AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ಧೂಳ್​ ಸಿಟಿ.. ಮಳೆಗಾಲದಲ್ಲಿ ಗುಂಡಿ ಸಿಟಿ: ಚಿನ್ನದ ನಾಡು ಈಗ ಗುಂಡಿಗಳ ಬೀಡು

ಕೋಲಾರ: ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಬಂದರೇ ಅಲ್ಲಿನ ನದಿ ಹಾಗೂ ಕೆರೆಗಳು ತುಂಬಿ ತುಳುಕುತ್ತವೆ. ಮಲೆನಾಡಲ್ಲಿ ವರ್ಷಧಾರೆಯಾದರೆ ಜಲಪಾತಗಳು ಭೋರ್ಗರೆದು ಧುಮ್ಮಿಕ್ಕುತ್ತವೆ. ಇದರಿಂದ ಅಲ್ಲಿನ ಪ್ರದೇಶಗಳ ಪ್ರಕೃತಿ ಸೊಬಗು ಹೆಚ್ಚುತ್ತದೆ. ಆದರೆ, ಬಯಲು ಸೀಮೆ ಪ್ರದೇಶವಾದ ಕೋಲಾರದಲ್ಲಿ ಮಳೆ ಬಂದರೆ ರಸ್ತೆಗಳೆಲ್ಲಾ ಕೆರೆಗಳಾಗಿ, ಅದರಲ್ಲಿರುವ ಗುಂಡಿಗಳು ತುಂಬಿ ತುಳುಕುತ್ತವೆ. ಇದರಿಂದ ಇಲ್ಲಿನ ಪರಿಸ್ಥಿತಿ ಸ್ವರ್ಗ ಲೋಕದಂತೆ ಅಲ್ಲ ಬದಲಿಗೆ ನರಕ ಸದೃಶವಾಗಿ ಹೋಗುತ್ತದೆ. ಇದು ರಸ್ತೆಯೋ ಅಥವಾ ನೀರು ತುಂಬಿದ ಹಳ್ಳವೋ? ನೀರು ತುಂಬಿ ಹಳ್ಳಗಳಂತೆ […]

ಬೇಸಿಗೆಯಲ್ಲಿ ಧೂಳ್​ ಸಿಟಿ.. ಮಳೆಗಾಲದಲ್ಲಿ ಗುಂಡಿ ಸಿಟಿ: ಚಿನ್ನದ ನಾಡು ಈಗ ಗುಂಡಿಗಳ ಬೀಡು
KUSHAL V
| Edited By: |

Updated on: Sep 23, 2020 | 3:43 PM

Share

ಕೋಲಾರ: ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಬಂದರೇ ಅಲ್ಲಿನ ನದಿ ಹಾಗೂ ಕೆರೆಗಳು ತುಂಬಿ ತುಳುಕುತ್ತವೆ. ಮಲೆನಾಡಲ್ಲಿ ವರ್ಷಧಾರೆಯಾದರೆ ಜಲಪಾತಗಳು ಭೋರ್ಗರೆದು ಧುಮ್ಮಿಕ್ಕುತ್ತವೆ. ಇದರಿಂದ ಅಲ್ಲಿನ ಪ್ರದೇಶಗಳ ಪ್ರಕೃತಿ ಸೊಬಗು ಹೆಚ್ಚುತ್ತದೆ. ಆದರೆ, ಬಯಲು ಸೀಮೆ ಪ್ರದೇಶವಾದ ಕೋಲಾರದಲ್ಲಿ ಮಳೆ ಬಂದರೆ ರಸ್ತೆಗಳೆಲ್ಲಾ ಕೆರೆಗಳಾಗಿ, ಅದರಲ್ಲಿರುವ ಗುಂಡಿಗಳು ತುಂಬಿ ತುಳುಕುತ್ತವೆ. ಇದರಿಂದ ಇಲ್ಲಿನ ಪರಿಸ್ಥಿತಿ ಸ್ವರ್ಗ ಲೋಕದಂತೆ ಅಲ್ಲ ಬದಲಿಗೆ ನರಕ ಸದೃಶವಾಗಿ ಹೋಗುತ್ತದೆ.

ಇದು ರಸ್ತೆಯೋ ಅಥವಾ ನೀರು ತುಂಬಿದ ಹಳ್ಳವೋ? ನೀರು ತುಂಬಿ ಹಳ್ಳಗಳಂತೆ ಭಾಸವಾಗುತ್ತಿರುವ ರಸ್ತೆಗಳು. ಈ ರಸ್ತೆಗಳನ್ನ ಒಮ್ಮೆ ನೋಡಿದ್ರೆ ಇದು ಜಿಲ್ಲೆಯ ಮೂಲೆಯಲ್ಲಿ ಯಾವುದೋ ತೋಟಕ್ಕೋ ಅಥವಾ ಹೊಲಕ್ಕೋ ಸಂಪರ್ಕ ಕಲ್ಪಿಸುವ ಹಾದಿಯಂತೆ ಅನ್ನಿಸುತ್ತದೆ. ಆದರೆ, ವಾಸ್ತವವಾಗಿ ಇದು ಕೋಲಾರ ನಗರದಲ್ಲಿ ಕಂಡು ಬರುವ ದುಃಸ್ಥಿತಿ. ಹೌದು, ರಾಜ್ಯದ ಎಲ್ಲೆಡೆ ಮಳೆಯಾದರೆ ಜನ ಖುಷಿ ಪಡ್ತಾರೆ. ಆದ್ರೆ, ಕೋಲಾರ ನಗರದಲ್ಲಿ ಮಳೆಯಾದ್ರೆ ಜನ ಮಳೆರಾಯನಿಗೆ ಶಾಪ ಹಾಕ್ತಾರೆ. ಮಳೆ ಬಂದ್ರೆ ಸಾಕು ನಗರದಲ್ಲಿರುವ ರಸ್ತೆಗಳೆಲ್ಲಾ ನೀರು ತುಂಬಿಕೊಂಡು ಹಳ್ಳಕೊಳ್ಳಗಳಂತೆ ಕಾಣುತ್ತದೆ.

ಇನ್ನು ಹಲವೆಡೆ ರಸ್ತೆಗಳನ್ನ ಅಮೃತ್ ಸಿಟಿ ಹೆಸರಲ್ಲಿ ಅಗೆದು ಹಾಳು ಮಾಡಿರುವುದರಿಂದ ನಗರದ ರಸ್ತೆಗಳೆಲ್ಲಾ ಸಂಪೂರ್ಣವಾಗಿ ಹಾಳಾಗಿವೆ. ಇದರಿಂದ ವಾಹನ ಸವಾರರಿಗೆ ಬೆನ್ನು ಮತ್ತು ಸೊಂಟ ನೋವು ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾಗಿದೆ. ಹೊಸ ಬೈಕ್​ಗಳು ಕೂಡ ಈ ಹಾಳಾದ ರಸ್ತೆಗಳಲ್ಲಿ ಹಾದು ಹೋದರೆ ಗ್ಯಾರೇಜ್ ಸೇರೋದಂತೂ ಗ್ಯಾರಂಟಿ. ಹೀಗಾಗಿ, ಸ್ಥಳೀಯರು ಪ್ರತಿನಿತ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತಿದ್ದಾರೆ. ನಗರದ ರಸ್ತೆಗಳದ್ದೆಲ್ಲಾ ಇದೇ ಕಥೆ ಕೋಲಾರ ನಗರಕ್ಕೆ ಎಂಟ್ರಿಕೊಡುತ್ತಿದ್ದಂತೆ APMC ಮಾರುಕಟ್ಟೆಯಿಂದ ಹಿಡಿದು ಟಮಕದವರೆಗೂ ಇದೆ ಸಮಸ್ಯೆ. ಹೊಸ ಬಸ್ ನಿಲ್ದಾಣ ವೃತ್ತ, ಕ್ಲಾಕ್​ ಟವರ್, ಡೂಂ ಲೈಟ್ ಸರ್ಕಲ್​, ETCM ಸರ್ಕಲ್​, ಬೆಸ್ಕಾಂ ಕಚೇರಿ ಸೇರಿದಂತೆ ಚಿಕ್ಕಬಳ್ಳಾಪುರ ರಸ್ತೆವರೆಗೂ ಬೃಹತ್ ಹೊಂಡಗಳು ನಿರ್ಮಾಣವಾಗಿವೆ. ಇನ್ನೂ ಮಹಾಲಕ್ಷ್ಮಿ ಬಡಾವಣೆಯ ಬೆಂಗಳೂರು ಚೆನ್ನೈ ಮುಖ್ಯರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದುರಂತವೆಂದರೆ ಕೋಲಾರ ಶಾಸಕ ಕೆ. ಶ್ರೀನಿವಾಸಗೌಡರ ಮನೆಯ ಮುಂದೆಯೇ ಇಂಥ ಪರಿಸ್ಥಿತಿ ನಿರ್ಮಾಣವಾಗಿದ್ರೂ ರಸ್ತೆ ಸರಿಪಡಿಸುವ ಕೆಲಸವಾಗುತ್ತಿಲ್ಲ. ಇದೀಗ, ಜನರು ರಸ್ತೆಯಲ್ಲಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುತ್ತಿದ್ದಾರೆ. ನಗರದ ಬಹುತೇಕ ರಸ್ತೆಗಳದ್ದು ಇದೆ ಪರಿಸ್ಥಿತಿ.

‘ಇನ್ನೆರಡು ತಿಂಗಳಲ್ಲಿ ರಸ್ತೆಗಳನ್ನು ಸರಿಪಡಿಸುತ್ತೇವೆ’ ಈ ಮಧ್ಯೆ ಅಧಿಕಾರಿಗಳನ್ನ ಕೇಳಿದರೆ ರಸ್ತೆಗಳು ಹಾಳಾಗಿರುವುದು ನಿಜ. ಆದ್ರೆ ಕೊವಿಡ್​ನಿಂದ ಯಾವುದೇ ಅನುದಾನ ಬರದ ಹಿನ್ನೆಲೆಯಲ್ಲಿ ರಸ್ತೆ ಮಾಡಲಾಗಿರಲಿಲ್ಲ. ಈಗ ಅನುದಾನ ಬಂದಿದ್ದು ಕೆಲವೇ ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣ ಮಾಡೋದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಒಟ್ನಲ್ಲಿ, ಬೇಸಿಗೆಯಲ್ಲಿ ಚಿನ್ನದ ನಾಡು ಕೋಲಾರ ಧೂಳ್ ಸಿಟಿಯಾದ್ರೆ, ಮಳೆಗಾಲದಲ್ಲಿ ಹಳ್ಳ ಗುಂಡಿಗಳಿಂದ ಕೂಡಿದ ಸಿಟಿಯಾಗುತ್ತದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ನಗರವನ್ನು ಅಭಿವೃದ್ಧಿಪಡಿಸಲಿ ಅನ್ನೋದು ಸ್ಥಳೀಯರ ಬೇಡಿಕೆ. -ರಾಜೇಂದ್ರ ಸಿಂಹ