ಭೀಕರ ಅಪಘಾತದಲ್ಲಿ ಮೃತಪಟ್ಟ ಗೆಳತಿಯರಿಗೆ ಕುಂಚ ನಮನ
ಜನವರಿ 15 ರ ಬೆಳಗಿನ ಜಾವದಲ್ಲಿ ನಡೆದ ಭೀಕರ ಅಪಘಾತಕ್ಕೆ ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಸಾಕ್ಷಿಯಾಗಿತ್ತು. ಗೋವಾ ಕಡೆಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್ಗೆ ಎದುರಿನಿಂದ ಬಂದಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ 9 ಮಹಿಳೆಯರು ಸೇರಿ ಹನ್ನೊಂದು ಜನರು ಮೃತಪಟ್ಟಿದ್ದರು.
ಧಾರವಾಡ: ಖುಷಿಖುಷಿಯಾಗಿ ಗೋವಾ ಕಡೆಗೆ ಪ್ರಯಾಣಿಸುತ್ತಿದ್ದ ಮಹಿಳೆಯರು ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಗೆ ಇಡೀ ರಾಜ್ಯವೇ ಮರುಗಿದೆ. ಜಿಲ್ಲೆಯ ಜನರಂತೂ ಇಂದಿಗೂ ಅದೇ ಗುಂಗಿನಲ್ಲಿದ್ದಾರೆ. ಮೃತಪಟ್ಟವರಿಗೆ ನಾನಾ ಬಗೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಇದೀಗ ಕಲಾವಿದರ ಬಳಗ ಕೂಡ ಕುಂಚ ನಮನದೊಂದಿಗೆ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಅದೂ ಅಪಘಾತ ನಡೆದಿದ್ದ ಸ್ಥಳದಲ್ಲಿಯೇ ಅನ್ನೋದು ವಿಶೇಷ.
ಜನವರಿ 15 ರ ಬೆಳಗಿನ ಜಾವದಲ್ಲಿ ನಡೆದ ಭೀಕರ ಅಪಘಾತಕ್ಕೆ ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಸಾಕ್ಷಿಯಾಗಿತ್ತು. ಗೋವಾ ಕಡೆಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್ಗೆ ಎದುರಿನಿಂದ ಬಂದಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ 9 ಮಹಿಳೆಯರು ಸೇರಿ ಹನ್ನೊಂದು ಜನರು ಮೃತಪಟ್ಟಿದ್ದರು. ಘಟನೆ ನಡೆದು ಹಲವು ದಿನಗಳೇ ಕಳೆದಿವೆ. ಆದರೆ ಜಿಲ್ಲೆಯ ಜನರಿಗೆ ಇದನ್ನು ಜೀರ್ಣಿಸಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ.
ಇದೇ ಕಾರಣಕ್ಕೆ ನಾನಾ ರೀತಿಯಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕೆಲಸ ನಡೆಯುತ್ತಿದೆ. ಇದೀಗ ‘ನಂನಮ್ಮಂದಿ’ ಎನ್ನುವ ಕಲಾವಿದರ ಬಳಗ ಮೃತರ ಆತ್ಮಕ್ಕೆ ಶಾಂತಿ ಕೋರಿ ಘಟನಾ ಸ್ಥಳದಲ್ಲಿ ಕುಂಚ ನಮನ ಕಾರ್ಯಕ್ರಮ ನಡೆಸಿತು. ಜಿಲ್ಲೆಯ ಪ್ರಸಿದ್ಧ ಕಲಾವಿದರು ಅಲ್ಲಿಯೇ ಕುಳಿತು ಚಿತ್ರ ಬಿಡಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಜಾಗೃತಿ ಸಂದೇಶ ಬೆಳ್ಳಂಬೆಳಗ್ಗೆ ಸುಮಾರು 20ಕ್ಕೂ ಹೆಚ್ಚು ಕಲಾವಿದರು ಸ್ಥಳಕ್ಕೆ ಆಗಮಿಸಿದರು. ಬಳಿಕ ಘಟನೆ ನಡೆದ ಸ್ಥಳದಲ್ಲಿಯೇ ಕುಳಿತು ಚಿತ್ರ ಬಿಡಿಸಿದರು. ಕೆಲವರು ಮೃತ ಮಹಿಳೆಯರ ಚಿತ್ರ ಬಿಡಿಸಿದರೆ, ಮತ್ತೆ ಕೆಲವು ಕಲಾವಿದರು ಘಟನೆ ನಡೆದ ಸ್ಥಳದ ಚಿತ್ರ ಬಿಡಿಸಿದರು. ಇನ್ನೂ ಕೆಲವರು ಅಪಘಾತದ ತೀವ್ರತೆಯ ಚಿತ್ರ ಬಿಡಿಸಿ ಗಮನ ಸೆಳೆದರು. ಅಲ್ಲದೇ ಕೆಲ ಯುವ ಕಲಾವಿದರು ಮೃತ ಮಹಿಳೆಯರ ಕೊನೆಯ ಸೆಲ್ಫಿ ಚಿತ್ರ ಬಿಡಿಸಿ ಆತ್ಮಕ್ಕೆ ಶಾಂತಿ ಕೋರಿದರು. ಈ ಕಾರ್ಯಕ್ರಮ ಮೃತರಿಗೆ ಶಾಂತಿ ಕೋರುವುದಕ್ಕಷ್ಟೇ ಅಲ್ಲದೇ ಜನರಿಗೆ ತಿಳಿ ಹೇಳುವ ಕಾರ್ಯಕ್ರಮವೂ ಆಗಿತ್ತು. ವಾಹನವನ್ನು ಚಾಲನೆ ಮಾಡುವಾಗ ಜಾಗ್ರತೆಯಿಂದ ಇರಬೇಕು ಎನ್ನುವ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಾರಿದರು.
ಘಟನೆ ನಡೆದು ಹತ್ತು ದಿನಗಳು ಕಳೆದಿವೆ. ಘಟನೆಯಲ್ಲಿ ಗಾಯಗೊಂಡ ಅನೇಕರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆದಷ್ಟು ಬೇಗನೇ ಗುಣಮುಖರಾಗಲಿ ಅಂತಾನೂ ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು. ಒಟ್ಟಿನಲ್ಲಿ ಭೀಕರ ಅಪಘಾತಕ್ಕೆ ಸಾಕ್ಷಿಯಾಗಿದ್ದ ಈ ಸ್ಥಳ ಇಂದು ಕಲಾವಿದರ ಮಾನವೀಯ ಸ್ಪಂದನೆಗೂ ಕಾರಣವಾಗಿದ್ದಂತೂ ಸತ್ಯ.
ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು
ಧಾರವಾಡ ಅಪಘಾತದಲ್ಲಿ ಮೃತದೇಹ ಅದಲುಬದಲು: ನಾಯಿಮರಿ ಟ್ಯಾಟೂ ಸಹಾಯದಿಂದ ಮಹಿಳೆಯ ಶವ ಪತ್ತೆ
Published On - 1:32 pm, Sun, 24 January 21