಿಹಾಸದ ಬಹು ದೊಡ್ಡ ದಿನವಿದು. ಎಲ್ಲ ಸೌಕರ್ಯವಿರುವ ಸ್ಟೇಡಿಯಂ ನಮಗೆ ಲಭ್ಯವಾಗಿದೆ. ಮೊಟೆರಾ ಕ್ರೀಡಾಂಗಣ ಇತಿಹಾಸ ಸೃಷ್ಟಿಸಲಿದೆ. ಹಲವಾರು ಆಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್ಗಳು ಭಾರತದಲ್ಲಿ ನಡೆಯಲಿದ್ದು, ನಾವು ಹೆಚ್ಚಿನ ಸಂಖ್ಯೆಯ ಪಂದ್ಯಗಳನ್ನು ಮೊಟೆರಾ ಸ್ಟೇಡಿಯಂನಲ್ಲಿ ಆಯೋಜಿಸಬಹುದು’ ಎಂದು ಗಂಗೂಲಿ ಹೇಳಿದರು.
Will miss being at the stadium today ..what an effort it must have been to create this ..pink test was our dream and it's going be the 2nd one in india.hope to see full stands like last time. Under the leadership of Honble Prime minister @narendramodi Amit Shah @AmitShah .. pic.twitter.com/za7vdYHTN0
— Sourav Ganguly (@SGanguly99) February 24, 2021
ವಿಶ್ವ ಟೆಸ್ಟ್ ಚಾಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಬೇಕಾದರೆ, ಭಾರತ ಪ್ರಸಕ್ತ ಸರಣಿಯನ್ನು ಕನಿಷ್ಟ 2-1 ಅಂತರದಿಂದ ಗೆಲ್ಲಲೇಬೇಕು. ಆದರೆ ಭಾರತವೇನಾದರೂ ಒಂದು ಪಕ್ಷ ಒಂದು ಟೆಸ್ಟ್ ಸರಣಿ ಸೋತರೆ, ಅರ್ಹತೆ ಗಿಟ್ಟಿಸುವ ರೇಸ್ನಿಂದ ಹೊರಬೀಳುತ್ತದೆ. ಹಾಗೆಯೇ, ಇಂಗ್ಲೆಂಡ್ ಡಬ್ಲ್ಯುಟಿಸಿಗೆ ಅರ್ಹತೆ ಗಳಿಸಬೇಕಾದರೆ ಉಳಿದೆರಡು ಟೆಸ್ಟ್ಗಳನ್ನು ಗೆಲ್ಲಲೇಬೇಕು. ಈ ಸರಣಿಯು 1-1 ಇಲ್ಲವೇ 2-2 ರಲ್ಲಿ ಸಮವಾದರೆ, ಆಸ್ಟ್ರೇಲಿಯಾ ಫೈನಲ್ ತಲುಪಿಬಿಡುತ್ತದೆ.
ಇದನ್ನೂ ಓದಿ: India vs England Test Series: ಪಿಂಕ್ ಬಾಲ್ನೊಂದಿಗೆ ಇಳಿಸಂಜೆಯಲ್ಲಿ ಬ್ಯಾಟ್ ಮಾಡುವುದು ಕಷ್ಟ: ವಿರಾಟ್ ಕೊಹ್ಲಿ
Published On - 4:41 pm, Wed, 24 February 21