AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರ್ಮ್​ಗೆ ಮರಳಿದ ಕೊಹ್ಲಿ, ಆರ್​ಸಿಬಿಗೆ ರಾಜಸ್ತಾನ ವಿರುದ್ಧ ಸುಲಭ ಜಯ

ಸ್ಪಿನ್ನರ್​ಗಳಾದ ಯುಜ್ವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್ ಅವರ ಶ್ರೇಷ್ಠಮಟ್ಟದ ಬೌಲಿಂಗ್ ಮತ್ತು ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ 8 ವಿಕೆಟ್​ಗಳ ಸುಲಭ ಗೆಲುವು ಸಾಧಿಸಿ 2 ಅಂಕಗಳನ್ನು ತನ್ನದಾಗಿಸಿಕೊಂಡಿತು. ತನ್ನಲ್ಲಿರುವ ಅಗಾಧ ಪ್ರತಿಭೆಗೆ ಮತ್ತೊಂದು ಉದಾಹರಣೆ ನೀಡಿದ ಪಡಿಕ್ಕಲ್ ಅನಾವಶ್ಯಕ ಆವೇಶ ತೋರಿ ಔಟಾಗುವ ಮೊದಲು 45 ಎಸೆತಗಳಲ್ಲಿ 63ರನ್ (6X4 […]

ಫಾರ್ಮ್​ಗೆ ಮರಳಿದ ಕೊಹ್ಲಿ, ಆರ್​ಸಿಬಿಗೆ ರಾಜಸ್ತಾನ ವಿರುದ್ಧ ಸುಲಭ ಜಯ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 03, 2020 | 7:49 PM

Share

ಸ್ಪಿನ್ನರ್​ಗಳಾದ ಯುಜ್ವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್ ಅವರ ಶ್ರೇಷ್ಠಮಟ್ಟದ ಬೌಲಿಂಗ್ ಮತ್ತು ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ 8 ವಿಕೆಟ್​ಗಳ ಸುಲಭ ಗೆಲುವು ಸಾಧಿಸಿ 2 ಅಂಕಗಳನ್ನು ತನ್ನದಾಗಿಸಿಕೊಂಡಿತು.

ತನ್ನಲ್ಲಿರುವ ಅಗಾಧ ಪ್ರತಿಭೆಗೆ ಮತ್ತೊಂದು ಉದಾಹರಣೆ ನೀಡಿದ ಪಡಿಕ್ಕಲ್ ಅನಾವಶ್ಯಕ ಆವೇಶ ತೋರಿ ಔಟಾಗುವ ಮೊದಲು 45 ಎಸೆತಗಳಲ್ಲಿ 63ರನ್ (6X4 1X6) ಬಾರಿಸಿದ್ದರು. ಪಡಿಕ್ಕಲ್ ಮತ್ತು ಕೊಹ್ಲಿ ಎರಡನೇ ವಿಕೆಟ್​ಗೆ 99 ರನ್ ಸೇರಿಸಿದರು. ಡ್ರೀಮ್11 ಐಪಿಎಲ್​ನಲ್ಲಿ ಮೊದಲ ಅರ್ಧ ಶತಕ ಬಾರಿಸಿದ ಕೊಹ್ಲಿ (73* 53 7X4 2X6) ತಾನು ಮರಳಿ ಫಾರ್ಮ್​ಗೆ ಬಂದಿರುವ ಎಚ್ಚರಿಕೆಯನ್ನು ಬೇರೆ ತಂಡಗಳಿಗೆ ರವಾನಿಸಿದರು.

ಗೆಲುವಿಗೆ 155 ರನ್ ಮೊತ್ತದ ಬೆನ್ನಟ್ಟಿದ ಆರ್​ಸಿಬಿ ಬಹಳ ಬೇಗನೆ ಆರನ್ ಫಿಂಚ್ ವಿಕೆಟ್ ಕಳೆದುಕೊಂಡಿತು. ಆದರೆ ಕೊಹ್ಲಿ ಮತ್ತು ಪಡಿಕ್ಕಲ್ ಮುಂದಿನ 13 ಓವರ್​ಗಳವರೆಗೆ ವಿಕೆಟ್ ಬೀಳದಂತೆ ನೋಡಿಕೊಂಡರಲ್ಲದೆ ಗೆಲುವಿಗೆ ಅವಶ್ಯವಿದ್ದ ರನ್ ಗತಿಯನ್ನು ಯಾವುದೇ ಉದ್ವೇಗಕ್ಕೊಳಗಾಗದೆ ಕಾಯ್ದುಕೊಂಡರು. ಪಡಿಕ್ಕಲ್ ಔಟಾದ ನಂತರ ಆಡಲು ಬಂದ ಎಬಿ ಡಿ ವಿಲಿಯರ್ಸ್ ಅಜೇಯ 12 ಬಾರಿಸಿದರು.

ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ರಾಜಸ್ತಾನ್​ಗೆ ನಾಯಕ ಸ್ಟೀವೆನ್ ಸ್ಮಿತ್ ತಮ್ಮ ನಿರ್ಧಾರದ ಬಗ್ಗೆ ಪಶ್ಚತ್ತಾಪ ಪಟ್ಟುಕೊಳ್ಳುವಂಥ ಆರಂಭ ದೊರಕಿತು. ಖುದ್ದು ಸ್ಮಿತ್ ಕೇವಲ 5 ರನ್ ಗಳಿಸಿ ಇಸುರು ಉಡಾನಾಗೆ ವಿಕೆಟ್ ಒಪ್ಪಿಸಿದರು. ಅವರ ನಿರ್ಗಮನದ 5 ರನ್​ಗಳ ನಂತರ ಉತ್ತಮ ಸ್ಪರ್ಶದಲ್ಲಿ ಕಂಡುಬಂದ ಜಾಸ್ ಬಟ್ಲರ್ 22 ರನ್ (12 3×6) ಔಟಾದರು. ರಾಜಸ್ತಾನದ ಸ್ಕೋರ್ 31/2.

ಅದೇ ಸ್ಕೋರಿಗೆ ಟೀಮಿನ ಸ್ಟಾರ್ ಬ್ಯಾಟ್ಸ್​ಮನ್ ಮತ್ತು ಭರ್ಜರಿ ಫಾರ್ಮ್​ನಲ್ಲಿರುವ ಸಂಜು ಸ್ಯಾಮ್ಸನ್ ಕೂಡ ಔಟಾದಾಗ, ರಾಜಸ್ತಾನ ಒತ್ತಡಕ್ಕೆ ಸಿಕ್ಕಿಕೊಂಡಿತು. ಸತತ ವೈಫಲ್ಯಗಳಿಂದ ಕಂಗೆಟ್ಟಿರುವ ರಾಬಿನ್ ಉತ್ತಪ್ಪಗೆ ಇಂದು ರನ್ ಗಳಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಸದವಕಾಶ ದೊರೆತಿತ್ತು. ಅವರು ವೇಟಿಂಗ್ಗೇಮ್ ಆಡಿ ಅಪಾಯಕ್ಕೆ ಸಿಲುಕಿದ್ದ ರಾಯಲ್ಸ್ ಇನ್ನಿಂಗ್ಸ್​ಗೆ ಆಸರೆಯಾದದ್ದು ನಿಜವಾದರೂ ವೈಯಕ್ತಿಕವಾಗಿ ಕೇವಲ 17 ರನ್​ಗಳ (22 1X4) ಕಾಣಿಕೆ ನೀಡಿದರು. 4ನೇ ವಿಕೆಟ್​ಗೆ ಉತ್ತಪ್ಪ ಮತ್ತು ರಾಜಸ್ತಾನದ ಪರ ಟಾಪ್ ಸ್ಕೋರರ್ ಮಹಿಪಾಲ್ ಲೊಮ್ರೊರ್ 39 ರನ್​ಗಳನ್ನು ಸೇರಿಸಿದರು. 

ಈ ಬಾರಿಯ ಐಪಿಎಲ್​ನಲ್ಲಿ ಇವತ್ತೇ ಮೊದಲ ಬಾರಿಗೆ ಆಡಿದ ಲೊಮ್ರೊರ್ 39 ಎಸೆತಗಳಲ್ಲಿ 47 ರನ್ (1X4 3X6) ಗಳಿಸಿದರು. ಆರ್​ಸಿಬಿ ವಿರುದ್ಧ ಆಡಿದ ಪಂದ್ಯದಲ್ಲಿ ಪವರ್ ಹಿಟ್ಟಿಂಗ್​ನ ಪರ್ಫೆಕ್ಟ್ ಉದಾಹರಣೆ ಮೆರೆದಿದ್ದ ರಾಹುಲ್ ತೆವಾಟಿಯಾ ಇಂದು ತಲೆಗೆ ಪೆಟ್ಟು ತಿಂದರೂ 12 ಎಸೆತಗಳಲ್ಲಿ ಅಜೇಯ 24 ರನ್ ಬಾರಿಸುವುದರೊಂದಿಗೆ ಟೀಮಿನ ಮೊತ್ತ 150ರ ಗಡಿ ದಾಟುವುದನ್ನು ನೋಡಿಕೊಂಡರು. 

ಮತ್ತೊಮ್ಮೆ ಲೆಗ್​ಸ್ಪಿನ್ ಬೌಲಿಂಗ್​ನ ಉತ್ಕೃಷ್ಟ ಪ್ರದರ್ಶನ ನೀಡಿದ ಯುಜ್ವೇಂದ್ರ ಚಹಲ್ ತಮ್ಮ 4 ಓವರ್​ಗಳಲ್ಲಿ ಕೇವಲ 24 ರನ್ನೀಡಿ 3 ವಿಕೆಟ್ ಪಡೆದರು. ಅವರಷ್ಟೇ ಶ್ರೇಷ್ಠಮಟ್ಟದ ಬೌಲಿಂಗ್ ದಾಳಿ ನಡೆಸಿದ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆಯಲಿಲ್ಲವಾದರೂ 4 ಓವರ್​ಗಳಲ್ಲಿ ಬರೀ 20 ರನ್ ಮಾತ್ರ ನೀಡಿದರು.

 

 

Follow Us
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.