ಹಣ, ಒಡವೆ ಆಸೆಗೆ ಕೊಲೆ ಆರೋಪ; ಹಾಡಹಗಲೇ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು
ಹಾಡು ಹಗಲೇ ವೃದ್ಧ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ವಿನಾಯಕ ಬಡಾವಣೆಯಲ್ಲಿ ನಡೆದಿದೆ.
ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ಪಟ್ಟಣದ ವಿನಾಯಕ ಬಡಾವಣೆಯಲ್ಲಿ ಪ್ರಭಾಕರ ಶೆಟ್ರು (75), ಪತ್ನಿ ವಿಜಯಲಕ್ಷ್ಮೀ (65) ಎಂಬ ವೃದ್ಧ ದಂಪತಿ ವಾಸವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಮದುವೆಯಾಗಿದ್ದು, ಇನ್ನೂ ಜೀವನದಲ್ಲಿ ಯಾವುದೇ ಚಿಂತೆ ಇಲ್ಲದೇ ಹಾಯಾಗಿದ್ದರು. ಪ್ರಭಾಕರ ಶೆಟ್ರು ಸುಮಾರು ವರ್ಷಗಳಿಂದ ಅಡುಗೆ ಎಣ್ಣೆ ಮತ್ತು ಉಪ್ಪು ಮಾರಾಟದ ವ್ಯಾಪಾರ ಮಾಡಿಕೊಂಡಿದ್ದರು. ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಯಾರ ವಿರೋಧವನ್ನೂ ಕಟ್ಟಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದರು.
ಇಂತಹ ಸಂದರ್ಭದಲ್ಲೇ ದಂಪತಿ ಮೇಲೆ ದುಷ್ಕರ್ಮಿಗಳ ಕಣ್ಣು ಬಿದ್ದಿದೆ. ಡಿ. 1 ರಂದು ರಾತ್ರಿ 8 ಗಂಟೆ ಸುಮಾರಿಗೆ ಕ್ರೂರಿಗಳು ದಂಪತಿಯ ಮನೆಗೆ ನುಗ್ಗಿ ದಂಪತಿಯ ಕತ್ತುಕೊಯ್ದು ಭೀಕರವಾಗಿ ಕೊಲೆಗೈದ್ದಾರೆ. ನಂತರ ಪ್ರಭಾಕರ ಶೆಟ್ರು ಕೊರಳಲ್ಲಿದ್ದ ಚಿನ್ನದ ಸರ ಮತ್ತು ವಿಜಯಲಕ್ಷ್ಮೀ ಮೈಮೇಲಿದ್ದ ಸುಮಾರು ಐದು ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಅಂತೆಯೇ ಮನೆಯಲ್ಲಿದ್ದ ಹಣ ದೋಚಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಇನ್ನೂ ಕೊಲೆ ನಡೆದಿರುವ ವಿನಾಯಕ ಬಡಾವಣೆಯಿಂದ ಕೂಗಳತೆ ದೂರದಲ್ಲೇ ಹೊಸದುರ್ಗ ಪೊಲೀಸ್ ಠಾಣೆಯಿದೆ. ಪಟ್ಟಣದ ಹೃದಯಭಾಗದಲ್ಲಿರುವ ಬಡಾವಣೆಯಲ್ಲೇ ದಂಪತಿಯ ಕೊಲೆ ನಡೆದಿದೆ. ಡಿ.1 ರಂದು ಮಧ್ಯಾಹ್ನ ಚಿಕ್ಕನಾಯಕನಹಳ್ಳಿ ಹಾಗೂ ದಾವಣಗೆರೆಯಲ್ಲಿರುವ ಸಂಬಂಧಿಕರು ದಂಪತಿಗೆ ಫೋನ್ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಇದರಿಂದ ಗಾಬರಿಗೊಂಡ ಸಂಬಂಧಿಕರು ಸಂಜೆ ವೇಳೆಗೆ ಪಕ್ಕದ ಮನೆಯವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ.
ಆಗ ಅಕ್ಕಪಕ್ಕದವರು ದಂಪತಿಯ ಮನೆಯೊಳಗೆ ಹೋಗಿ ನೋಡಿದಾಗ ಹತ್ಯೆ ವಿಚಾರ ಬಯಲಾಗಿದೆ. ಹೀಗಾಗಿ, ಹಾಡು ಹಗಲಲ್ಲೇ ಕೊಲೆ ನಡೆದಿದೆಯೇ ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಹಂತಕರಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂಬುದು ಮೃತರ ಪುತ್ರಿಯ ಆಗ್ರಹಿಸುತ್ತಿದ್ದಾರೆ.
ಒಟ್ಟಾರೆಯಾಗಿ ವೃದ್ಧಾಪ್ಯದಲ್ಲಿ ಇಬ್ಬರೇ ಹಾಯಾಗಿ ಬದುಕುತ್ತಿದ್ದ ದಂಪತಿ ಮೇಲೆ ಅದ್ಯಾರ ಕೆಂಗಣ್ಣು ಬಿದ್ದಿತ್ತೋ ಗೊತ್ತಿಲ್ಲ. ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಲು ದುಷ್ಕರ್ಮಿಗಳು ವೃದ್ಧ ದಂಪತಿಯ ಬಲಿ ಪಡೆದರೇ ಎಂಬ ಅನುಮಾನ ಮೂಡಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿ ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಿ ತಕ್ಕ ಶಿಕ್ಷೆ ವಿಧಿಸಬೇಕಿದೆ.
ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ
ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 pm, Sat, 3 December 22