ನಿನ್ನ ಮೂಲ ಆಸ್ತಿ ಕೇವಲ 2.5 ಎಕರೆ.. ಆದ್ರೆ ಈಗ ಇಷ್ಟೊಂದು ಸಂಪತ್ತು ಎಲ್ಲಿಂದ ಬಂತು? ಕೋಡಿಹಳ್ಳಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಕೋಡಿಹಳ್ಳಿ ಆದಾಯದ ಮೂಲವನ್ನು ಬಹಿರಂಗ ಮಾಡಲಿ, ಅವರು 200 ಜನರಿಗೆ ಸೈಟ್ ಕೊಡಿಸುವುದಾಗಿ ಮೋಸ ಮಾಡಿದ್ದಾರೆ. ಮನೆ ನಿರ್ಮಿಸಿ ಕೊಡೋದಾಗಿ 3ರಿಂದ 6 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಭೈರಯ್ಯ ಎಂಬುವರಿಗೆ ಸೊಸೈಟಿಯಿಂದ ಸೈಟ್ ಮಂಜೂರು ಮಾಡುವುದಾಗಿ ಹಣ ಪಡೆದು ಇಂದು ನಾಳೆ ಎಂದು ಗೂಂಡಾಗಿರಿ ಮಾಡಿದ್ದಾರೆ ಎಂದು ಆರೋಪಿಸಿದ ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು: ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ನಕಲಿ ಹೋರಾಟಗಾರ. ಅಂದಿನ ಕಾಂಗ್ರೆಸ್ ಸರ್ಕಾರ ಕೋಡಿಹಳ್ಳಿಯನ್ನ ರಕ್ಷಿಸಿತ್ತು. ಅದಕ್ಕಾಗಿಯೇ ಅವರು ಕಾಂಗ್ರೆಸ್ ಸರ್ಕಾರ ಇದ್ದಾಗ ತುಟಿ ಬಿಚ್ಚಲಿಲ್ಲ. ಈಗ ಐಷಾರಾಮಿ ಜೀವನ ನಡೆಸ್ತಿದ್ದಾರೆ. ಆದರೆ, ಬೇರೆಯವರ ಮುಂದೆ ತಾನು ಗದ್ದೆ ನಾಟಿ ಮಾಡಿದ್ದೇನೆ, ಉತ್ತಿದ್ದೇನೆ, ಬಿತ್ತಿದ್ದೇನೆ, ಟ್ರ್ಯಾಕ್ಟರ್ ಓಡಿಸಿದ್ದೇನೆ ಅಂತೆಲ್ಲಾ ಹೇಳಿಕೊಳ್ತಾರೆ. ಅವರು ಹೊಲ ಉತ್ತುವವರಲ್ಲ, ಬ್ಲ್ಯಾಕ್ಮೇಲ್ ಮಾಡೋರು ಎಂದು ಕೋಡಿಹಳ್ಳಿ ವಿರುದ್ಧ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಕೋಡಿಹಳ್ಳಿ ಆದಾಯದ ಮೂಲವನ್ನು ಬಹಿರಂಗ ಮಾಡಲಿ, ಅವರು 200 ಜನರಿಗೆ ಸೈಟ್ ಕೊಡಿಸುವುದಾಗಿ ಮೋಸ ಮಾಡಿದ್ದಾರೆ. ಮನೆ ನಿರ್ಮಿಸಿ ಕೊಡೋದಾಗಿ ತಲಾ 3ರಿಂದ 6 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಭೈರಯ್ಯ ಎಂಬುವರಿಗೆ ಸೊಸೈಟಿಯಿಂದ ಸೈಟ್ ಮಂಜೂರು ಮಾಡುವುದಾಗಿ ಹಣ ಪಡೆದು ಇಂದೂ-ನಾಳೆ ಎಂದು ಗೂಂಡಾಗಿರಿ ಮಾಡಿದ್ದಾರೆ. ಈ ಕುರಿತು ದೂರು ಸಹ ದಾಖಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್.. ನಿನ್ನ ಮೂಲ ಆಸ್ತಿ ಕೇವಲ ಎರಡೂವರೆ ಎಕರೆಯಷ್ಟು ಇದೆ. ಆದರೆ ಈಗ ಇಷ್ಟೊಂದು ಸಂಪತ್ತು ಎಲ್ಲಿಂದ ಬಂತು? ನೀನು ಸತ್ಯ ಹರಿಶ್ಚಂದ್ರ ಆಗಿದ್ದರೆ ಇದಕ್ಕೆ ಉತ್ತರ ಕೊಡು. ಮಂಡ್ಯ, ಮೈಸೂರು ಸೇರಿ ರಾಜ್ಯಾದ್ಯಂತ ರೈತರ ಸಾವಾಯ್ತು. ಆಗ ಮೃತಪಟ್ಟ ರೈತರ ಕುಟುಂಬಗಳಿಗೆ ಸಾಂತ್ವನ ಏಕೆ ಹೇಳಲಿಲ್ಲ? ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ನೀನು ತುಟಿ ಬಿಚ್ಚಲಿಲ್ಲ ಎಂದು ಏಕವಚನದಲ್ಲಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.