ಬೆಂಗಳೂರು: ಬಡತನದಲ್ಲಿ ಬೆಳೆದಿದ್ದೇನೆ, ಬಡವರ ಸೇವೆಗಾಗಿ ಹಣ ವಿನಿಯೋಗ ಮಾಡುತ್ತೇನೆ ಎಂದು ಕಾಂಗ್ರೆಸ್ (Congress) ಮುಖಂಡ ಕೆಜಿಎಫ್ ಬಾಬುಗೆ (KGF Babu) ಕಾಂಗ್ರೆಸ್ ಶಿಸ್ತು ಸಮಿತಿಗೆ 3 ಪುಟದ ಉತ್ತರ ಸಲ್ಲಿಕೆ ಮಾಡಿದ್ದಾರೆ. ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಕೆಜಿಎಫ್ ಬಾಬು ಹೇಳಿಕೆ ನೀಡಿದ ಹಿನ್ನೆಲೆ ಕಾಂಗ್ರೆಸ್ ಶಿಸ್ತು ಸಮಿತಿ ಕೆಜಿಎಫ್ ಬಾಬುಗೆ ನೋಟಿಸ್ ನೀಡಿತ್ತು.
ಈ ಸಂಬಂಧ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ಗೆ 3 ಪುಟದ ಉತ್ತರ ಸಲ್ಲಿಸಿದ್ದಾರೆ. ಸೇವಾ ಮನೋಭಾವದಿಂದ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೆ. ಪರಾಭವಗೊಂಡರೂ ರಾಜಕೀಯ ಅನುಭವ ಪಡೆದುಕೊಂಡಿದ್ದೇನೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವು ವರ್ಷದಿಂದ ನೆಲೆಸಿದ್ದೇನೆ. ಚಿಕ್ಕಪೇಟೆ ಕ್ಷೇತ್ರಕ್ಕೆ 350 ಕೋಟಿ ರೂಪಾಯಿ ಯೋಜನೆ ಸಿದ್ಧಪಡಿಸಿದ್ದೇನೆ ಎಂದು ಉತ್ತರ ನೀಡಿದ್ದಾರೆ.
ಮುಂದುವರೆದು ನನ್ನದೇ ಹಣ ವಿನಿಯೋಗಿಸಿ ಯೋಜನೆ ಅನುಷ್ಠಾನ ಮಾಡುವೆ. ಈ ವಿಚಾರ ಹೈಕಮಾಂಡ್ ಗಮನಕ್ಕೆ ತರಲು ಪ್ರಯತ್ನ ಮಾಡಿದ್ದೆ, ಆದರೆ ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶ ಸಿಗಲಿಲ್ಲ. ಆದ್ದರಿಂದ ಮಾಧ್ಯಮಗಳ ಮೂಲಕ ನಾಯಕರ ಗಮನ ಸೆಳೆದೆ. ಕಾಂಗ್ರೆಸ್ ಟಿಕೆಟ್ ಕೊಡಲಿ, ಬಿಡಲಿ ಸ್ಪರ್ಧಿಸುತ್ತೇನೆ ಎಂದು ಬಾಯ್ತಪ್ಪಿ ಹೇಳಿದೆ ಎಂದರು.
ನಾನು ಸವಾಲು ಹಾಕುವಷ್ಟ ದೊಡ್ಡವನಲ್ಲ, ಅಷ್ಟು ಬೆಳೆದಿಲ್ಲ. ನನ್ನ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಿದ್ದರೇ ಕ್ಷಮೆ ಕೇಳುವೆ. ತಪ್ಪು ತಿದ್ದಿಕೊಂಡು ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ