ಬೆಂಗಳೂರು: ಕರೆಂಟ್ ಬಿಲ್ ಉಳಿಸಲು ಮಾಲೀಕರು ಮಾಡಿದ ಎಡವಟ್ಟು ಐಡಿಯಾದಿಂದ ಈಗ ಮಾಲೀಕರು ಪೇಚಿಗೆ ಸಿಲುಕಿದಂತಾಗಿದೆ. ಮೇನ್ ಸ್ವಿಚ್ ಆಫ್ ಮಾಡಿ ಮಾಲೀಕರು ಮನೆಗೆ ಹೋಗುತ್ತಿದ್ದಂತೆ ಖತರ್ನಾಕ್ ಕಳ್ಳನೊಬ್ಬ ಅಂಗಡಿಗಳಿಗೆ ನುಗ್ಗಿ ಕಳ್ಳತನ ಎಸಗಿರುವ ಘಟನೆ ಬೆಂಗಳೂರು ಹೊರವಲಯದ ಬಾಗಲೂರಿನಲ್ಲಿ ನಡೆದಿದೆ. ಮೇನ್ ಸ್ವಿಚ್ ಆಫ್ ಮಾಡುತ್ತಿದ್ದಂತೆ ಸಿಸಿ ಕ್ಯಾಮರಾ ಕೂಡ ಆಫ್ ಆಗುತ್ತೆ. ಇದನ್ನೇ ಬಂಡವಾಳ ಮಾಡ್ಕೊಂಡ ಖತರ್ನಾಕ್ ಖದೀಮ ಒಂದೇ ವಾರದಲ್ಲಿ ಒಂದೇ ಏರಿಯಾದ 4 ಶಾಪ್ ಕಳ್ಳತನ ಮಾಡಿದ್ದಾನೆ.
ಕರೆಂಟ್ ಸೇವ್ ಆಗುತ್ತೆ ಎಂದು ಅಂಗಡಿ ಮಾಲೀಕರು ಪವರ್ ಮೇನ್ ಸ್ವಿಚ್ ಆಫ್ ಮಾಡಿ ಮನೆಗೆ ಹೋಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ರಾತ್ರಿಯಾಗ್ತಿದ್ದಂತೆ ಎಚ್ಚರಗೊಳ್ಳುತ್ತಿದ್ದ ಈ ಖತರ್ನಾಕ್ ಕಳ್ಳ ದಿನಸಿ ಅಂಗಡಿ, ಮೆಡಿಕಲ್, ಮೊಬೈಲ್ ಶಾಪ್, ಹಾರ್ಡ್ವೇರ್ ಶಾಪ್ಗಳಿಗೆ ನುಗ್ಗಿ ಕೈಗೆ ಸಿಕ್ಕದನ್ನು ದೋಚಿದ್ದಾನೆ. ಆದ್ರೆ ಹಾರ್ಡ್ ವೇರ್ ಶಾಪ್ನ ಸಿಸಿಟಿವಿಯಲ್ಲಿ ಮಾತ್ರ ಕಳ್ಳನ ಕೈ ಚಳಕ ಸೆರೆಯಾಗಿದ್ದು ಕೊನೆಗೂ ಖದೀಮನ ಸುಳಿವು ಸಿಕ್ಕಿದೆ.
ಈ ಕಳ್ಳ ಸುಮಾರು 50 ಸಾವಿರ ನಗದು ದೋಚಿದ್ದಾನೆ. ಮೊಬೈಲ್ ಶಾಪ್ನಲ್ಲಿ 1ಲಕ್ಷ ಮೌಲ್ಯದ ಮೊಬೈಲ್, ದಿನಸಿ ಅಂಗಡಿಯಲ್ಲಿ 10 ಸಾವಿರ ಮೌಲ್ಯದ ಸಿಗರೇಟ್, ಮೆಡಿಕಲ್ ಶಾಪ್ನಲ್ಲಿ ಕೋರೆಕ್ಸ್ ಸಿರಪ್ಗಳು , ಸಿರಿಂಜ್ಗಳು ಸೇರಿದಂತೆ ಕ್ಯಾಶ್ ಕಳ್ಳತನ ಮಾಡಿದ್ದಾನೆ. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿದ್ದು ಸದ್ಯ ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಕಳ್ಳನನ್ನು ಹಿಡಿಯಲು ಬಲೆ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಮೊಬೈಲ್ ಕಳ್ಳತನ: ಫೋನ್ ಕಳೆದುಹೋದರೆ ಏನು ಮಾಡಬೇಕು?
Published On - 7:51 am, Wed, 10 February 21