Explainer | ನೀತಿ ಆಯೋಗದಿಂದ DigiBoxx ಕ್ಲೌಡ್ ಸ್ಟೋರೇಜ್ ಸೇವೆ; 100GBಗೆ ₹ 30

ನೀತಿ ಆಯೋಗದ ಡಿಜಿ ಬಾಕ್ಸ್ (DigiBoxx) ಕ್ಲೌಡ್ ಸ್ಟೋರೇಜ್ ಮತ್ತು ಫೈಲ್ ಶೇರಿಂಗ್ ಸೇವೆಯಲ್ಲಿ ಸ್ಮಾರ್ಟ್ ಟ್ಯಾಗ್ ಇರಲಿದ್ದು, ಯಾವುದೇ ಫೈಲ್​ನ್ನು ಸೆೆಕೆಂಡ್​ಗಳಲ್ಲಿ ಹುಡುಕಿ ತೆಗೆಯಬಹುದು. ಯಾವುದೇ ವ್ಯಕ್ತಿಗೆ ಡಾಕ್ಯುಮೆಂಟ್, ಫೋಟೊ ಅಥವಾ ವಿಡಿಯೊಗಳನ್ನು ತಮ್ಮ ಡಿವೈಸ್ ನಲ್ಲಿ ಮತ್ತೊಮ್ಮೆ ಡೌನ್​ಲೋಡ್ ಮಾಡದೆಯೇ ಶೇರ್ ಮಾಡಬಹುದು.

Explainer | ನೀತಿ ಆಯೋಗದಿಂದ DigiBoxx ಕ್ಲೌಡ್ ಸ್ಟೋರೇಜ್ ಸೇವೆ; 100GBಗೆ ₹ 30
ಡಿಜಿಬಾಕ್ಸ್
Rashmi Kallakatta

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 24, 2020 | 2:14 PM

ನೀತಿ ಆಯೋಗವು ಡಿಜಿಬಾಕ್ಸ್ (DigiBoxx) ಕ್ಲೌಡ್ ಸ್ಟೋರೇಜ್ ಸೇವೆ ಆರಂಭಿಸಿದೆ. ಆ ಕ್ಲೌಡ್ ಸ್ಟೋರೇಜ್ ಮತ್ತು ಫೈಲ್ ಶೇರಿಂಗ್ ಸೇವೆಯು ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ್ ಭಾರತ್’ ಪರಿಕಲ್ಪನೆಗೆ ಮತ್ತಷ್ಟು ಬಲ ನೀಡಲಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.

ಜೂನ್1, 2021ರಿಂದ ಅನ್​ಲಿಮಿಟೆಡ್ ಫೋಟೊ ಅಪ್​ಲೋಡ್ ಮಾಡುವ ಉಚಿತ ಸೇವೆ ರದ್ದುಗೊಳಿಸಲಿದೆ ಎಂದು ಗೂಗಲ್ ಸಂಸ್ಥೆ ವಾರಗಳ ಹಿಂದೆ ಹೇಳಿತ್ತು. ಇದರ ಬೆನ್ನಲ್ಲೇ ನೀತಿ ಆಯೋಗ ಡಿಜಿಬಾಕ್ಸ್ ಪರಿಚಯಿಸಿದೆ.

ಕೇವಲ ₹30 ಪಾವತಿಸಿದರೆ 100 ಜಿಬಿ ಕ್ಲೌಡ್ ಸ್ಟೋರೇಜ್​ ಮೆಮೊರಿ ಸಿಗಲಿದೆ. ಉಚಿತ ಅಕೌಂಟ್​ಗಳೂ ಲಭ್ಯವಿದ್ದು. ತಿಂಗಳಿಗೆ 20 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ ಮೆಮೊರಿ ಲಭ್ಯವಿದೆ. ನವೀನ ಮಾದರಿಯಲ್ಲಿ ನಾವು ಇದನ್ನು ತಯಾರಿಸಿದ್ದು ಅನೇಕ ಭಾರತೀಯ ಡೇಟಾ ಕಂಪನಿಗಳೊಂದಿಗೆ ಕೆಲಸ ಮಾಡಿದ್ದೇವೆ. ಅವರ ಸಹಕಾರದಿಂದಾಗಿ ಕಡಿಮೆ ಬೆಲೆಯಲ್ಲಿ ಸೇವೆ ಕೊಡಲು ಸಾಧ್ಯವಾಗಿದೆ ಎಂದು ಡಿಜಿಬಾಕ್ಸ್ ಸಿಇಒ ಅರ್ನಬ್ ಮಿತ್ರಾ ಹೇಳಿದ್ದಾರೆ.

ಮೇಕ್ ಇನ್ ಇಂಡಿಯಾ, ಸ್ಟೋರ್ ಇನ್ ಇಂಡಿಯಾ ಆಶಯದ ಮೊದಲ ವೇದಿಕೆ ಇದಾಗಿದ್ದು ಡಿಜಿಟಲ್ ಸ್ವತ್ತು ನಿರ್ವಹಣೆಯ ಸಾಸ್ (SaaS) ಉತ್ಪನ್ನವಾಗಿದೆ. ಇದು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಡೇಟಾ ಲೋಕಲೈಜೇಷನ್​ಗೆ ಆದ್ಯತೆ ನೀಡುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.

ಉಚಿತ ಬಳಕೆದಾರರಿಗೆ, ಫ್ರೀಲ್ಯಾನ್ಸರ್, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಮತ್ತು ವ್ಯವಹಾರ ಸಂಸ್ಥೆಗಳಿಗೆ ಇದು ವಿಭಿನ್ನ ಬೆಲೆ ಮತ್ತು ಅನುಕೂಲಗಳನ್ನು ನೀಡಲಿದೆ. ಡಿಜಿಬಾಕ್ಸ್‌ ಖಾತೆ ಹೊಂದದೇ ಇರುವವರಿಗೂ ಡಿಜಿಬಾಕ್ಸ್ ಮೂಲಕ ಕಳುಹಿಸಿದ ಫೈಲ್ ಸ್ವೀಕರಿಸಬಹುದಾಗಿದೆ. ಜಿಮೇಲ್ ಜತೆ ಸಮನ್ವಯ, ಒಬ್ಬರಿಗಿಂತ ಹೆಚ್ಚು ಬಳಕೆದಾರರೊಂದಿಗೆ ರಿಯಲ್ ಟೈಮ್ ಫೈಲ್ ಶೇರಿಂಗ್ ಸಾಧ್ಯತೆ, ವೆಬ್ ಡಾಕ್ಯುಮೆಂಟ್ ಪ್ರಿವ್ಯೂ ಮತ್ತು ಸ್ವಯಂಚಾಲಿತ ಅಕೌಂಟ್ ಬ್ಯಾಕಪ್ ಸೇರಿದಂತೆ ಹಲವು ವೈಶಿಷ್ಟ್ಯಗಳು ಇಲ್ಲಿರಲಿವೆ.

ಉಚಿತ ಪ್ಲಾನ್​ನಲ್ಲಿ 2 ಜಿಬಿ ಗರಿಷ್ಠ ಗಾತ್ರದ ಫೈಲ್ ಅಪ್​​ಲೋಡ್ ಮಾಡಲು ಅನುಕೂಲ ಮತ್ತು 20 ಜಿಬಿ ಕ್ಲೌಡ್​ ಸ್ಟೋರೇಜ್ ಇರಲಿದೆ. ಇದರಲ್ಲಿ ಜಿಮೇಲ್ ಇಂಟಗ್ರೇಷನ್ ಮತ್ತು ಅನಿಯಮಿತ ಎಕ್ಸ್ ಟರ್ನಲ್ ಕೊಲಾಬರೇಷನ್ ಲಭಿಸಲಿದೆ.

ವಾರ್ಷಿಕ ಮತ್ತು ಮಾಸಿಕ ಪ್ಲಾನ್ ಲಭ್ಯವಿದೆ. ವ್ಯಕ್ತಿ ಅಥವಾ ಫ್ರೀಲ್ಯಾನ್ಸರ್​ಗಳಿಗೆ ತಿಂಗಳಿಗೆ 30 ಪ್ಲಾನ್ ನಲ್ಲಿ 100 ಜಿಬಿ ಸ್ಟೋರೇಜ್ ಸಿಗಲಿದೆ. ಅಂದರೆ ವರ್ಷದಲ್ಲಿ 5 ಟಿಬಿ ಸ್ಟೋರೇಜ್ ಲಭಿಸಲಿದೆ. ಈ ಪ್ಲಾನ್​​ನಲ್ಲಿ ಗರಿಷ್ಠ 10 ಜಿಬಿ ಗಾತ್ರದ ಫೈಲ್ ಗಳನ್ನು ಅಪ್ ಲೋಡ್ ಮಾಡಬಹುದು.

ಸಣ್ಣ ಮತ್ತು ಮಧ್ಯಮ ಉದ್ಯಮದವರಿಗೆ ₹999ಗೆ 50 ಟಿಬಿ ಸ್ಟೋರೇಜ್ ಮತ್ತು ಗರಿಷ್ಠ 10 ಜಿಬಿ ಗಾತ್ರದ ಫೈಲ್ ಅಪ್​ಲೋಡ್ ಮಾಡಬಹುದು. 500 ಬಳಕೆದಾರರರಿಗೆ ಮಾತ್ರ ಈ ಪ್ಲಾನ್ ಲಭ್ಯವಾಗಿರುತ್ತದೆ. ವ್ಯಾಪಾರ ಸಂಸ್ಥೆಗಳಿಗೆ ಒಟ್ಟು ಸ್ಟೋರೇಜ್ ಗಾತ್ರವನ್ನು ಕಾನ್ಫಿಗರ್ ಮಾಡಬಹುದು ಮತ್ತು ಕ್ಲೌಡ್ ಸ್ಟೋರೇಜ್ ಪ್ಲಾನ್​​ಗಳನ್ನು ವೈಯಕ್ತೀಕರಿಸುವ ಆಯ್ಕೆ ಇದೆ. 500ಕ್ಕಿಂತಲೂ ಹೆಚ್ಚು ಬಳಕೆದಾರರಿಗೆ ಇದು ಲಭ್ಯವಾಗಲಿದೆ.

ಇತರ ವೈಶಿಷ್ಟ್ಯಗಳು

ಈ ಸೇವೆಯಲ್ಲಿ ಸ್ಮಾರ್ಟ್ ಟ್ಯಾಗ್ ಇರಲಿದ್ದು, ಯಾವುದೇ ಫೈಲ್​ನ್ನು ಸೆೆಕೆಂಡ್​ಗಳಲ್ಲಿ ಹುಡುಕಿ ತೆಗೆಯಬಹುದು. ಯಾವುದೇ ವ್ಯಕ್ತಿಗೆ ಡಾಕ್ಯುಮೆಂಟ್, ಫೋಟೊ ಅಥವಾ ವಿಡಿಯೊಗಳನ್ನು ತಮ್ಮ ಡಿವೈಸ್​ನಲ್ಲಿ ಮತ್ತೊಮ್ಮೆ ಡೌನ್​ಲೋಡ್ ಮಾಡದೆಯೇ ಶೇರ್ ಮಾಡಬಹುದು. ಕ್ರಾಸ್-ಫ್ಲಾಟ್​ಫಾರಂ ಬೆಂಬಲಿತ ಆಗಿರುವುದರಿಂದ ಬಳಕೆದಾರರು ಯಾವುದೇ ಫೈಲ್​​ನ್ನು ತಕ್ಷಣವೇ ಪಡೆದು ಎಡಿಟ್ ಮಾಡಬಹುದು.

ಅನುಮತಿ ಪಡೆದೇ ಮುಂದುವರಿಯುವ ಆಯ್ಕೆಗಳು ಬಳಕೆದಾರರಿಗೆ ಇರುತ್ತದೆ. ಒಂದು ವೇಳೆ ಫೈಲ್ ಕಳುಹಿಸುವಾಗ ತಪ್ಪಾದ ವಿಳಾಸ ಅಥವಾ ಬಳಕೆದಾರರಿಗೆ ಕಳುಹಿಸಿದ್ದರೆ ಅದನ್ನು ವಾಪಸ್ ಪಡೆಯಬಹುದು. ದೊಡ್ಡ ಗಾತ್ರದ ಫೈಲ್ ಶೇರ್ ಮಾಡಲು ಇನ್​ಸ್ಟಾ ಶೇರ್ ಎಂಬ ವೈಶಿಷ್ಟ್ಯ ಇಲ್ಲಿದೆ. ಬಳಕೆದಾರುರು ಡೇಟಾ (ಮಾಹಿತಿ) ಡಿಲೀಟ್ ಮಾಡಿದರೆ ಅದು 60 ದಿನಗಳ ಕಾಲ ಅಲ್ಲೇ ಇರಲಿದ್ದು ಬಳಕೆದಾರರು ಅಗತ್ಯವಿದ್ದರೆ ಅದನ್ನು ರಿಸ್ಟೋರ್ ಮಾಡಬಹುದು.

ಡಿಜಿಬಾಕ್ಸ್ ಯಾವ ಫ್ಲಾಟ್ ಫಾರಂಗಳಲ್ಲಿ ಲಭ್ಯವಿದೆ ? ಡಿಜಿಬಾಕ್ಸ್ ಸದ್ಯ ಅಂಡ್ರಾಯ್ಡ್ ಫ್ಲಾಟ್​​ಫಾರಂನಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಸಂಸ್ಥೆ ಹೇಳಿದೆ. ಭಾರತೀಯ ಮೂಲಕ ಕ್ಲೌಡ್ ಸ್ಟೋರೇಜ್ ಸೇವೆಯು ಇದೀಗ ವೆಬ್​ಸೈಟ್​ನಲ್ಲಿ ಲಭ್ಯವಿದ್ದು , ಶೀಘ್ರದಲ್ಲಿಯೇ ಡೆಸ್ಕ್ ಟಾಪ್ ಆ್ಯಪ್ ಬರಲಿದೆ.

ಎಷ್ಟು ಸುರಕ್ಷಿತ?

ಇಲ್ಲಿ ಸಂಗ್ರಹವಾಗುವ ಎಲ್ಲ ಫೈಲ್​ಗಳು ಡೇಟಾಬೇಸ್ ಹಂತದಲ್ಲಿಯೇ ಗೂಢಲಿಪಿಗೆ (ಎನ್​ಕ್ರಿಪ್ಷನ್) ಪರಿವರ್ತನೆಗೊಂಡಿರುತ್ತವೆ. ಮಾಹಿತಿಯನ್ನು ಶೇಖರಿಸಿರುವ ಸರ್ವರ್​ಗಳು ದೇಶದೊಳಗೆಯೇ ಇರುತ್ತದೆ.  ಎಸ್ಎಸ್ಎಲ್  (SSL-Secure Sockets Layer) ಫೈಲ್ ಎನ್​ಕ್ರಿಪ್ಶನ್​ನ್ನೂ ಇದು ಬೆಂಬಲಿಸುತ್ತದೆ ಎಂದು ಕಂಪನಿ ಹೇಳಿದೆ.

ಡಿಜಿಬಾಕ್ಸ್ ಗೆ ಸೈನ್ ಇನ್ ಆಗುವುದು ಹೇಗೆ? ಉಚಿತ ಅಥವಾ ಪಾವತಿ ಮಾಡಿ ಬಳಸುವ ಡಿಜಿಬಾಕ್ಸ್ ಬಳಸಲು ಬಳಕೆದಾರರು ಖಾತೆ ತೆರೆಯಬೇಕು. ವೆಬ್​ಸೈಟ್ ತೆರೆದು ಅಲ್ಲಿ ಡಿಜಿಸ್ಪೇಸ್​​ಗಾಗಿ ನಿಮ್ಮ ಹೆಸರು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಮನೆ ವಿಳಾಸ, ರಾಜ್ಯ ಮತ್ತು ಇತರ ವಿವರಗಳನ್ನು ತುಂಬಬೇಕು.

ಸೈನ್ ಇನ್

ದರ ಪೈಪೋಟಿ ಹೇಗಿದೆ? ಸದ್ಯ ಗೂಗಲ್ 15ಜಿಬಿ ಉಚಿತ ಸ್ಟೋರೇಜ್ ನೀಡುತ್ತದೆ. ಇದರಲ್ಲಿ ಜೀಮೇಲ್, ಫೋಟೊ , ಡ್ರೈವ್ ಮತ್ತು ಇತರ ಸೇವೆಗಳು ಸೇರಿರುತ್ತವೆ . 100 ಜಿಬಿ ಕ್ಲೌಡ್ ಸ್ಟೋರೇಜ್ ಸ್ಪೇಸ್​​ಗಾಗಿ ಗೂಗಲ್ ಒನ್ ನಲ್ಲಿರುವ ಬೇಸಿಕ್ ಸಬ್ ಸ್ಕ್ರಿಪ್ಶನ್ (ಚಂದಾದಾರ) ತಿಂಗಳಿಗೆ ₹130 ಅಥವಾ ವಾರ್ಷಿಕ ₹ 1,300 ಆಗಿದೆ.

MEGA ಕ್ಲೌಡ್ ಸ್ಟೋರೇಜ್ ನಲ್ಲಿ 30 ದಿನಗಳಿಗೆ 50ಜಿಬಿ ಉಚಿತ ಸ್ಟೋರೇಜ್ ಸಿಗುತ್ತದೆ. ಒಂದು ತಿಂಗಳ ಬಳಕೆ ನಂತರ ಕಂಪನಿ 15 ಜಿಬಿ ಸ್ಪೇಸ್ ನೀಡುತ್ತದೆ. ಈ ಸೇವೆ ಬಳಸಲು ನೀವು ನಿಮ್ಮ ಬ್ಯಾಂಕ್ ಕಾರ್ಡ್ ವಿವರಗಳನ್ನು ಸಲ್ಲಿಸಬೇಕಾದ ಅಗತ್ಯವಿಲ್ಲ. ನಿಮ್ಮ ಚಾಟ್ ಮತ್ತು ಫೈಲ್ ಗಳನ್ನು ಪಾಸ್ ವರ್ಡ್ ಬಳಸಿ ಎನ್​​ಕ್ರಿಪ್ಟೆಡ್ ಆಗಿ ಇಡಬಹುದು. ಬೇಸಿಕ್ ಪ್ಲಾನ್ ತಿಂಗಳಿಗೆ ₹437 ಆಗಿದ್ದು ಈ ಪ್ಲಾನ್ ನಲ್ಲಿ 400 ಜಿಬಿ ಸ್ಟೋರೇಜ್ ಮತ್ತು ಗರಿಷ್ಠ 1 ಜಿಬಿ ಡೇಟಾ ಅಪ್​ಲೋಡ್ ಮಾಡಬಹುದು.

ಅಮೆಜಾನ್ ಪ್ರೈಮ್ ಸದಸ್ಯರಿಗೆ ಅನಿಯಮಿತ ಫೋಟೊ ಸಂಗ್ರಹಿಸಲಿಡುವ ಅವಕಾಶವಿದ್ದರೂ ವಿಡಿಯೊಗಳ ಸಂಗ್ರಹ ಸಾಮರ್ಥ್ಯ 5 ಜಿಬಿ ಮಾತ್ರ ಇರುತ್ತದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಅಮೆಜಾನ್ ಫೋಟೊಗಳ ಬಳಕೆ ಉಚಿತ ಇರುತ್ತದೆ. ಅಮೆಜಾನ್ ಪ್ರೈಮ್ ಸದಸ್ಯರು ಅಲ್ಲದವರಿಗೆ ಕೇವಲ 5 ಜಿಬಿ ಫೋಟೊ ಮತ್ತು ವಿಡಿಯೊ ಸ್ಟೋರೇಜ್ ಇರುತ್ತದೆ.

ಡೆಗೂ ( Degoo) ಕ್ಲೌಡ್ ಸ್ಟೋರೇಜ್ ಸರ್ವೀಸ್​ನಲ್ಲಿ 100 ಜಿಬಿ ಕ್ಲೌಡ್ ಸ್ಟೋರೇಜ್ ಇರುತ್ತದೆ. ಇಲ್ಲಿ ಎಲ್ಲ ಫೈಲ್​ಗಳು ಎಂಡ್ ಟು ಎಂಡ್ ಎನ್​ಕ್ರಿಪ್ಟೆಡ್ ಆಗಿರುತ್ತವೆ ಎಂದು ಕಂಪನಿ ಹೇಳಿದೆ. ಬೇಸಿಕ್ ಪ್ಲಾನ್ 500 ಜಿಬಿ ಗೆ ಮಾಸಿಕ 2.99 ಅಮೆರಿಕನ್ ಡಾಲರ್. ಆದಾಗ್ಯೂ, ಈ ಸೇವೆ ಬಳಸುವಾಗ ಜಾಹೀರಾತುಗಳು ಆಗಾಗ ಕಾಣಿಸಿಕೊಳ್ಳುತ್ತವೆ.

ಮೈಕ್ರೊಸಾಫ್ಟ್ ಒನ್​ಡ್ರೈವ್

ಫೈಲ್​ಗಳನ್ನು ಸಂಗ್ರಹಿಸಿಡಲು ಮತ್ತು ಸುಲಭವಾಗಿ ಶೇರ್ ಮಾಡಲು ಮೈಕ್ರೋಸಾಫ್ಟ್ ಒನ್​ಡ್ರೈವ್​ನಲ್ಲಿ ಸಾಧ್ಯಒನ್​ಡ್ರೈವ್ ಆನ್​ಲೈನ್ ಸ್ಟೋರೇಜ್​ ನಲ್ಲಿ ಫೈಲ್ ಅಥವಾ ಡಾಕ್ಯುಮೆಂಟ್ ಕ್ರಿಯೇಟ್ ಮಾಡುವುದು, ಅಪ್​ಲೋಡ್ ಮತ್ತು ಶೇರ್ ಮಾಡುವುದು ಸುಲಭ. ಇಲ್ಲಿ ಸಂಗ್ರಹವಾಗಿರುವ ಫೈಲ್​ಗಳನ್ನು ಡೆಸ್ಕ್​ಟಾಪ್, ಬ್ರೌಸರ್ ಅಥವಾ ಮೊಬೈಲ್​ನಲ್ಲಿಯೂ ಎಡಿಟ್ ಮಾಡಬಹುದಾಗಿದೆ. ಮೈಕ್ರೊಸಾಫ್ಟ್​ ಅಕೌಂಟ್​ ಕ್ರಿಯೇಟ್ ಮಾಡಿಕೊಂಡವರಿಗೆ 5 ಜಿಬಿ ಉಚಿತ ಸ್ಟೋರೇಜ್ ಸ್ಪೇಸ್ ಸಿಗುತ್ತದೆ. ಆಫೀಸ್ 365 ಚಂದಾದಾರರಿಗೆ 1 ಟಿಬಿ ವರೆಗಿನ ಸ್ಟೋರೇಜ್ ಸ್ಪೇಸ್ ಸಿಗುತ್ತದೆ.

How to.. series | ಇನ್​​ಸ್ಟಾ​ಗ್ರಾಮ್ ಖಾತೆ ಹ್ಯಾಕ್ ಆಗದಂತೆ ಕಾಪಾಡುವುದು ಹೇಗೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada